ಪ್ರಕ್ಷುಬ್ಧ ವಾತಾವರಣ ಯಶಸ್ವಿಯಾಗಿ ನಿಭಾಯಿಸಿದ ಪೊಲೀಸರು

KannadaprabhaNewsNetwork |  
Published : Jun 28, 2026, 02:15 AM IST
6.ಬೈರಮಂಗಲ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಅನ್ನು ಕೇಂದ್ರ ವಲಯ ಐಜಿಪಿ ಗಿರೀಶ್ ವೀಕ್ಷಣೆ ಮಾಡಿದರು. | Kannada Prabha

ಸಾರಾಂಶ

ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ಪರ ಮತ್ತು ವಿರೋಧವಾಗಿ ಹೋರಾಟ ನಡೆಯುತ್ತಿದ್ದ ಬೈರಮಂಗಲ ಗ್ರಾಮದಲ್ಲಿ ಭಾನುವಾರ ಉಂಟಾಗಿದ್ದ ಪ್ರಕ್ಷುಬ್ಧ ವಾತಾವರಣವನ್ನು ಪೊಲೀಸ್ ಇಲಾಖೆ ಯಶಸ್ವಿಯಾಗಿ ನಿಭಾಯಿಸಿತು

ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ಪರ ಮತ್ತು ವಿರೋಧವಾಗಿ ಹೋರಾಟ ನಡೆಯುತ್ತಿದ್ದ ಬೈರಮಂಗಲ ಗ್ರಾಮದಲ್ಲಿ ಭಾನುವಾರ ಉಂಟಾಗಿದ್ದ ಪ್ರಕ್ಷುಬ್ಧ ವಾತಾವರಣವನ್ನು ಪೊಲೀಸ್ ಇಲಾಖೆ ಯಶಸ್ವಿಯಾಗಿ ನಿಭಾಯಿಸಿತು.

ಕೇಂದ್ರ ವಲಯ ಐಜಿಪಿ ಗಿರೀಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡರು ಬೈರಮಂಗಲ ಗ್ರಾಮದಲ್ಲಿಯೇ ಮೊಕ್ಕಾಂ ಹೂಡಿ ಸಣ್ಣ ಅಹಿತಕರ ಘಟನೆಗೂ ಅವಕಾಶ ನೀಡದೆ ಪರಿಸ್ಥಿತಿಯನ್ನು ನಿಭಾಯಿಸಿ ಮೆಚ್ಚುಗೆಗೆ ಪಾತ್ರರಾದರು.

ಬಿಡದಿ ಟೌನ್‌ಶಿಪ್‌ ಯೋಜನೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ​ಮತ್ತು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮಧ್ಯೆ ವಾಗ್ವಾದ ತಾರಕಕ್ಕೇರಿದೆ. ರೈತರ ಸಮ್ಮುಖದಲ್ಲೇ ಚರ್ಚೆ ನಡೆಸೋಣ ಬೈರಮಂಗಲಕ್ಕೆ ಬರುವಂತೆ ಕುಮಾರಸ್ವಾಮಿರವರು ಡಿ.ಕೆ.ಶಿವಕುಮಾರ್​ ಅವರಿಗೆ ಸವಾಲು ಹಾಕಿದ್ದರು.

ಒಂದೆಡೆ ಬೈರಮಂಗಲ ವೃತ್ತದಲ್ಲಿ 476 ದಿನಗಳಿಂದ ರೈತರು ಶಾಂತಿಯುತವಾಗಿ ಧರಣಿ ಮುಂದುವರೆಸಿದ್ದರೆ, ಮತ್ತೊಂದೆಡೆ ಕುಮಾರಸ್ವಾಮಿರವರು ಪಂಥಾಹ್ವಾನದಿಂದ ಕೆರಳಿದ ಟೌನ್ ಶಿಪ್ ಯೋಜನೆ ಪರವಾಗಿರುವ ರೈತರು, ಕುಮಾರಸ್ವಾಮಿಯವರು ಬೈರಮಂಗಲ ವೃತ್ತಕ್ಕೆ ಹೋಗುವುದಾದರೆ ನಮ್ಮ ಪ್ರಶ್ನೆಗಳಿಗೆ ಉತ್ತರಿಸಿ ಮುಂದೆ ಸಾಗಬೇಕೆಂದು ಪಟ್ಟು ಹಿಡಿದು ವೃಷಭಾವತಿ ಶಾಲೆ ಬಳಿ ಪ್ರತಿಭಟನೆ ಪ್ರಾರಂಭಿಸಿದರು. ಇದರಿಂದಾಗಿ ಬೈರಮಂಗಲ ಗ್ರಾಮದಲ್ಲಿ ಎರಡು ದಿನಗಳಿಂದ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು.

