6 ತಿಂಗಳಿಂದ ಪೌರಾಯುಕ್ತರ ಹುದ್ದೆ ಖಾಲಿ !

KannadaprabhaNewsNetwork | Published : Mar 13, 2024 2:08 AM

ಸಾರಾಂಶ

ಗದಗ ಜಿಲ್ಲೆಯಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಧಿಕಾರಿಗಳ ಬರ ಎದುರಾಗಿದ್ದು, ಹಲವಾರು ಪ್ರಮುಖ ಹುದ್ದೆಗಳು ಕಳೆದ 6 ತಿಂಗಳಿಂದ ಖಾಲಿ ಉಳಿದಿದ್ದು, ಪ್ರಭಾರ ಅಧಿಕಾರಿಗಳ ಮೇಲೆ ಅಧಿಕಾರ ನಡೆಸುವ ವಿಷಮ ಪರಿಸ್ಥಿತಿ ನಿರ್ಮಾಣವಾಗಿ ಜಿಲ್ಲೆಯ ಆಡಳಿತ ವ್ಯವಸ್ಥೆಯ ಬಗ್ಗೆಯೇ ಸಂಶಯ ಕಣ್ಣಿನಿಂದ ನೋಡುವಂತಾ ಸ್ಥಿತಿ ನಿರ್ಮಾಣವಾಗಿದೆ

ಶಿವಕುಮಾರ ಕುಷ್ಟಗಿ ಗದಗ

ವ್ಯಾಪಕ ಮಳೆ ಕೊರತೆಯಿಂದ ತೀವ್ರ ಬರಗಾಲ ಎದುರಿಸುತ್ತಿರುವ ಗದಗ ಜಿಲ್ಲೆಯಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಧಿಕಾರಿಗಳ ಬರ ಎದುರಾಗಿದ್ದು, ಹಲವಾರು ಪ್ರಮುಖ ಹುದ್ದೆಗಳು ಕಳೆದ 6 ತಿಂಗಳಿಂದ ಖಾಲಿ ಉಳಿದಿದ್ದು, ಪ್ರಭಾರ ಅಧಿಕಾರಿಗಳ ಮೇಲೆ ಅಧಿಕಾರ ನಡೆಸುವ ವಿಷಮ ಪರಿಸ್ಥಿತಿ ನಿರ್ಮಾಣವಾಗಿ ಜಿಲ್ಲೆಯ ಆಡಳಿತ ವ್ಯವಸ್ಥೆಯ ಬಗ್ಗೆಯೇ ಸಂಶಯ ಕಣ್ಣಿನಿಂದ ನೋಡುವಂತಾ ಸ್ಥಿತಿ ನಿರ್ಮಾಣವಾಗಿದೆ.

ಪೌರಾಯುಕ್ತರ ಹುದ್ದೆ ಖಾಲಿ: ಗದಗ ಬೆಟಗೇರಿ ನಗರಸಭೆಯ ಪೌರಾಯುಕ್ತರ ಹುದ್ದೆ ಕಳೆದ 6 ತಿಂಗಳಿಂದ ಖಾಲಿ ಇದೆ, 31-8-2023 ರಂದು ರಮೇಶ ಸುಣಗಾರ ನಿವೃತ್ತಿಯಿಂದ ಪೌರಾಯುಕ್ತರ ಹುದ್ದೆ ತೆರವಾಗಿತ್ತು. ಅಂದು ಬೇರೆ ಅಧಿಕಾರಿಗಳನ್ನು ತರುವ ಪ್ರಯತ್ನಗಳಾಗಿದ್ದರೂ ಯಾರೂ ಬರಲಿಲ್ಲ, ಆಹಾರ ಇಲಾಖೆಯ ಗಂಗಪ್ಪ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ಅವರು ತಮ್ಮ ಮೂಲ ಇಲಾಖೆಯ ಜವಾಬ್ದಾರಿಯಲ್ಲಿ ನಗರಸಭೆಯನ್ನು ನಿರ್ಲಕ್ಷಿಸಿದರು. ಅವಳಿ ನಗರದ ವಿದ್ಯುತ್ ಟೆಂಡರ್ ಗುತ್ತಿಗೆ ವಿಷಯದಲ್ಲಿ ನಿರ್ಲಕ್ಷ್ಯದ ವರ್ತನೆ ತೋರಿದ ಹಿನ್ನೆಲೆಯಲ್ಲಿ ಅವರು ಬೇರೆಡೆ ವರ್ಗಾವಣೆಯಾಗಿ ಹೋದರು. ಅದಾದ ನಂತರವೂ ಬೇರೆ ಅಧಿಕಾರಿಗಳನ್ನು ತರುವ ಪ್ರಯತ್ನ ನಡೆದಿವೆಯಾದರೂ ಅದು ವಿಫಲವಾದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ ಅವರಿಗೆ ಹೆಚ್ಚುವರಿ (ಪ್ರಭಾರ) ಹೊಣೆಗಾರಿಕೆ ಜಿಲ್ಲಾಡಳಿತ ನೀಡಿತ್ತು. ಈಗಲೂ ಅವರೇ ಹೆಚ್ಚುವರಿ ಹೊಣೆಗಾರಿಕೆ ನಿಭಾಯಿಸುತ್ತಿದ್ದಾರೆ.

