ಕಾರ್ಮಿಕ ಭವನದಲ್ಲಿ ನಡೆದ ಪ್ರತಿಬಿಂಬ ಕಾರ್ಯಕ್ರಮ ಉದ್ಘಾಟನೆಕನ್ನಡಪ್ರಭ ವಾರ್ತೆ ಯಲ್ಲಾಪುರಹವ್ಯಕ ಸಮಾಜದಲ್ಲಿ ಜನಸಂಖ್ಯೆ ತೀರಾ ಕುಸಿಯುತ್ತಿದೆ. ಇದು ಆತಂಕದ ವಿಷಯ. ವಿಶೇಷವಾಗಿ ಹೆಣ್ಣು ಗಂಡಿನ ಅನುಪಾತ ಸರಿ ಇಲ್ಲದಿರುವುದು ಸಮಾಜದ ಬೆಳವಣಿಗೆಗೆ ಮಾರಕ. ಈ ಕುರಿತು ಸಮಾಜದ ಹಿರಿಯರು, ಮಠಾಧಿಪತಿಗಳು ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಜಿ.ಎನ್. ಹೆಗಡೆ ಹಿರೇಸರ ಹೇಳಿದರು. ಶನಿವಾರ ಪಟ್ಟಣದ ಕಾರ್ಮಿಕ ಭವನದಲ್ಲಿ ಯಲ್ಲಾಪುರ, ಅಂಕೋಲಾ, ಜೊಯಿಡಾ ಮೂರು ತಾಲೂಕುಗಳ ಸಂಘಟನೆಯ ಸಹಕಾರದಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭೆ ಹಮ್ಮಿಕೊಂಡ ಪ್ರತಿಬಿಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಮ್ಮ ಹವ್ಯಕ ಮಠಾಧಿಪತಿಗಳು ಒಂದೇ ವೇದಿಕೆಯಲ್ಲಿ ಸೇರುವಂತಾಗಬೇಕು. ತನ್ಮೂಲಕ ಸಮಾಜದ ಉನ್ನತಿಗೆ ಮಾರ್ಗದರ್ಶನ ನೀಡಬೇಕು. ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿದ ಹವ್ಯಕ ಸಮಾಜ ಅತ್ಯಂತ ಚಿಕ್ಕ ಸಮಾಜ. ನಾಡಿನಲ್ಲಿ ಅನೇಕ ಸಮಾಜ, ಮಠ, ಮಾನ್ಯಗಳು ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿವೆ. ಆ ಎಲ್ಲ ದೃಷ್ಟಿಯಿಂದ ನಾವು ಹಿಂದಿದ್ದೇವೆ. ಆದರೆ ಪ್ರತಿಭೆಯಲ್ಲಿ ನಮಗೆ ಯಾವ ಕೊರತೆಯೂ ಇಲ್ಲ ಎಂದ ಅವರು, ಸ್ತ್ರೀ ಭ್ರೂಣಹತ್ಯೆ, ಧನ್ಯೋ ಗೃಹಸ್ಥಾಶ್ರಮ ಸೇರಿದಂತೆ ಹಲವು ಮಹತ್ವದ ಅಭಿಯಾನವನ್ನು ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ನಡೆಸಿ, ಸಮಾಜದ ಒಳಿತಿಗೆ ಮಹತ್ವದ ಕೊಡುಗೆ ನೀಡಿದ್ದೇವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶ್ರೀ ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೆಸರ ಮಾತನಾಡಿ, ಬ್ರಾಹ್ಮಣ ಸಮುದಾಯದಲ್ಲೇ ವಿಶಿಷ್ಠ ಸಂಸ್ಕೃತಿ, ಪರಂಪರೆ ಹೊಂದಿದ್ದೇವೆ. ಸಮಾಜದಲ್ಲಿಂದು ಹವ್ಯಕರ ಆಸ್ತಿ ಮಾರಾಟ ಮಾಡುತ್ತಿರುವುದು ಆತಂಕ. ಜೊತೆಗೆ ವೈವಾಹಿಕ ಸಮಸ್ಯೆ, ವಂಶವಾಹಿನಿಗೆ ವರ್ಣಸಂಕರ ಆಗುವುದರಿಂದ ಸಮಾಜಕ್ಕೆ ಮಾರಕ. ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳು ಉಳಿಯಬೇಕು ಎಂದರು. ಮಹಾಸಭೆಯ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರ ಮಾತನಾಡಿ, ಮಹಾಸಭೆಗೆ ೮೩ ವರ್ಷ. ಇಂತಹ ಹತ್ತಾರು ಕಾರ್ಯಕ್ರಮಗಳ ಮೂಲಕ ಮಹಾಸಭೆ ಸಮಾಜದ ಸಂಘಟನೆಗಳ ಜೊತೆ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತದೆ ಎಂದರು.ಯಲ್ಲಾಪುರ ತಾಲೂಕಾ ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ, ಅಂಕೋಲಾ ಹವ್ಯಕ ಸಂಘದ ಅಧ್ಯಕ್ಷ ಎಂ.ಪಿ.ಭಟ್ಟ, ಯಲ್ಲಾಪುರ ಮಾತೃಮಂಡಳಿ ಅಧ್ಯಕ್ಷೆ ಆಶಾ ಬಗನಗದ್ದೆ ಮಾತನಾಡಿದರು.
ಪ್ರತಿಭಾ ಪ್ರದರ್ಶನ
ಪ್ರತಿಬಿಂಬ ಕಾರ್ಯಕ್ರಮದಲ್ಲಿ ೬ ವರ್ಷದೊಳಗಿನ ಹವ್ಯಕ ಮಕ್ಕಳಿಗಾಗಿ ಶ್ಲೋಕ ಪಠಣ, ಛದ್ಮವೇಷ, ಬಣ್ಣ ತುಂಬುವುದು, ೭-೧೨ ವರ್ಷ ವಯೋಮಿತಿಯವರಿಗೆ ಭಗವದ್ಗೀತಾ ಕಂಠಪಾಠ, ಚಿತ್ರಕಲೆ, ಏಕಪಾತ್ರಾಭಿನಯ, ೧೨-೧೮ ವರ್ಷ ವಯೋಮಾನದವರಿಗೆ ರಸಪ್ರಶ್ನೆ, ಆಶುಭಾಷಣ, ಚರ್ಚಾಸ್ಪರ್ಧೆ, ದೇಶಭಕ್ತಿಗೀತೆ ಹಾಗೂ ೧೮ ವರ್ಷ ಮೇಲ್ಪಟ್ಟವರಿಗೆ ಹವ್ಯಕ ಸಂಪ್ರದಾಯ ಗೀತೆ, ಚುಕ್ಕಿ ರಂಗೋಲಿ, ಜಾನಪದಗೀತೆ, ಹವಿಗನ್ನಡ ಆಶುಭಾಷಣ, ಹವಿರುಚಿ ಹಾಗೂ ಮಿಮಿಕ್ರಿ ಮುಂತಾದ ಪ್ರತಿಭಾ ಪ್ರದರ್ಶನಗಳು ಸಮಯಮಿತಿಯಲ್ಲಿ ನಡೆದವು. ಹವಿರುಚಿಯಲ್ಲಿ ನೂರಾರು ಬಗೆಯ ಸಿಹಿ ತಿನಿಸುಗಳನ್ನು ಪ್ರದರ್ಶನಕ್ಕೆ ತಂದಿದ್ದು, ಹವ್ಯಕರ ಅಡುಗೆಯ ಶ್ರೇಷ್ಠತೆ ಹೆಚ್ಚಿಸಿತು.