ಭಾನುವಾರ ಬೆಳಗ್ಗೆಯಿಂದಲೇ ಟೌನ್‌ಶಿಪ್ ಯೋಜನೆ ಪರ ಮತ್ತು ವಿರೋಧವಾಗಿರುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಎರಡೂ ಪ್ರತಿಭಟನಾ ಸ್ಥಳಗಳಿಂದ ಪರ ಮತ್ತು ವಿರುದ್ಧವಾದ ಘೋಷಣೆಗಳು ಮೊಳಗುತ್ತಿದ್ದವು.

ಕುಮಾರಸ್ವಾಮಿಯವರು ಬೈರಮಂಗಲ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಟೌನ್​ಶಿಪ್ ಪರವಾಗಿರುವ ರೈತರು ಕೆಂಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಎರಡೂ ಬದಿಯಲ್ಲಿ ಸಾಲುಗಟ್ಟಿ ನಿಂತಿದ್ದ ಪೊಲೀಸರ ಮಧ್ಯದಲ್ಲಿ ಕುಮಾರಸ್ವಾಮಿ ಮತ್ತು ಜೆಡಿಎಸ್ ನಾಯಕರ ಕಾರುಗಳು ತೆರಳಿದವು.

ಇನ್ನು ಟೌನ್‌ಶಿಪ್ ವಿರೋಧಿ ರೈತರು, ಕುಮಾರಸ್ವಾಮಿ ಅವರನ್ನು ಅಡ್ಡ ಹಾಕುತ್ತಾರೆ. ಅವರನ್ನು ನಾವು ಕರೆತರುತ್ತೇವೆ ಬಿಡಿ. ಅಲ್ಲಿ ಯಾವುದೇ ರೈತರಿಲ್ಲ. ಇರುವವರೆಲ್ಲ ರೌಡಿಗಳು. ಹಣಕೊಟ್ಟು ಬೇರೆಯವರನ್ನು ಕರೆತಂದಿದ್ದಾರೆ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಪೊಲೀಸರ ಸರ್ಪಗಾವಲಿನಲ್ಲಿ ಕುಮಾರಸ್ವಾಮಿಯವರು ಬೈರಮಂಗಲ ವೃತ್ತಕ್ಕೆ ಆಗಮಿಸಿದಾಗ ಟೌನ್‌ಶಿಪ್ ವಿರುದ್ಧ ರೈತರು ಜೈಕಾರ ಕೂಗಿ ಹರ್ಷೋದ್ಘಾರ ವ್ಯಕ್ತಪಡಿಸಿದರು. ಸುಮಾರು ಮೂರುವರೆ ಗಂಟೆ ರೈತರೊಂದಿಗೆ ಚಳವಳಿಯಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ ಪೊಲೀಸ್ ಭದ್ರತೆಯಲ್ಲಿ ತೆರಳಿದರು.

ಇದಾದ ಬಳಿಕ ಗ್ರಾಮದಲ್ಲಿ ಟೌನ್‌ಶಿಪ್ ಪರ ಮತ್ತು ವಿರೋಧ ಇದ್ದ ಕೆಲ ರೈತರು ಮಾತಿನ ಚಕಮಕಿ ನಡೆಸಿಕೊಂಡು ಗಲಾಟೆಗೆ ಇಳಿದರು. ಎರಡೂ ಕಡೆಯ ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿತ್ತು. 4 ಕೆಎಸ್‌ಆರ್‌ಪಿ, 300ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತಿಗಾಗಿ ನಿಯೋಜನೆ‌ ಮಾಡಲಾಗಿತ್ತು. ಬಿಡದಿ-ಹಾರೋಹಳ್ಳಿ ಮುಖ್ಯರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡದೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು.

27ಕೆಆರ್ ಎಂಎನ್ 6,7.ಜೆಪಿಜಿ

6.ಬೈರಮಂಗಲ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಅನ್ನು ಕೇಂದ್ರ ವಲಯ ಐಜಿಪಿ ಗಿರೀಶ್ ವೀಕ್ಷಣೆ ಮಾಡಿದರು.

7.ಬೈರಮಂಗಲ ಗ್ರಾಮದಲ್ಲಿ ಪೊಲೀಸರು ಬಂದೋಬಸ್ತಿನಲ್ಲಿ ತೊಡಗಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡುವಂತೆ ಉಪ್ಪಾರ ಸಮಾಜದ ಆಗ್ರಹ
ನಾಡಪ್ರಭುಗಳಿಂದ ಸಣ್ಣ ಸಮುದಾಯಗಳ ಏಳಿಗೆ