ಕನ್ನಡಪ್ರಭ ವಾರ್ತೆ ಚಳ್ಳಕೆರೆ
ತಾಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯ ಯಾದಲಗಟ್ಟೆ ಗ್ರಾಮದಲ್ಲಿ ಹೊಟ್ಟೆನೋವಿನಿಂದ ಮೃತಪಟ್ಟಿದ್ದಾರೆ ಎಂದು ನಂಬಲಾಗಿದ್ದ ವ್ಯಕ್ತಿಯ ಮರಣೋತ್ತರ ವರದಿಯಲ್ಲಿ ಅಸಹಜ ಸಾವು ಎಂದು ಹೇಳಲಾಗಿದ್ದು, ಕೊಲೆಯ ಶಂಕೆ ವ್ಯಕ್ತವಾಗಿದೆ.ಸೆ.27ರಂದು ರಾಘವೇಂದ್ರ (35) ಎಂಬುವವರು ಮನೆಯಲ್ಲೆ ಮೃತಪಟ್ಟಿದ್ದಾರೆ. ಅಂದು ಮಧ್ಯಾಹ್ನ ಮೃತ ರಾಘವೇಂದ್ರನ ಹೆಂಡತಿ ದಿವ್ಯ ದೂರವಾಣಿ ಮೂಲಕ ಮೃತನ ಸಹೋದರ ಕೆ.ಒ.ತಿಪ್ಪೇಸ್ವಾಮಿಗೆ, ‘ನಿನ್ನ ತಮ್ಮ ಹೊಟ್ಟೆನೋವು ಎಂದು ಮನೆಯಲ್ಲಿ ನರಳಾಡುತ್ತಿದ್ದಾನೆಂದು’ ತಿಳಿಸಿದ್ದಳು. ಆಗ ಬೆಂಗಳೂರಿನಲ್ಲಿದ್ದ ತಿಪ್ಪೇಸ್ವಾಮಿ ತನ್ನ ಬಂಧುಗಳಿಗೆ ಪೋನ್ ಮಾಡಿ ರಾಘವೇಂದ್ರನ ಆರೋಗ್ಯ ಸ್ಥಿತಿ ವಿಚಾರಿಸಿದ್ದಾರೆ.
ತಿಪ್ಪೇಸ್ವಾಮಿ ಬಂಧುಗಳು ಮನೆಗೆ ಹೋಗಿ ನೋಡುವಷ್ಟರಲ್ಲಿ ರಾಘವೇಂದ್ರ ಅಂದೇ ಮೃತಪಟ್ಟಿದ್ದ. ಸಹೋದರ ತಿಪ್ಪೇಸ್ವಾಮಿ, ಅಂತ್ಯಕ್ರಿಯೆ ನಡೆಸಲು ಮೃತನ ಶರೀರಕ್ಕೆ ಸ್ನಾನ ಮಾಡಿಸಲು ಯತ್ನಿಸುವ ಸಂದರ್ಭದಲ್ಲಿ ಪತ್ನಿ ದಿವ್ಯ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಈ ಸಂದರ್ಭದಲ್ಲಿ ಮೃತ ರಾಘವೇಂದ್ರನ ಕುತ್ತಿಗೆಯಲ್ಲಿ ದಾರ ಕಂಡು ಬಂದಿದೆ. ಆಗ ಅನುಮಾನಗೊಂಡ ತಿಪ್ಪೇಸ್ವಾಮಿ ತಳಕು ಠಾಣೆಗೆ ದೂರು ನೀಡಿ, ಬಳಿಕ ಅಂತ್ಯಕ್ರಿಯೆ ಪೂರೈಸಿದ್ದರು.ಆದರೆ, ಮೃತ ರಾಘವೇಂದ್ರನ ಮರಣೋತ್ತರ ವರದಿ ನೋಡಿದಾಗ ರಾಘವೇಂದ್ರನನ್ನು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಆಗ ತಿಪ್ಪೇಸ್ವಾಮಿ ರಾಘವೇಂದ್ರನ ಕೊಲೆಗೆ, ಪತ್ನಿ ದಿವ್ಯ, ಆಕೆಯ ಚಿಕ್ಕಪ್ಪ ಮಾರಣ್ಣ (50) ಹಾಗೂ ರಾಜು (30) ಎಂಬುವವರು ಕಾರಣ ಎಂದು ದೂರು ನೀಡಿದ್ದಾರೆ. ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ಒಳಪಡಿಸಿದಾಗ ದಿವ್ಯ ಪ್ರಿಯಕರ ರಾಜು ಮತ್ತು ಅವಳ ಚಿಕ್ಕಪ್ಪ ಮಾರಣ್ಣನ ಸಹಕಾರದೊಂದಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಆಗ ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಡಿವೈಎಸ್ಪಿ ಟಿ.ಬಿ. ರಾಜಣ್ಣ, ವೃತ್ತ ನಿರೀಕ್ಷಕ ಹನುಮಂತಪ್ಪ ಸಿರಿಹಳ್ಳಿ, ಪಿಎಸ್‌ಐ ಲೋಕೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ರಾಘವೇಂದ್ರ, ದಿವ್ಯ ಒಂದೇ ಗ್ರಾಮದವರಾಗಿದ್ದು, ಪ್ರೀತಿಸಿ ಮದುವೆಯಾಗಿದ್ದರು. ಅವರಿಗೆ ಕಿಶೋರ್ ಮತ್ತು ಅಖಿಲ ಎಂಬ ಇಬ್ಬರು ಗಂಡುಮಕ್ಕಳು ಇದ್ದಾರೆ.