ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಕಳೆದ ನಾಲ್ಕು ದಿನಗಳ ಹಿಂದೆ ಲೋಕಸಭಾ ಸದಸ್ಯ ಗೋವಿಂದ ಎಂ.ಕಾರಜೋಳ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ಮಹಿಳೆಯರು ಸಾರ್ವಜನಿಕರು ತೊಂದರೆ ಬಗ್ಗೆ ಮನವಿ ನೀಡಿದ್ದರು. ಮನವಿ ಸ್ವೀಕರಿಸಿದ ಗೋವಿಂದ ಕಾರಜೋಳ ಇಂದು ನೇರವಾಗಿ ಅವರೇ ಆಗಮಿಸಿ ಜನರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಜನಪರ ಕಾಳಜಿಯುಳ್ಳ ಸಂಸದರಲ್ಲಿ ಹಿರಿಯರಾದ ಗೋವಿಂದ ಕಾರಜೋಳ ಸಹ ಒಬ್ಬರಾಗಿದ್ದಾರೆ. ಇಲ್ಲಿನ ಪರಿಸ್ಥಿತಿಯ ಬಗ್ಗೆ ಈಗಾಗಲೇ ಸಂಸದರಿಗೆ ಸಂಪೂರ್ಣ ಮಾಹಿತಿ ಇದ್ದು ಈ ಭಾಗದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ನಾನು ಸಹ ನಿಮ್ಮೆಲ್ಲರ ಪರವಾಗಿ ಮನವಿ ಮಾಡುತ್ತೇನೆಂದರು.
ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ, ಈ ಭಾಗದ ಜನರ ಅಭಿಪ್ರಾಯ ಪಡೆದು ಸಂಬಂಧಪಟ್ಟ ಅಧಿಕಾರಿಗಳು ಮೈನಿಂಗ್ ಸ್ಟಾಕ್‌ಯಾರ್ಡನ್ನು ಆರಂಭಿಸಬೇಕಿತ್ತು. ಆದರೆ ಯಾರ ಗಮನಕ್ಕೂ ತಾರದೆ ಮುಂದಿನ ಆಗುಹೋಗುಗಳ ಬಗ್ಗೆ ಚಿಂತನೆ ನಡೆಸದೆ ಮೈನಿಂಗ್ ಯಾರ್ಡ್ ಆರಂಭಿಸಿದ್ದಾರೆ ಎಂದರು.ಕಡೆಪಕ್ಷ ಈ ಭಾಗದ ತಾಲೂಕು ಮಟ್ಟದ ಅಧಿಕಾರಿಗಳಾದರೂ ಭೇಟಿ ನೀಡಿ ಜನರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕಿತ್ತು. ಆದರೆ, ಇಲ್ಲಿಯೂ ಸಹ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಹಿಂದೇಟು ಹಾಕಿದ್ದಾರೆ. ಇಂದಿನ ಪ್ರತಿಭಟನೆಯಲ್ಲಿ ಪುಟ್ಟಮಕ್ಕಳು, ತಾಯಂದಿರು, ವೃದ್ಧರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರತಿನಿತ್ಯ ಅವರು ಅನುಭವಿಸುತ್ತಿರುವ ನೋವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ನಾನು ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತೊಮ್ಮೆ ಭೇಟಿ ನೀಡಿ ಕೂಡಲೇ ಮೈನಿಂಗ್ ಯಾರ್ಡ್‌ನ ಸ್ಥಳವನ್ನು ಬದಲಾಯಿಸಬೇಕಿದೆ. ಸಾರ್ವಜನಿಕರು ಸಹ ಶಾಂತಿ ರೀತಿಯಿಂದ ಸಹಕರಿಸಿ ಮೈನಿಂಗ್ ಯಾರ್ಡ್ ಬೇರೆಡೆ ಸ್ಥಳಾಂತರಕ್ಕೆ ನಾನು ತ್ವರಿತ ಕ್ರಮ ಕೈಗೊಳ್ಳುತ್ತೇನೆ. ಸಾರ್ವಜನಿರಿಗೆ ತೊಂದರೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸರಿಯಲ್ಲ. ನಿಮ್ಮ ಹೋರಾಟಕ್ಕೆ ನಾನು ಸದಾ ಸ್ಪಂದಿಸುತ್ತೇನೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಮತ್ತೊಮ್ಮೆ ಎದುರಾಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನಕಾರ್ಯದರ್ಶಿ ಬಾಳೆಮಂಡಿ ರಾಮದಾಸ್, ಮಾಜಿ ಜಿಲ್ಲಾಧ್ಯಕ್ಷ ಎ.ಮುರುಳಿಯಾದವ್, ಸೂರನಹಳ್ಳಿ ಶ್ರೀನಿವಾಸ್, ತಾಲೂಕು ಅದ್ಯಕ್ಷ ಬಿ.ಎಂ.ಸುರೇಶ್, ಮಾಜಿ ಕಾರ್ಯದರ್ಶಿ ಜಯಪಾಲಯ್ಯ, ಸೋಮಶೇಖರ ಮಂಡಿಮಠ, ಎ.ಮಂಜುನಾಥ, ಮೋಹನ್, ಚನ್ನಗಾನಹಳ್ಳಿ ಮಲ್ಲೇಶ್, ಟಿ.ಮಂಜುನಾಥ, ಹೊನ್ನೂರು ಗೋವಿಂದಪ್ಪ, ದೇವರಾಜರೆಡ್ಡಿ, ರಂಗಸ್ವಾಮಿ, ದಿನೇಶ್‌ರೆಡ್ಡಿ, ಕಾಲುವೇಹಳ್ಳಿ ರಂಗಸ್ವಾಮಿ, ಶಿವಣ್ಣ, ಟಿ.ತಿಮ್ಮಪ್ಪ, ಎಂವೈಟಿ ಸ್ವಾಮಿ, ಬಿ.ಎಸ್.ಶಿವಪುತ್ರಪ್ಪ, ಎ.ವಿಜಯೇಂದ್ರ, ಡಿ.ಎಂ.ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.