ಶಿರಸಿ: ಭಾರತದ ಮೂಲ ವೈದ್ಯ ಪದ್ಧತಿಯು ಇಂದಿನ ಕಾಲಮಾನದಲ್ಲಿ ವಿಶ್ವಮಾನ್ಯತೆ ಪಡೆಯುತ್ತಿರುವುದು ನಮ್ಮ ಆಯುರ್ವೇದ ವೈದ್ಯಪದ್ಧತಿಯ ಹಿರಿಮೆಯಾಗಿದೆ ಎಂದು ವೈದ್ಯ ಡಾ.ಜಗದೀಶ ಯಾಜಿ ಹೇಳಿದರು.ಅವರು ಇಲ್ಲಿನ ಸಂಕಲ್ಪ ಇಂಟಿಗ್ರೇಟೆಡ್ ಡೆವೆಲಪ್‌ಮೆಂಟ್ ಟ್ರಸ್ಟ್ ಸಹಯೋಗದಲ್ಲಿ ತಾಲೂಕಿನ ಇಸಳೂರಿನ ಸರ್ಕಾರಿ ಪೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂಗವಾಗಿ ಶಾಲೆ ಮಕ್ಕಳಿಗೆ ತರಕಾರಿ ಸಸ್ಯಗಳ ಬೀಜ ಮತ್ತು ಆಯುರ್ವೇದ ಸಸಿಗಳ ವಿತರಣೆ ಹಾಗೂ ಆರ್ಯವೇದದ ಮಹತ್ವ ಕುರಿತ ಉಪನ್ಯಾಸ ನೀಡಿದರು.
ನಮ್ಮ ಆರೋಗ್ಯ ಹದಗೆಡುವ ಮೊದಲು ಆಹಾರ ಪದ್ಧತಿಯಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು. ದೇಹ ಮತ್ತು ಮನಸ್ಸು ಶಾಂತವಾಗಿರುವಂತೆ ನೋಡಿಕೊಂಡು ದುಶ್ಚಟಗಳಿಂದ ದೂರವಿರಬೇಕು. ಸಕಾರಾತ್ಮಕ ಜೀವನ ನಡೆಸಿ ಎಂದು ಸಲಹೆ ನೀಡಿದರು.
ಲಕ್ಷ್ಮೀ ಶೆಟ್ಟರ್ ಮಾತನಾಡಿ, ಆಯುರ್ವೇದವು ನಮ್ಮ ಜೀವನದಲ್ಲಿ ವಹಿಸುವ ಪ್ರಾಮುಖ್ಯತೆಯನ್ನು ತಿಳಿಸಿದರು. ಸಂಕಲ್ಪ ಟ್ರಸ್ಟ್‌ನ ಅಧ್ಯಕ್ಷ ಕುಮಾರ ಪಟಗಾರ ಮಾತನಾಡಿ, ಸಂಸ್ಥೆಯ ಕಾರ್ಯವೈಖರಿ ಮತ್ತು ಆಯುಷ್ ಜ್ಞಾನ ಕಾರ್ಯಕ್ರಮದ ಬಗ್ಗೆ ಮಾಹಿತಿ ತಿಳಿಸಿದರು.ರಾಜ್ಯ ನೌಕರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಕಿರಣ್ ಎಚ್. ನಾಯ್ಕ ಮಾತನಾಡಿ, ಮಕ್ಕಳಿಗೆ ಪಾಠದ ಜೊತೆ ಆಟ ಮತ್ತು ಆಯುರ್ವೇದದ ಗುಣಲಕ್ಷಣಗಳನ್ನು ತಿಳಿಸಿಕೊಟ್ಟರು.