ಕಾವೇರಿ-ಗೋದಾವರಿ ನದಿ ಜೋಡಣೆಗೆ ರಾಜ್ಯ ಸರ್ಕಾರದಿಂದ ಮೌಖಿಕ ಒಪ್ಪಿಗೆ

Published : Jun 27, 2026, 08:35 AM IST
Cauvery

ಸಾರಾಂಶ

ಮಹತ್ವದ ಬೆಳವಣಿಗೆಯೊಂದರದಲ್ಲಿ ಕಾವೇರಿ-ಗೋದಾವರಿ ನದಿ ಜೋಡಣೆಯ ಮಹತ್ವದ ಯೋಜನೆಗೆ ಕರ್ನಾಟಕ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎನ್ನಲಾಗಿದೆ.ಗುರುವಾರ ತುಂಗಭದ್ರಾ ಬಳಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌. ಪಾಟೀಲ್‌ ಸಮ್ಮುಖದಲ್ಲಿ ನಡೆದ ಆಂತರಿಕ ಸಭೆ

 ಬೆಂಗಳೂರು :  ಮಹತ್ವದ ಬೆಳವಣಿಗೆಯೊಂದರದಲ್ಲಿ ಕಾವೇರಿ-ಗೋದಾವರಿ ನದಿ ಜೋಡಣೆಯ ಮಹತ್ವದ ಯೋಜನೆಗೆ ಕರ್ನಾಟಕ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎನ್ನಲಾಗಿದೆ.

ಗುರುವಾರ ತುಂಗಭದ್ರಾ ಬಳಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌. ಪಾಟೀಲ್‌ ಸಮ್ಮುಖದಲ್ಲಿ ನಡೆದ ಆಂತರಿಕ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಕಾವೇರಿ ಹಾಗೂ ಗೋದಾವರಿ ನದಿ ಜೋಡಣೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ

ಕಾವೇರಿ ಹಾಗೂ ಗೋದಾವರಿ ನದಿ ಜೋಡಣೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರ ಒಟ್ಟು 1 ಲಕ್ಷ ಕೋಟಿ ರು. ವೆಚ್ಚದಲ್ಲಿ ಯೋಜನೆ ಜಾರಿಗೆ ಮುಂದಾಗಿದ್ದು, ಶೇ.10ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ. ಇದಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಅವರು ಸರ್ಕಾರದ ಪರ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಕ್ಕೆ ಗೋದಾವರಿಯಿಂದ 15.90 ಟಿಎಂಸಿ ನೀರು ಹಂಚಿಕೆಯಾಗಿದ್ದು, ಇದನ್ನು ಹೆಚ್ಚಳ ಮಾಡುವ ಬಗ್ಗೆ ಮೌಖಿಕವಾಗಿ ಶಿವಕುಮಾರ್‌ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಇಂದಿರಾಗಾಂಧಿ ಅವಧಿಯಲ್ಲಿ (1983) ಎನ್‌.ಟಿ.ರಾಮರಾವ್‌ ನಾಯಕತ್ವದಲ್ಲಿ ಅವಿಭಜಿತ ಆಂಧ್ರಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಒಟ್ಟಾಗಿ ಚೆನ್ನೈನ ಕುಡಿಯುವ ನೀರಿಗಾಗಿ 15 ಟಿಎಂಸಿ ಅಡಿ ನೀರು ಒದಗಿಸಿದ್ದವು. ಇಂಥ ಐತಿಹಾಸಿಕ ಒಕ್ಕೂಟ ವ್ಯವಸ್ಥೆಯ ಉದಾಹರಣೆ ದಕ್ಷಿಣ ರಾಜ್ಯಗಳ ಮುಂದಿದೆ. ಇದೇ ಒಕ್ಕೂಟ ವ್ಯವಸ್ಥೆಯ ಪೂರಕ ಮನೋಭಾವದೊಂದಿಗೆ ಮುಂದಿನ ಹಂತದಲ್ಲಿ ಚರ್ಚಿಸಿ ಕಾವೇರಿ-ಗೋದಾವರಿ ನದಿ ಜೋಡಣೆಗೆ ಒಪ್ಪಿಗೆ ನೀಡೋಣ. ಇದರಿಂದ ಒಂದು ರಾಜ್ಯದಲ್ಲಿ ಬರ ಬಂದರೆ ಮತ್ತೊಂದು ರಾಜ್ಯಕ್ಕೆ ನೆರವಾಗಬಹುದು ಎಂದು ಮೂರೂ ಮಂದಿ ಮುಖ್ಯಮಂತ್ರಿಗಳು ಚರ್ಚಿಸಿದ್ದಾರೆ ಎನ್ನಲಾಗಿದೆ.

ಗಂಗಾ-ಕಾವೇರಿ ಜೋಡಣೆ ಬಗ್ಗೆಯೂ ಚರ್ಚೆ

ಕೇಂದ್ರ ಸಚಿವ ಸಿ.ಆರ್‌.ಪಾಟೀಲ್‌ ಅವರು ಸಿಎಂ ಡಿ.ಕೆ.ಶಿವಕುಮಾರ್ ಜತೆ ಗಂಗಾ ಹಾಗೂ ಕಾವೇರಿ ನದಿಗಳ ಜೋಡಣೆ ಬಗ್ಗೆಯೂ ಚರ್ಚಿಸಿದ್ದಾರೆ. ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದ ನಡುವಿನ ಕೆನ್‌ ಬೆತ್ವಾ ಯೋಜನೆ, ರಾಜಸ್ತಾನ ಹಾಗೂ ಮಧ್ಯಪ್ರದೇಶದ ನಡುವಿನ ಪಾರ್ವತಿ-ಕಾಳಿ ಸಿಂಧು-ಚಂಬಲ್‌ ನದಿ ಜೋಡಣೆಗಳನ್ನು ಯಶಸ್ವಿಯಾಗಿ ಕೈಗೆತ್ತಿಕೊಳ್ಳಲಾಗಿದೆ. ಇದೇ ಮಾದರಿಯಲ್ಲಿ ಗಂಗಾ-ಕಾವೇರಿ ನದಿ ಜೋಡಣೆಗೂ ಕೇಂದ್ರ ಉದ್ದೇಶಿಸಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕೇಂದ್ರದಿಂದ ಯೋಜನೆ, ಅನುದಾನ ಸೆಳೆಯಲು ದಿಲ್ಲಿ ಮಟ್ಟದಲ್ಲಿ ತಂಡ
ಮೇಕೆದಾಟು ಯೋಜನೆಗೆ 10-15 ದಿನದಲ್ಲಿ ಡಿಪಿಆರ್‌