ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ನಡೆದ ಲಾಠಿ ಚಾರ್ಜ್‌ನಿಂದ ಪಂಚಮಸಾಲಿ ಸಮಾಜ ನೊಂದಿದೆ. ಸರ್ಕಾರ ಸಮಾಜದ ಕ್ಷಮೆ ಕೇಳಿಲ್ಲ, ಲಾಠಿ ಚಾರ್ಜ್ ಮಾಡಿದ ಅಧಿಕಾರಿ ಅಮಾನತು ಕೂಡ ಮಾಡಿಲ್ಲ. ಅಧಿವೇಶನದಲ್ಲೇ ಸಿಎಂ ಮೀಸಲಾತಿ ಕೊಡಲ್ಲ ಅಂದಿದ್ದಕ್ಕೆ ಅವಮಾನ ಆಗಿದೆ. ಹಾಗಾಗಿ ನಾವು 8ನೇ ಹಂತದ ಹೋರಾಟಕ್ಕೆ ಸಿದ್ಧರಾಗಿದ್ದೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಗುಡುಗಿದ್ದಾರೆ.ಮಕರ ಸಂಕ್ರಾಂತಿ ದಿನ ಕೂಡಲ ಸಂಗಮದಲ್ಲಿ ನಡೆದ ಸಭೆಯಲ್ಲಿ ಪ್ರತಿಜ್ಞಾ ವಿಧಿ ಅಭಿಯಾನ ಕೈಗೊಂಡ ಶ್ರೀಗಳು, ಲಾಠಿ ಚಾರ್ಜ್ ವೇಳೆ ಗಾಯಗೊಂಡವರನ್ನು ವೇದಿಕೆಗೆ ಕರೆದು ಸನ್ಮಾನಿಸಿ ಆತ್ಮಸ್ಥೈರ್ಯ ತುಂಬಿದ ಬಳಿಕ ಮಾತನಾಡಿದರು. 2ಎ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿದ ಅಪಮಾನಕ್ಕೆ ಪ್ರತೀಕಾರದ ಹೋರಾಟಕ್ಕೆ ಸಜ್ಜಾಗಿದ್ದು, ರಾಜ್ಯದ 224 ವಿಧಾನಸಭೆಗಳ 18,000 ಹಳ್ಳಿಗಳ ಮನೆಮನೆಗೆ ತೆರಳಲು ನಿರ್ಧಾರ ಮಾಡಿದ್ದಾಗಿ ತಿಳಿಸಿದರು. ಇನ್ಮುಂದೆ ಸಿಎಂ ಬಳಿ ಮೀಸಲಾತಿ ಕೇಳಲು ಹೋಗಲ್ಲ. ಬದಲಾಗಿ ಜನರ ಮನೆಮನೆಗೆ ತೆರಳಿ ಜಾಗೃತಿ ಮಾಡ್ತೇವೆ ಎಂದ ಸ್ವಾಮೀಜಿಗಳು, ಸಿಎಂ ಪ್ರತಿನಿಧಿಸುವ ವರುಣಾ ಮತಕ್ಷೇತ್ರದಿಂದಲೇ ಹೋರಾಟಕ್ಕೆ ಮುಂದಾಗುವ ಸೂಚನೆ ನೀಡಿದ್ದಾರೆ.
2ಎ ಮೀಸಲಾತಿ ಹೋರಾಟ ಮತ್ತೆ ಮುನ್ನೆಲೆಗೆ:ಸಿಎಂ ಅವರ ಕ್ಷೇತ್ರ ವರುಣಾದಿಂದಲೇ ಮನೆ ಮನೆ ಜಾಗೃತಿ ಹೋರಾಟಕ್ಕೆ ನಿರ್ಧರಿಸುವ ಸಾಧ್ಯತೆ ಇದ್ದು, ಮೀಸಲಾತಿಗಾಗಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಪಂಚಮಸಾಲಿ ಸಮುದಾಯ ಅಣಿಯಾಗಿದೆ. 18 ಸಾವಿರ ಹಳ್ಳಿಗಳು, ಎಲ್ಲ ವಿಧಾನಸಭೆಗಳು ತೆರಳುತ್ತೇವೆ. ಇನ್ನೊಮ್ಮೆ ಸಿಎಂ ಮನೆಯ ಬಾಗಿಲಿಗೆ ಮೀಸಲಾತಿ ಕೇಳಲು ಹೋಗಲ್ಲ. ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಆರ್ಥಿಕ, ಅಸಹಕಾರ ಕೊಡಲು ತೀರ್ಮಾನ ಮಾಡಿದ್ದೇವೆ. ಮುಂದೆ ದೇವರು ಕೊಡುವ ಒಳ್ಳೆಯ ಸಿಎಂ ಮೂಲಕ ಮೀಸಲಾತಿ ಪಡೆಯುತ್ತೇವೆ ಎಂದು ಸ್ವಾಮೀಜಿಗಳು ಹೇಳಿದ್ದಾರೆ.
ದಿನಕ್ಕೆ 4 ಹಳ್ಳಿಗಳಿಗೆ ತೆರಳುವ ಯೋಜನೆ ಹಾಕಿಕೊಂಡಿದ್ದು, ಎಲ್ಲ ವಿಧಾನಸಭೆಗಳಲ್ಲೂ ಸಮಾವೇಶ ಮಾಡುತ್ತೇವೆ. ಸರ್ಕಾರದ ನಡೆ ಬಗ್ಗೆ ಜನರಿಗೆ ಮನವರಿಕೆ ಮಾಡ್ತೇವೆ. ಸರ್ಕಾರದ ವಿರುದ್ಧ ಅಸಹಕಾರ ನೀಡುವಂತೆ ಮನವಿ ಮಾಡ್ತೀವಿ. ಗೆಜೆಟ್ ನೋಟಿಫಿಕೇಶನ್ ಹೊರಡಿಸುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.ಇನ್ನೊಮ್ಮೆ ಸಿಎಂ ಮನೆಯ ಬಾಗಿಲಿಗೆ ಮೀಸಲಾತಿ ಕೇಳಲು ಹೋಗಲ್ಲ. ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಆರ್ಥಿಕ, ಅಸಹಕಾರ ಕೊಡಲು ತೀರ್ಮಾನ ಮಾಡಿದ್ದೇವೆ. ಮುಂದೆ ದೇವರು ಕೊಡುವ ಒಳ್ಳೆಯ ಸಿಎಂ ಮೂಲಕ ಮೀಸಲಾತಿ ಪಡೆಯುತ್ತೇವೆ.
ಬಸವಜಯ ಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮದ ಪಂಚಮಸಾಲಿ ಪೀಠ