ಕನ್ನಡಪ್ರಭ ವಾರ್ತೆ ಬೆಂಗಳೂರು
ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಉಂಟಾದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ.ಕುನ್ಹಾ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗದ ವರದಿಯನ್ನು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿದ್ದು, ವರದಿ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ನಿರ್ಧರಿಸಲಾಗಿದೆ.ಅನುಮತಿಯಿಲ್ಲದೆ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದಾಗಿ ಘೋಷಿಸಿದ್ದು ಹಾಗೂ ಪೊಲೀಸರು ಆಯೋಜಕರ ರೀತಿ ವರ್ತಿಸಿದ್ದೂ ದುರಂತಕ್ಕೆ ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ವರದಿಯಲ್ಲಿ ಏನಿದೆ?:ವಿಚಾರಣಾ ಆಯೋಗದ ವರದಿಯಲ್ಲಿ ಕಾಲ್ತುಳಿತಕ್ಕೆ ಕಾರಣ, ಅದಕ್ಕೆ ಕಾರಣಕರ್ತರ ಕುರಿತಂತೆ ವಿವರಗಳನ್ನು ನೀಡಲಾಗಿದೆ. ಒಟ್ಟು ಏಳು ಅಂಶಗಳ ಆಧಾರದಲ್ಲಿ ವರದಿ ಸಿದ್ಧಪಡಿಸಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯ, ಕೆಎಸ್‌ಸಿಎ, ಆರ್‌ಸಿಬಿ ಮತ್ತು ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಬೇಜವಾಬ್ದಾರಿಯಿಂದಲೇ ದುರ್ಘಟನೆ ಸಂಭವಿಸಿದೆ ಎಂದು ತಿಳಿಸಲಾಗಿದೆ.
ಅನುಮತಿಯಿಲ್ಲದೆ ಆಯೋಜನೆ:ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜನೆಗೆ ಸಂಬಂಧಿಸಿ ರಾಜ್ಯ ಸರ್ಕಾರ 2009ರಲ್ಲಿಯೇ ನಿಖರ ಆದೇಶ ಹೊರಡಿಸಿದೆ. ಅದರಂತೆ ಯಾವುದೇ ದೊಡ್ಡಮಟ್ಟದ ಕಾರ್ಯಕ್ರಮ ಆಯೋಜನೆಗೆ ಏಳು ದಿನಗಳ ಮುಂಚಿತವಾಗಿ ಸ್ಥಳೀಯ ಪೊಲೀಸರು ಸೇರಿದಂತೆ ಇನ್ನಿತರ ಪ್ರಾಧಿಕಾರದೊಂದಿಗೆ ಅನುಮತಿ ಪಡೆಯಬೇಕು. ಈ ವೇಳೆ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಬೇಕು, ಜನ ಸೇರುವ ಪ್ರಮಾಣವನ್ನೂ ತಿಳಿಸಬೇಕು ಎಂದಿದೆ. ಆದರೆ, ಕೆಎಸ್‌ಸಿಎ, ಆರ್‌ಸಿಬಿ ಮತ್ತು ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಸಂಸ್ಥೆಗಳು ಯಾವುದೇ ಪೂರ್ವಾನುಮತಿ ಪಡೆಯದೆ ಜು.4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭ್ರಮಾಚರಣೆ ನಡೆಯಲಿದೆ ಎಂದು ಘೋಷಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣ ದೊಡ್ಡ ಪ್ರಮಾಣದ ಜನ ಸೇರಿದಾಗ ನಿರ್ವಹಿಸುವಂತಹ ಪರಿಸ್ಥಿತಿಯಲ್ಲಿಲ್ಲ. ಕ್ರೀಡಾಂಗಣ ಪ್ರವೇಶ ದ್ವಾರಗಳು ಕಿರಿದಾಗಿದ್ದು, ದೊಡ್ಡ ಪ್ರಮಾಣದ ಜನರ ಸೇರುವುದಕ್ಕೆ ಅಸುರಕ್ಷಿತವಾಗಿದೆ. ಅಲ್ಲದೆ, ಆಯೋಜಕರು ಸರಿಯಾದ ಸಮಯದಲ್ಲಿ ಕ್ರೀಡಾಂಗಣದೊಳಗೆ ಜನರ ಪ್ರವೇಶಕ್ಕೆ ಅನುಮತಿಸದೆ, ಕ್ರೀಡಾಂಗಣದ ಹೊರಭಾಗದಲ್ಲಿಯೇ ನಿಲ್ಲುವಂತೆ ಮಾಡಿದ್ದಾರೆ. ಇದು ಕೂಡ ಕಾಲ್ತುಳಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.ಆಯೋಜಕರಾಗಿ ವರ್ತಿಸಿದ ಪೊಲೀಸರು:
