ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಕಲೆ ಮತ್ತು ಸಂಸ್ಕೃತಿಯ ಪ್ರತೀಕವಾದ ಪೌರಾಣಿಕ ನಾಟಕಗಳು ಇತ್ತೀಚಿನ ವರ್ಷಗಳಲ್ಲಿ ನಶಿಸುತ್ತಿದೆ. ಇಂತಹ ಸಂದರ್ಭದಲ್ಲಿ ಬಿಡುವಿಲ್ಲದ ವೇಳಾಪಟ್ಟಿ ಹಾಗೂ ಜವಾಬ್ದಾರಿಯುತ ಕರ್ತವ್ಯದ ನಡುವೆಯೂ ನಮ್ಮ ಪೊಲೀಸ್ ಇಲಾಖೆಯವರು ತರಬೇತಿ ಪಡೆದು, ಪ್ರದರ್ಶನ ನೀಡುತ್ತಿದ್ದಾರೆ. ಇದೇ ರೀತಿ ನಮ್ಮ ಇಲಾಖೆ ಅಧಿಕಾರಿಗಳು ಎಲ್ಲಾ ಕಡೆಗಳಲ್ಲೂ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಸಲಹೆ ನೀಡಿ, ಕಲಾವಿದರಿಗೂ ಹಾಗೂ ಕಲಾಭಿಮಾನಿಗಳಿಗೆ ಮೈಸೂರು ದಕ್ಷಿಣ ವಲಯ ಐಜಿಪಿ ಡಾ. ಬೋರಲಿಂಗಯ್ಯ ಶುಭಕೋರಿದರು. ಪಟ್ಟಣದ ಸಾರ್ವಜನಿಕ ಸಮುದಾಯ ಭವನ ಮುಂಭಾಗದಲ್ಲಿ ಹೊಳೆನರಸೀಪುರ ವೃತ್ತ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ನೌಕರರು, "ಪೊಲೀಸ್ ಎಂದರೆ ಭಯವಲ್ಲ, ಭರವಸೆ " ಎಂಬ ಧ್ಯೇಯದೊಂದಿಗೆ ಕಾನೂನನ್ನು ಗೌರವಿಸುವರನ್ನು ನಾವೂ ಗೌರವಿಸುತ್ತೇವೆ ಎಂಬ ಘೋಷ ವಾಕ್ಯದೊಂದಿಗೆ ಅಭಿನಯಿಸಿರುವ "ಕುರುಕ್ಷೇತ್ರ " ಅಥವಾ "ಧರ್ಮರಾಜ್ಯ ಸ್ಥಾಪನೆ " ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳ ಆವರಣದಲ್ಲಿ ಕೆಲಸ ಕಾರ್ಯಗಳನ್ನು ಪೂರೈಸಿದ ನಂತರ ಸಂಜೆ ೬ ಗಂಟೆ ನಂತರ ರೈತರು ಆರೇಳು ತಿಂಗಳು ನಾಟಕ ಕಲಿತು ವಿಶೇಷ ದಿನಗಳಲ್ಲಿ ಪ್ರದರ್ಶನ ನೀಡಿ ಸಂತಸ ಪಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ನಾಟಕ ಕಲಿಕೆ ಜತೆಗೆ ಪ್ರದರ್ಶನ ಕಾಣೆಯಾಗುತ್ತಿದ್ದು, ಪೌರಾಣಿಕ ನಾಟಕಗಳು ಜೀವನದ ಪ್ರತಿಬಿಂಬವಾಗಿದ್ದು, ಪೂರ್ವಜರ ಕಾಲದಿಂದಲೂ ಬೆಳೆದುಕೊಂಡು ಬಂದಿರುವ ನಾಟಕ ಕಲೆಯನ್ನು ಮುಂದಿನ ತಲೆಮಾರಿಗೂ ಉಳಿಸಿ, ಬೆಳೆಸುವ ಕೆಲಸ ಮಾಡಬೇಕಿದೆ ಎಂದರು. ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕಿ ಮಹಮ್ಮದ್ ಸುಜೀತ ಮಾತನಾಡಿ, ಕೆಲಸದ ಒತ್ತಡದ ನಡುವೆ ನಾಟಕ ಕಲಿತು ಪ್ರದರ್ಶನ ನೀಡುತ್ತಿರುವ ನಮ್ಮ ಪೊಲೀಸರ ಕಾರ್ಯ ಅಭಿನಂದನೀಯ ಎಂದು ಪ್ರಶಂಸಿಸಿ, ನಗರ ಪ್ರದೇಶದಲ್ಲಿ ಬೆಳೆದ ನಮಗೆ ನಾಟಕ ಪ್ರದರ್ಶನದ ಬಗ್ಗೆ ಅರಿವಿಲ್ಲ, ಆದ್ದರಿಂದ ಹೆಚ್ಚು ಕುತೂಹಲದ ಜತೆಗೆ ಕೊನೆ ತನಕ ಕುಳಿತು, ಸಂಭ್ರಮಿಸುವ ಇಚ್ಛೆಯೊಂದಿಗೆ ಆಗಮಿಸಿದ್ದೇನೆ ಎಂದು ಮನದಾಳದ ಮಾತುಗಳನ್ನಾಡಿದರು.