ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಜನರ ಬದುಕಿನಲ್ಲಿ ಬರುವ ಸಂಕಷ್ಟ ಮತ್ತು ಸಮಸ್ಯೆಗಳು ಹಲವಾರು. ಅನೇಕ ಸಮಸ್ಯೆಗಳಿಗೆ ಇವತ್ತಿಗೂ ಉತ್ತರ ಸಿಕ್ಕಿಲ್ಲ. ಆದರೆ ಜಗತ್ತು ಬೆಳೆಯುವುದು ನಿಂತಿಲ್ಲ. ಆದ್ದರಿಂದ ಕಾಡುವ ಶಕ್ತಿಗಿಂತ ಕಾಪಾಡುವ ಶಕ್ತಿ ಬಲು ದೊಡ್ಡದು ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.ರಂಭಾಪುರಿ ಪೀಠದಲ್ಲಿ ಪೌರ್ಣಿಮೆಯ ಅಂಗವಾಗಿ ಬುಧವಾರ ನಡೆದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಒಂದು ಕೆಲಸ ಕೈಗೆತ್ತಿಕೊಂಡಾಗ ಅದಕ್ಕೆ ಅಡೆತಡೆಗಳು ಎದುರಾದಾಗ ಪ್ರಯತ್ನ ನಿಲ್ಲಿಸಬಾರದು. ನೀರಿಗಿಳಿದ ಮೇಲೆ ಚಳಿ, ಮಳೆಯಾಗಲಿ ಬಂದರೂ ಲೆಕ್ಕಿಸದೇ ಹೆಜ್ಜೆ ಹಾಕಿದರೆ ಪ್ರತಿಫಲ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಸೋತೆ ಎಂದು ಹಿಂಜರಿಯದೇ ಮುಂದಿಟ್ಟ ಹೆಜ್ಜೆ ಹಿಂದಿಡಬಾರದು. ಮುಂದಿಟ್ಟ ಆ ಹೆಜ್ಜೆ ನಿನ್ನ ಜೀವನದ ಇತಿಹಾಸವನ್ನೇ ಸೃಷ್ಠಿಸುವ ಹೆಜ್ಜೆ ಯಾಕಾಗಿರಬಾರದು ಎಂದರು.ತಾಳ್ಮೆ ಮತ್ತು ಮೌನ ಅತ್ಯದ್ಭುತ ಆಯುಧಗಳು. ತಾಳ್ಮೆ ಮಾನಸಿಕವಾಗಿ ಗಟ್ಟಿಗೊಳಿಸಿದರೆ, ಮೌನ ಭಾವನಾತ್ಮಕವಾಗಿ ಗಟ್ಟಿಗೊಳಿಸುತ್ತದೆ. ಒಂದು ಹೂವು ಇನ್ನೊಂದು ಹೂವಿನೊಂದಿಗೆ ಸ್ಪರ್ಧೆಗಿಳಿಯುವುದಿಲ್ಲ. ಸುಂದರವಾಗಿ ಅರಳುವುದಷ್ಟೇ ಅವುಗಳ ಕೆಲಸ. ಹಾಗೆಯೇ ನಮ್ಮ ವ್ಯಕ್ತಿತ್ವವು ಹೂವಿನಂತಾದರೆ ಬದುಕು ಸಾರ್ಥಕ. ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನದ ಅನಂತ ಜ್ವಲಂತ ಸಮಸ್ಯೆಗಳಿಗೆ ಆಧ್ಯಾತ್ಮದ ಜ್ಞಾನ ಬೋಧಿಸುವುದರ ಮೂಲಕ ಜನ ಸಮುದಾಯದ ಬಾಳ ಬದುಕಿಗೆ ಬೆಳಕು ತೋರಿದ್ದಾರೆ ಎಂದರು.
ನೇತೃತ್ವ ವಹಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿ ಮಾತನಾಡಿ, ಮನುಷ್ಯ ಖಾಲಿ ಕೈಯಲ್ಲಿ ಬರುತ್ತಾನೆ. ಖಾಲಿ ಕೈಯಲ್ಲಿ ಹೋಗುತ್ತಾರೆ ಎಂದು ಬಹಳಷ್ಟು ಜನರು ತಿಳಿದಿರುತ್ತಾರೆ. ಆದರೆ ಮನುಷ್ಯ ಬರುವಾಗ ಭಾಗ್ಯದ ಜೊತೆ ಬರುತ್ತಾನೆ. ಹೋಗುವಾಗ ಕರ್ಮದ ಫಲದೊಂದಿಗೆ ಹೋಗುತ್ತಾನೆ. ಪ್ರೀತಿ ಮತ್ತು ಸಹಾನುಭೂತಿ ತುಂಬಿದ ಹೃದಯ ಆಂತರಿಕ ಶಕ್ತಿ ಇಚ್ಛಾಶಕ್ತಿ ಜೀವನದ ಸಂತೋಷ ನೆಮ್ಮದಿಗೆ ಮುಖ್ಯವೆಂಬುದನ್ನು ಯಾರೂ ಮರೆಯಬಾರದು ಎಂದರು.ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು, ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯರು, ಮಲಘಾಣ ಹಿರೇಮಠದ ರೇಣುಕ ಶಿವಾಚಾರ್ಯರು, ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ.ಲೋಕೇಶ, ದಾವಣಗೆರೆ ವೀರೇಶ, ಶ್ರೀಪೀಠದ ಲೆಕ್ಕಾಧಿಕಾರಿ ಸಂಕಪ್ಪ, ಚಂದ್ರಶೇಖರ, ರೇಣುಕಸ್ವಾಮಿ, ರವಿ ಹಿರೇಮಠ, ಪ್ರಭುಸ್ವಾಮಿ, ಗುರುಕುಲದ ಕುಲಪತಿ ಸಿದ್ಧಲಿಂಗಯ್ಯ ಶಾಸ್ತ್ರಿ ಮತ್ತಿತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ರಂಭಾಪುರಿ ಬೆಳಗು ಸೆಪ್ಟಂಬರ್ ಸಂಚಿಕೆಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು.ಪ್ರಾತಃಕಾಲ ಶ್ರೀ ಜಗದ್ಗುರು ರಂಭಾಪುರಿ ಪೀಠದ ಎಲ್ಲ ದೈವಗಳಿಗೆ ಪೌರ್ಣಿಮೆಯ ಅಂಗವಾಗಿ ವಿಶೇಷ ಹೂ ಅಲಂಕಾರ ಪೂಜೆಗಳು ನಡೆಯಿತು.