ಶಿಗ್ಗಾಂವಿ: ಕನ್ನಡ ಕಾವ್ಯ ಎನ್ನುವದು ಒಂದು ಮಹಾನ್ ಶಕ್ತಿ, ಯಾರು ಏನೇ ತೆಗಳಿದರು ಏನೇ ಅಂದರು ಕೂಡ ಕಾವ್ಯಕ್ಕೆ ಇರುವ ಶಕ್ತಿಯನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಎಲ್ಲರೂ ಕವಿತೆಗಳನ್ನು ಓದುವ ಹವ್ಯಾಸ ಇರಬೇಕು, ಸಮಾಜ ಅದನ್ನು ಬೆಳೆಸಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು.
ದಿ. ಟಿ.ಬಿ. ಸೊಲಬಕ್ಕನವರ್ ಅವರ ಕಾರ್ಯವನ್ನು ನಿಜಕ್ಕೂ ನಾವು ಸ್ಮರಿಸಲೇಬೇಕು, ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ರಾಕ್ ಗಾರ್ಡನ್ ಮೂಲಕ ಕೊಡುಗೆ ಕೊಟ್ಟಿರುವುದು ಸ್ಮರಣಾರ್ಹ ಎಂದರು.
ಉತ್ಸವ ರಾಕ್ ಗಾರ್ಡನ್ ಕ್ಯುರೆಟರ್ ವೇದರಾಣಿ ಪ್ರಕಾಶ್ ದಾಸನೂರ ಮಾತನಾಡಿದರು. ಚನ್ನಪ್ಪ ಅಂಗಡಿ, ದೇವೇಂದ್ರಪ್ಪ ಜಾಜಿ, ಎ.ಎಸ್. ಮಕಂದರ್, ಮಂಜುಳಾ ತಿರುಗಾವಲು ಅವರಿಗೆ ಕನಕ ಶರೀಫ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಕ್ ಗಾರ್ಡನ್ ವತಿಯಿಂದ ಸಾಧಕರಾದ ಪ್ರಭಾಕರ್ ಭಟ್, ಕರಿಯಪ್ಪ ಹಂಚಿನಮನಿ, ಹರೀಶ್ ಮಾಳಪ್ಪನವರ್, ಉಮಾಪತಿ ಗಜಾನನ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಸಾಹಿತಿಗಳಾದ ರಾಜಶೇಖರ್ ಮಠಪತಿಯವರು ಸಾಧಕರನ್ನು ಸನ್ಮಾನಿಸಿ ಮಾತನಾಡಿದರು. ಸಾಹಿತಿ ಸತೀಶ್ ಕುಲಕರ್ಣಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ನಂತರ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಗಜಲ್ ಕವಿಗಳು ಗಜಲ್ ಕಾವ್ಯವನ್ನು ಪ್ರಸ್ತುತಪಡಿಸಿದರು. ರಮಜಾನ್ ಹೆಬಸೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ದೀಪಾ ಗೋನಾಳ ಕಾರ್ಯಕ್ರಮ ನಿರೂಪಿಸಿದರು.