ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಕೆಬಿ ಬಡಾವಣೆಯ ಶಿವಪ್ಪಯ್ಯ ವೃತ್ತದಿಂದ ತ್ರಿಶೂಲ್ ಚಿತ್ರ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿ ಬಾಕ್ಸ್ ಚರಂಡಿ ಕಾಮಗಾರಿಯನ್ನು ಕೈಗೊಂಡಾಗಿನಿಂದಲೂ ಈ ಭಾಗದ ನಿವಾಸಿಗಳು ಶಾಪಗ್ರಸ್ಥರಂತೆ ಬಾಳುವೆ ಮಾಡುತ್ತಿದ್ದು, ತಮ್ಮದೇ ಮನೆ ಅಂಗಳಕ್ಕೆ ಇಳಿಯಲಾಗದ ಅಸಹಾಯಕ ಸ್ಥಿತಿ ತಲುಪಿದ್ದಾರೆ.
ಸ್ಥಳೀಯ ನಿವಾಸಿಗಳು ಮನೆಯಿಂದ ಹೊರ ಬರಲು, ಮನೆಯೊಳಗೆ ಹೋಗುವುದಕ್ಕೂ ಆಗದಂತೆ ಸುಮಾರು ಆರು ಅಡಿ ಅಗಲ, ನಾಲ್ಕೈದು ಅಡಿ ಆಳಕ್ಕೆ ಬಾಕ್ಸ್ ಚರಂಡಿಗಾಗಿ ಉದ್ದನೆಯ ಗುಂಡಿ ತೆಗೆದಿದ್ದನ್ನು ಬಿಟ್ಟರೆ ಇಂದಿಗೂ ಕಾಮಗಾರಿ ಮುಂದುವರಿಸುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದೇ ತ್ರಿಶೂಲ್ ಚಿತ್ರ ಮಂದಿರ ಕಡೆಗೆ ಸಾಗುವ ಎಡ ಭಾಗದಲ್ಲಿ ವಾಸಿಸುವ ವೃದ್ಧ ದಂಪತಿ ಮನೆಯಿಂದ ಹೊರ ಬರಲಾಗದ ಪರದಾಡುತ್ತಿದ್ದು, ಬಹುತೇಕ ಎಲ್ಲರ ಪರಿಸ್ಥಿತಿ ಇಲ್ಲಿ ಇದೇ ಆಗಿದೆ.ಮನೆ ಮುಂದೆ ತಮ್ಮದೇ ಸೈಕಲ್, ದ್ವಿಚಕ್ರ ವಾಹನಗಳನ್ನು ಬಿಡಲಾಗದ ಸ್ಥಿತಿ ಇದೆ.ಇನ್ನು ಕಾರುಗಳನ್ನು ಇಲ್ಲಿ ನಿಲ್ಲಿಸುವುದು ಕನಸಿನ ಮಾತಷ್ಟೇ. ಸದಾ ವಾಹನ ದಟ್ಟಣೆಯಿಂದ ಕೂಡಿರುವ ಈ ರಸ್ತೆಯು ಹಳೆ ಪಿಬಿ ರಸ್ತೆಯಿಂದ ಕೆಬಿ ಬಡಾವಣೆ, ಶಿವಪ್ಪಯ್ಯ ವೃತ್ತ, ಜಯದೇವ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಪಿಜೆ ಬಡಾವಣೆ ನಾನಾ ಭಾಗಕ್ಕೆ ಸಂಪರ್ಕಿಸುವ ಸದಾ ವಾಹನ, ಜನದಟ್ಟಣೆಯ ರಸ್ತೆ ಇದಾಗಿದ್ದು, ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರನ ಮಾಹಿತಿ ಇಲ್ಲದೇ ಜನರ ಪರದಾಟ ಮಾತ್ರ ನಿಂತಿಲ್ಲ.
ಪಾಲಿಕೆ, ದೂಡಾ, ಸ್ಮಾರ್ಟ್ ಸಿಟಿ, ಶಾಸಕರ ಅನುದಾನ, ಸಿಎಂ ಅನುದಾನವೋ ಹೀಗೆ ಯಾವ ಅನುದಾನದಡಿ ಇಲ್ಲಿ ಬಾಕ್ಸ್ ಚರಂಡಿ ನಿರ್ಮಿಸಲಾಗುತ್ತಿದೆ, ಕಾಮಗಾರಿ ವೆಚ್ಚ ಎಷ್ಟು, ಯಾರು ಕಾಮಗಾರಿ ಕೈಗೊಂಡಿದ್ದಾರೆಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸ್ಥಳೀಯ ಅಧಿಕಾರಿಗಳೂ ಸಹ ಜನರ ಸಮಸ್ಯೆಯನ್ನು ಆಲಿಸುವ ವ್ಯವದಾನ ತೋರುತ್ತಿಲ್ಲ. ಸದ್ಯಕ್ಕೆ ಪಾಲಿಕೆಯಲ್ಲೂ ಯಾವುದೇ ಆಡಳಿತ ಪಕ್ಷವಾಗಲೀ, ವಿಪಕ್ಷವಾಗಲೀ, ಸದಸ್ಯರಾಗಲೀ ಇಲ್ಲ.ತಮ್ಮ ಮನೆ ಮುಂದೆ ಚರಂಡಿ ಆಗುತ್ತದೆಂಬ ನಿರೀಕ್ಷೆಯಲ್ಲಿದ್ದ ಜನರು ಆದಷ್ಟು ಬೇಗ ಕಾಮಗಾರಿ ಮಾಡುತ್ತಾರೇನೋ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಬಾಕ್ಸ್ ಚರಂಡಿ ನಿರ್ಮಿಸಲು ಗುಂಡಿ ತೆಗೆಸಿದ್ದ ಗುತ್ತಿಗೆದಾರ ಮಾತ್ರ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವ ಗೋಜಿಗೆ ಹೋಗುತ್ತಿಲ್ಲ. ಪರಿಣಾಮ ಕಾವೇರಮ್ಮ ಶಾಲೆ ಮುಂಭಾಗದ ಸಾಲಿನುದ್ದಕ್ಕೂ ಅಂಗಡಿ, ಮನೆ ಮಾಲೀಕರು, ನಿವಾಸಿಗಳು ಅಂಗಡಿ ತೆಗೆಯಲಾಗದೇ, ಮನೆಯಿಂದ ಹೊರ ಬರಲಾಗದೇ ಚಡಪಡಿಸುವ ಸ್ಥಿತಿ ಸಾಮಾನ್ಯವಾಗಿದೆ.
ವೃದ್ಧರಂತೂ ತಮ್ಮ ಮನೆಯ ಅಂಗಳದಲ್ಲಿ ಆಳುದ್ದ-ಅಗಲದ ಗುಂಡಿಗಳನ್ನು ತೆಗೆದಿದ್ದು, ನಾವು ಮನೆಯಿಂದ ಹೊರಗೆ ಬರಲು, ಒಳ ಹೋಗಲೂ ಆಗದಷ್ಟು ಗುಂಡಿ ತೋಡಿದ್ದಾರೆ.