ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ನಗರದ ಹರ್ಷೋದಯ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಎಸ್ ಸಿ, ಎಸ್ ಟಿ, ವಿದ್ಯಾರ್ಥಿಗಳಿಗೆ ಸ್ಪಂದನ ವಿದ್ಯಾರ್ಥಿವೇತನ-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಚಿಂತನೆ ಬದಲಾಗಬೇಕಿದ್ದು, ಸಂಸದೀಯ ಪ್ರಜಾಪ್ರಭುತ್ವದ ಆಶಯ ಮತ್ತು ತತ್ವಗಳು ಹಾಳಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಅದನ್ನು ತೊಡೆದುಹಾಕುವ ಜವಾಬ್ದಾರಿ ಯುವಜನಾಂಗದ ಮೇಲಿದೆ ಎಂದರು.
ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ದೇಶದ ಭವಿಷ್ಯ ರೂಪಿಸಬೇಕು. ನಿಮ್ಮ ಭವಿಷ್ಯವನ್ನು ನೀವೇ ಕಟ್ಟಿಕೊಳ್ಳಿ ಎಂಬ ಬಿ.ಆರ್. ಅಂಬೇಡ್ಕರ್ ಅವರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರ್‍ಯಾಂಕ್ ಪಡೆದವರು ಮಾತ್ರ ಬುದ್ಧಿವಂತರು ಎಂಬ ಭಾವನೆ ಸರಿಯಲ್ಲ. ಪ್ರತಿಯೊಬ್ಬರಲ್ಲೂ ಪ್ರತಿಭೆ ಅಡಗಿದ್ದು, ಅವಕಾಶ ದೊರೆತರೆ ಏನನ್ನಾದರೂ ಸಾಧಿಸಬಹುದು. ಅವಕಾಶ ಪಡೆಯುವುದು ಪ್ರತಿಯೊಬ್ಬರ ಹಕ್ಕು ಎಂದರು.ಯಶಸ್ಸಿನ ಹಾದಿಯಲ್ಲಿ ಏರಿಳಿತಗಳು ಸಹಜ. ಆರಂಭದಲ್ಲಿ ಲಾಭ ಕಾಣದಿದ್ದರೂ ದೃಢಸಂಕಲ್ಪದಿಂದ ಮುನ್ನಡೆದ ಉದ್ಯಮಿ ಸಂದೀಪ್ ರೆಡ್ಡಿ ಇಂದು ಯಶಸ್ಸು ಕಂಡಿದ್ದಾರೆ. ವಿದ್ಯಾರ್ಥಿಗಳೂ ಸೋಲಿಗೆ ಹೆದರದೆ ಧೈರ್ಯದಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ, ಎಸ್‌ಎಸ್‌ಡಿ ರಾಜ್ಯಾಧ್ಯಕ್ಷ ವೆಂಕಟರೋಣಪ್ಪ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ, ಸಿಪಿಐಎಂ ನ ಎಸ್.ಲಕ್ಷ್ಮಯ್ಯ. ವಾಲ್ಮೀಕಿ ಸಂಘದ ಮುನಿಕೃಷ್ಣ, ಬಿಎಸ್‌ಪಿ ಮುಖಂಡ ಮುನಿಕೃಷ್ಣಪ್ಪ, ರೈತ ಜನ ಸೇನಾ ಜನನಾಯಕಿ ಸಿ.ಎನ್.ಸುಷ್ಮಾಶ್ರೀನಿವಾಸ್, ಅಣಕನೂರು ವೆಂಕಟೇಶ್ ಮತ್ತಿತರರು ಇದ್ದರು. ಸಿಕೆಬಿ-2