ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ಕಾರಿ ವ್ಯವಸ್ಥೆಯಲ್ಲಿ ವಾಹನ ಚಾಲಕರ ಹುದ್ದೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಆಡಳಿತಯಂತ್ರವನ್ನು ಮುನ್ನಡೆಸುವಲ್ಲಿ ಅವರೂ ಕಾರಣೀಭೂತರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಮೆಚ್ಚುಗೆ ವ್ಯಕ್ತಪಡಿಸಿದರು.ಜಿಲ್ಲಾ ಸರ್ಕಾರಿ ವಾಹನ ಚಾಲಕರ ಸಂಘದ ಆಶ್ರಯದಲ್ಲಿ ನಗರದ ತೋಟಗಾರಿಕೆ ಇಲಾಖೆಯ ಸಭಾಂಗಣದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಪ್ರತಿಯೊಂದು ಹುದ್ದೆಗೂ ಅದರದ್ದೇ ಆದ ಘನತೆ-ಗೌರವಗಳಿವೆ. ಅದೇ ರೀತಿ ಚಾಲಕ ಹುದ್ದೆಗೂ ಮಹತ್ವದ ಸ್ಥಾನವಿದೆ. ಯಾವುದೇ ಅಧಿಕಾರಿ ಮತ್ತು ಚಾಲಕರ ನಡುವೆ ಪ್ರೀತಿ-ಬಾಂಧವ್ಯ ಇರುತ್ತದೆ. ಅದು ಚಾಲಕರಾಗಿ ಹೇಗೆ ಕಾರ್ಯನಿರ್ವಹಿಸುತ್ತಿರುತ್ತಾರೆ ಎನ್ನುವುದನ್ನೂ ಅವಲಂಬಿಸಿರುತ್ತದೆ ಎಂದರು.ಚಾಲಕರಾದವರು ಕರ್ತವ್ಯಪ್ರೀತಿ, ಆಸಕ್ತಿ, ಕರ್ತವ್ಯಪರತೆಯಿಂದ ಕೆಲಸ ನಿರ್ವಹಿಸಿದಾಗ ಆಡಳಿತ ಯಂತ್ರಕ್ಕೂ ಬಲ ದೊರೆಯುತ್ತದೆ. ಇದು ಅಧಿಕಾರಿಗಳ ನಡುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳೊಂದಿಗೆ ಚಾಲಕರು ಮಾತನಾಡದಿದ್ದರೂ ಮನಸ್ಸಸು, ಭಾವನೆಗಳು ಮಾತನಾಡುತ್ತವೆ. ಅದರಲ್ಲೇ ಇಬ್ಬರ ನಡುವಿನ ಪ್ರೀತಿಯನ್ನು ಗಟ್ಟಿಗೊಳಿಸುತ್ತವೆ ಎಂದು ನುಡಿದರು.
ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಚಾಲಕರು ಕರ್ತವ್ಯಪ್ರಜ್ಞೆ, ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಆಡಳಿತಯಂತ್ರ ಸುಗಮವಾಗಿ ನಡೆಯುವುದರಲ್ಲಿ ನೀವೂ ಪಾತ್ರಧಾರಿಗಳು ಎಂಬ ಭಾವನೆ ಇರಬೇಕು. ಅಧಿಕಾರಿಗಳು ಸರ್ಕಾರಿ ಕೆಲಸ ಮೇಲೆ ತೆರಳುವಾಗ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ, ವಾಪಸ್ ಕರೆತರುವ ಜವಾಬ್ದಾರಿಯನ್ನು ನಿಭಾಯಿಸುವರು. ಇದು ನಿಮ್ಮ ಕರ್ತವ್ಯಪ್ರೀತಿಯನ್ನು ತೋರಿಸುತ್ತದೆ ಎಂದರು.ಸರ್ಕಾರಿ ವಾಹನ ಚಾಲಕರ ಕುಟುಂಬದಲ್ಲಿ ಅತಿ ಹೆಚ್ಚು ಅಂಕವನ್ನು ಪಡೆದಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಜಿಲ್ಲಾಧಿಕಾರಿ ಡಾ. ಕುಮಾರ ಅಭಿನಂದಿಸಿದರು.
ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಕೆ.ಎನ್. ರೂಪಶ್ರೀ, ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಟಿ.ರಾಜು, ವಾಹನ ಚಾಲಕರ ಸಂಘದ ರಾಜ್ಯಾಧ್ಯಕ್ಷ ಎನ್. ಶ್ರೀನಿವಾಸ್, ಸಂಘದ ಗೌರವಾಧ್ಯಕ್ಷ ಕೆ.ಶಿವಪ್ಪ, ಕಾರ್ಯಾಧ್ಯಕ್ಷ ತಿಮ್ಮರಾಜು, ಪ್ರಧಾನ ಕಾರ್ಯದರ್ಶಿ ಕೆ.ಎಸ್.ವಿಜಯಕುಮಾರ್, ಖಜಾಂಚಿಗಳಾದ ವೈ.ಗುಣಶೇಖರ್, ವಿಭಾಗೀಯ ಉಪಾಧ್ಯಕ್ಷ ಕನಕರಾಜು, ಮಾಜಿ ರಾಜ್ಯಾಧ್ಯಕ್ಷ ಜಿ.ಹಾಲೇಶ್ ಇನ್ನಿತರರಿದ್ದರು.