ಮಾ.6 ರಂದು ಆದೇಶ: ಕಳೆದ 6 ತಿಂಗಳಿಂದ ಪೂರ್ಣಾವಧಿ ಪೌರಾಯುಕ್ತರು ಇಲ್ಲದೇ ಆಡಳಿತಕ್ಕೆ ತೀವ್ರ ತೊಂದರೆಯಾಗುತ್ತಿದೆ ಎನ್ನುವ ಕೂಗು ಆಡಳಿತ ಮತ್ತು ವಿರೋಧ ಪಕ್ಷಗಳಿಂದ ವ್ಯಾಪಕವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ 6-3-2024 ರಂದು ಗದಗ ಬೆಟಗೇರಿ ನಗರಸಭೆಗೆ ಬಿ.ಕೆ.ರುದ್ರಮುನಿ ಎನ್ನುವವರನ್ನು ಪೌರಾಯುಕ್ತರನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು. ಆದರೆ ಆದೇಶವಾಗಿ ಒಂದು ವಾರ ಕಳೆದಿದೆ, ಅವರು ಕೂಡಾ ಅಧಿಕಾರ ವಹಿಸಿಕೊಳ್ಳಲು ಬಾರದೇ ಇರುವುದು ಹೊಸ ಸಂಶಯಕ್ಕೆ ನಾಂದಿಯಾಗಿದೆ.

ಸಮಸ್ಯೆಗೆ ಸ್ಪಂದಿಸುವುದಾದರೂ ಹೇಗೆ: ನಗರಸಭೆಯಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಪ್ರಸ್ತುತ ಪ್ರಭಾರ ಪೌರಾಯುಕ್ತರಾಗಿರುವವರು ಅ‍ವಳಿ ನಗರದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಬೇಸಿಗೆ ತೀವ್ರವಾಗಿದೆ. ಕುಡಿವ ನೀರಿನ ಸಮಸ್ಯೆ ಉಲ್ಬಣವಾಗಿದೆ, ತಕ್ಷಣವೇ ಯಾವುದೇ ಕಡತಗಳಿಗೆ ಸಹಿ ಮಾಡಿ ಎಂದರೆ ಅವರು ಆಸಕ್ತಿ ತೋರುತ್ತಿಲ್ಲ, ಇದರಿಂದ ಚುನಾಯಿತ ಸದಸ್ಯರಾದ ನಾವು ವಾರ್ಡಗಳ ಜನರಿಗೆ ಉತ್ತರಿಸುವುದು ಕಷ್ಟವಾಗಿದೆ ಎಂದು 35 ಜನ ಸದಸ್ಯರು ಜಿಲ್ಲಾಧಿಕಾರಿಗಳಿಗೆ ದೂರು ಕೂಡಾ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಕೂಡಾ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದು, ಅವರು ಕಡತಗಳಿಗೆ ಸಹಿ ಮಾಡಲು ಹೆದರುತ್ತಾರೆ ಎಂದು ಹೇಳಿ ಕಳಿಸಿದರು ಹೀಗಾದರೆ ಜನರ ಸಮಸ್ಯೆಗೆ ಸ್ಪಂದಿಸುವುದಾದರೂ ಹೇಗೆ ಎಂದು ಹಲವಾರು ಜನ ಸದಸ್ಯರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ವ್ಯಾಪಕ ಚರ್ಚೆ: ಗದಗ ಜಿಲ್ಲೆಯಲ್ಲಿ ಅಧಿಕಾರಿಗಳ ಬರ ಎದುರಾಗಿದೆ. 28 ಇಲಾಖೆ ಒಳಗೊಂಡಿರುವ ಜಿಪಂ ಸಿಇಓ ಹುದ್ದೆ ಖಾಲಿಯಾಗಿ 8 ತಿಂಗಳುಗಳೇ ಕಳೆದಿದೆ, ಪೌರಾಯುಕ್ತರ ಹುದ್ದೆ ಖಾಲಿಯಾಗಿ 6 ತಿಂಗಳು ಕಳೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲರು ಸರ್ಕಾರದಲ್ಲಿ ಅತ್ಯಂತ ಪ್ರಭಾವಿಗಳು, ಮೇಲಾಗಿ ಕಾನೂನು ಸಚಿವರು, ಅವರ ಸ್ವ ಜಿಲ್ಲೆಯಲ್ಲಿಯೇ ಈ ರೀತಿಯ ಪ್ರಮುಖ ಹುದ್ದೆಗಳು ಖಾಲಿ ಉಳಿಯುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಗದಗ ಜಿಲ್ಲೆಗೆ ಕಾರ್ಯ ನಿರ್ವಹಿಸಲು ಅಧಿಕಾರಿಗಳು ಅದ್ಯಾಕೆ ಬರುತ್ತಿಲ್ಲ ? ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು ಇದಕ್ಕೆ ಅವರೇ ಉತ್ತರಿಸಬೇಕು.

ಮಾ. 6 ರಂದು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ, ಆದರೆ ಯಾರೂ ಇದುವರೆಗೂ ಅಧಿಕಾರ ವಹಿಸಿಕೊಂಡಿಲ್ಲ ಎಂದು ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ ಹೇಳಿದರು.

Share this article