ವರದಿಯಲ್ಲಿ ಪೊಲೀಸರ ವರ್ತನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭದ್ರತೆ ನೀಡುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. 515 ಮಂದಿ ಪೊಲೀಸರನ್ನು ಭದ್ರತೆಗೆ ನೇಮಕ ಮಾಡಲಾಗಿದ್ದರೆ, ಕ್ರೀಡಾಂಗಣದ ಹೊರಭಾಗ ಕೇವಲ 79 ಮಂದಿ ನಿಯೋಜಿಸಲಾಗಿತ್ತು. ಅಲ್ಲದೆ, ಪೊಲೀಸರು ಭದ್ರತೆ ಒದಗಿಸುವುದಕ್ಕಿಂತ ಆಯೋಜಕರೊಂದಿಗೆ ಆಯೋಜಕರಂತೆ ವರ್ತಿಸಿದ್ದಾರೆ. ಇದು ಭದ್ರತಾ ಲೋಪಕ್ಕೆ ಕಾರಣವಾಗಿದೆ. ಅಲ್ಲದೆ, ತುರ್ತು ಪರಿಸ್ಥಿತಿ ಎದುರಿಸುವುದಕ್ಕೆ ಅಗತ್ಯವಿರುವ ಯಾವುದೇ ಸೂಕ್ತ ಕ್ರಮಗಳನ್ನೂ ಕೈಗೊಂಡಿರಲಿಲ್ಲ, ನಿಯಂತ್ರಣ ಕೊಠಡಿ ಸಮರ್ಪಕವಾಗಿ ಕೆಲಸ ಮಾಡಿಲ್ಲ ಹಾಗೂ ಆಂಬ್ಯುಲೆನ್ಸ್ ಸೇರಿದಂತೆ ಇನ್ನಿತರ ತುರ್ತು ವಾಹನಗಳ ನಿಯೋಜನೆಯೂ ತೀರಾ ಕಡಿಮೆಯಿತ್ತು.ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಅಮಾನತಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಬಿ. ದಯಾನಂದ್ ಸೇರಿ ಇತರ ಐದು ಮಂದಿ ಪೊಲೀಸರ ಹೆಸರನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ ಅವರುಗಳು ಸಂಭ್ರಮಾಚರಣೆ ವೇಳೆ ದುರ್ಘಟನೆ ಸಂಭವಿಸಬಹುದು ಎಂಬುದನ್ನು ಅಂದಾಜಿಸದೇ, ತಾವು ಅನುಮತಿ ನೀಡದಿದ್ದರೂ ಕಾರ್ಯಕ್ರಮ ಆಯೋಜನೆಗೊಳ್ಳುವುದನ್ನು ತಡೆಯಲು ಸಾಧ್ಯವಾಗದ ಕುರಿತು ತಿಳಿಸಲಾಗಿದೆ. ಜತೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಕೊಹ್ಲಿ ಟ್ವೀಟ್ ಉಲ್ಲೇಖ:ವಿಜಯೋತ್ಸವ ಕುರಿತಂತೆ ಆರ್‌ಸಿಬಿ ಮಾಡಿದ ಟ್ವೀಟ್‌ನ್ನು ವಿರಾಟ್ ಕೊಹ್ಲಿ ಅವರು ಸಹ ಶೇರ್ ಮಾಡಿದ್ದು ಸಹ ಹೆಚ್ಚು ಜನರು ಬರಲು ಕಾರಣವಾಯಿತು ಎಂದು ವರದಿಯಲ್ಲಿ ಹೇಳಲಾಗಿದೆ.
-ಬಾಕ್ಸ್-ಕೆಎಸ್‌ಸಿಎ, ಆರ್‌ಸಿಬಿವಿರುದ್ದ ಕ್ರಮಕ್ಕೆ ಸೂಚನೆದುರ್ಘಟನೆಗೆ ಸಂಬಂಧಿಸಿ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್, ಮಾಜಿ ಕಾರ್ಯದರ್ಶಿ ಶಂಕರ್, ಮಾಜಿ ಖಜಾಂಚಿ ಜೈರಾಮ್, ಆರ್‌ಸಿಬಿ ಉಪಾಧ್ಯಕ್ಷ ರಾಜೇಶ್ ಮೆನನ್, ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಟಿ.ವೆಂಕಟರ್ ವರ್ಧನ್, ಉಪಾಧ್ಯಕ್ಷ ಸುನೀಲ್ ಮಾಥುರ್, ಎಡಿಜಿಪಿ ಬಿ. ದಯಾನಂದ್, ಐಜಿ ವಿಕಾಸ್ ಕುಮಾರ್ ವಿಕಾಸ್, ಡಿಸಿಪಿ ಶೇಖರ್ ಎಚ್.ತೆಕ್ಕಣ್ಣನವರ್, ಎಸಿಪಿ ಸಿ. ಬಾಲಕೃಷ್ಣ ಹಾಗೂ ಇನ್ಸ್‌ಪೆಕ್ಟರ್ ಗಿರೀಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.