ಹೆಣ್ಣು ಮಕ್ಕಳ ಕಾವ್ಯ ಪಯಣ ಸುಖವಿಲ್ಲ; ಡಾ. ಮುಮ್ತಾಜ್ ಬೇಗಂ

KannadaprabhaNewsNetwork | Published : Mar 31, 2024 2:08 AM

ಸಾರಾಂಶ

ಹೆಣ್ಣುಮಕ್ಕಳ ಕಾವ್ಯ ಪಯಣ ಸುಖಕರವಿಲ್ಲ. ಅವರ ಬದುಕೇ ಒಂದರ್ಥದಲ್ಲಿ ಹೋರಾಟದಂತಿದೆ.

ಗುರುತಿನ ಕೊರತೆಗಳು ಎಂಬ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಪ್ಪಳ

ಹೆಣ್ಣುಮಕ್ಕಳ ಕಾವ್ಯ ಪಯಣ ಸುಖಕರವಿಲ್ಲ. ಅವರ ಬದುಕೇ ಒಂದರ್ಥದಲ್ಲಿ ಹೋರಾಟದಂತಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಹಿತ್ಯ ರಚನೆ ಅಷ್ಟು ಸುಲಭವಲ್ಲ ಎಂದು ಪ್ರಾಧ್ಯಾಪಕಿ ಡಾ. ಮುಮ್ತಾಜ್ ಬೇಗಂ ಹೇಳಿದರು.

ಲಿಖಿತ್-ರೀನಾ ಪ್ರಕಾಶನ, ಕೊಪ್ಪಳ ಹಾಗೂ ಲೇಖಕಿಯರ ಸಂಘ, ಕೊಪ್ಪಳ ಜಿಲ್ಲಾ ಶಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಅನ್ನಪೂರ್ಣ ಪದ್ಮಸಾಲಿಯವರ ಗುರುತಿನ ಕೊರತೆಗಳು ಎಂಬ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.

ಮಹಿಳೆಯರಿಗೆ ಅನೇಕ ಬಿಕ್ಕಟ್ಟುಗಳು, ತಲ್ಲಣಗಳು ಇರುತ್ತವೆ. ಇವುಗಳ ಮಧ್ಯೆ ಒಬ್ಬ ಹೆಂಗಸು ಸಾಹಿತ್ಯ ಕ್ಷೇತ್ರದಲ್ಲಿ ತೊಡಗುವುದಕ್ಕೆ ಅನೇಕ ಸವಾಲುಗಳಿರುತ್ತವೆ. ಅವುಗಳನ್ನು ಮೆಟ್ಟಿನಿಂತು ತಮ್ಮ ಬದುಕಿನಲ್ಲಿ ಅನುಭವಿಸಿದ ನೋವು-ನಲಿವುಗಳನ್ನು ಕಾವ್ಯ, ಕಥೆ ಮತ್ಯಾವುದೋ ಮಾಧ್ಯಮದ ಮೂಲಕ ಹೊರಹಾಕಬೇಕಿದೆ ಎಂದರು.

ಕೃತಿಯ ಕುರಿತು ಮಾತನಾಡಿದ ವಿಮರ್ಶಕ ನಾಗೇಶ ಜೆ. ನಾಯಕ್‌, ಈ ಕೃತಿಯಲ್ಲಿ ಲೇಖಕಿ ಭಾವನೆಗಳನ್ನು ಅಕ್ಷರಗಳ ಮೂಲಕ ಹೊರ ಹಾಕಿದ್ದಾರೆ. ಇದರಲ್ಲಿ ಹೆಣ್ಣಿನ ಶೋಷಣೆ, ಅನುಕಂಪ, ಆಕ್ರೋಶ, ಅನ್ನದಾತನ ಅಳಲು ಎಲ್ಲವೂ ಇವೆ. ಏನೇ ನೋವು-ಶೋಷಣೆಗಳಿದ್ದರೂ ಬದುಕಬೇಕೆಂಬ ಛಲ ಇದರಲ್ಲಿ ವ್ಯಕ್ತವಾಗಿದೆ ಎಂದರು.

ನಿವೃತ್ತ ಪ್ರಾಧ್ಯಪಕ ಡಿ.ಎಂ. ಬಡಿಗೇರ ಕಾರ್ಯಕ್ರಮ ಉದ್ಘಾಟಿಸಿದರೆ, ಪ್ರೊ. ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದರು. ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿಗಳಾದ ಎ.ಎಂ. ಮದರಿ, ಕಸಾಪದ ಅಧ್ಯಕ್ಷ ಭೀಮರಾಶಿ ಹೂಗಾರ ಹಾಗೂ ಕೃತಿಕಾರರಾದ ಅನ್ನಪೂರ್ಣ ಪದ್ಮಸಾಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್, ಅಶೋಕ ಓಜಿನಹಳ್ಳಿ, ಶಿಲ್ಪಾ ಕೃಷ್ಣ ಚಿತ್ರಗಾರ, ಭೀಮರಾಶಿ ಹೂಗಾರ ಮತ್ತು ಮಹೇಶ ಬಳ್ಳಾರಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಅನ್ನಪೂರ್ಣ ಮನ್ನಾಪುರ ಪ್ರಾರ್ಥಿಸಿದರು. ಮಹೇಶ ಬಳ್ಳಾರಿ ಸ್ವಾಗತಿಸಿ, ರಮೇಶ ಬನ್ನಿಕೊಪ್ಪ ವಂದಿಸಿದರು. ಶಿರಸಪ್ಪ ಗಡಾದ ಕಾರ್ಯಕ್ರಮ ನೆರವೇರಿಸಿದರು.

Share this article