ಧಾರವಾಡ:
ಕಳೆದ ಎರಡು ದಿನಗಳಿಂದ ಹುಬ್ಬಳ್ಳಿಯಲ್ಲಿ ರೌಡಿಗಳ ಮನೆಗಳ ದಿಢೀರ್ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್, ಗುರುವಾರ ನಗರದಲ್ಲಿ ದಾಳಿ ನಡೆಸಿ ರೌಡಿಗಳಿಗೆ ನಡುಕು ಹುಟ್ಟಿಸಿದ್ದಾರೆ. ಬಾಲಬಿಚ್ಚಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂಬ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಕಳೆದ ಒಂದು ತಿಂಗಳಲ್ಲಿ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಹತ್ಯೆಯಾದ ಬಳಿಕ ಆಡಳಿತಕ್ಕೆ ಬಿಸಿ ತಟ್ಟಿತ್ತು. ಹೀಗಾಗಿ ರೌಡಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುವ ಕೆಲಸಕ್ಕೆ ಪೊಲೀಸರು ಕೈಹಾಕಿದ್ದಾರೆ.ನಗರದಲ್ಲಿನ ರೌಡಿಶೀಟರ್‌ಗಳ ಮನೆಗಳಿಗೆ ಬೆಳ್ಳಂಬೆಳಗ್ಗೆ ತೆರಳಿ ಜಾಲಾಡಿರುವ ಪೊಲೀಸರು ಯಾವುದೇ ಸಂದರ್ಭದಲ್ಲಿ ಬಾಲ ಬಿಚ್ಚದಂತೆ ತಾಕೀತು ಮಾಡಿದ್ದಾರೆ. ಎಸಿಪಿ ಬಿ. ಬಸವರಾಜ ಮಾರ್ಗದರ್ಶನದಲ್ಲಿ ನಗರದ 32ಕ್ಕೂ ಹೆಚ್ಚು ರೌಡಿಶೀಟರ್ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.
ಶಹರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ವಿಶ್ವನಾಥ ಚೌಗಲೆ, ವಿದ್ಯಾಗಿರಿ ಠಾಣೆಯ ಇನ್‌ಸ್ಪೆಕ್ಟರ್ ಸಂಗಮೇಶ ದಿಡಿಗನಾಳ ಹಾಗೂ ಉಪನಗರ ಠಾಣೆಯ ಪಿಐ ದಯಾನಂದ ಶೇಗುಣಿಸಿ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದರು.ದಾಳಿ ವೇಳೆ ಮಾರಕಾಸ್ತ್ರ ಮತ್ತು ಇನ್ನಿತರ ನಿಷೇಧಿತ ಮಾದಕ ಸಾಮಗ್ರಿಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ವಿದ್ಯಾಗಿರಿ ಠಾಣಾ ವ್ಯಾಪ್ತಿಯಲ್ಲಿ ಅಲ್ಪ ಪ್ರಮಾಣದ ಗಾಂಜಾ ಲಭ್ಯವಾಗಿದ್ದು, ವಶಕ್ಕೆ ಪಡೆದಿದ್ದಾರೆ.
ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೇ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಖಡಕ್ ಸಂದೇಶವನ್ನು ಪೊಲೀಸರು ನೀಡುವ ಮೂಲಕ ರೌಡಿಗಳ ನಿಗ್ರಹಕ್ಕೆ ಮುಂದಾಗಿದ್ದಾರೆ.ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಎರಡು ಭೀಕರ ಕೊಲೆ, ಇನ್ನಿತರ ಅಪರಾಧ ಕೃತ್ಯಗಳನ್ನು ತಡೆಯುವ ದಿಸೆಯಲ್ಲಿ ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ. ಅವಳಿನಗರ ಪೊಲೀಸ್ ಆಯಕ್ತರಾದ ರೇಣುಕಾ ಸುಕುಮಾರ ಈಗಾಗಲೇ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೂಡ ನೀಡಿದ್ದು, ಸಾರ್ವಜನಿಕರು ಭಯ ಬೀಳದಂತಹ ಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ.
ಜನತೆ ಕೂಡಾ ಪೊಲೀಸರಿಗೆ ಸಕಾಲಕ್ಕೆ ಸೂಕ್ತ ಮಾಹಿತಿ ನೀಡುವುದು ಮೂಲಕ ಅಗತ್ಯ ಸಹಕಾರ ನೀಡಬೇಕು. ಸಾಕಷ್ಟು ಜಾಗೃತಿ ವಹಿಸಬೇಕು. ಈ ಮೂಲಕ ಅಹಿತಕರ ಘಟನೆಗಳನ್ನು ತಡೆಯುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಎಸಿಪಿ ಬಿ.ಬಸವರಾಜ ತಿಳಿಸಿದ್ದಾರೆ.