ಎಳ್ಳು, ಅಲಸಂದೆ ಬಿತ್ತನೆ ಬೆಳೆಗೆ ಕೈಕೊಟ್ಟ ಪೂರ್ವ ಮುಂಗಾರು ಮಳೆ

KannadaprabhaNewsNetwork |  
Published : May 20, 2026, 12:30 AM IST
19ಕೆಎಂಎನ್ ಡಿ20 | Kannada Prabha

ಸಾರಾಂಶ

ಈ ಬಾರಿ ಪೂರ್ವ ಮುಂಗಾರಿನಲ್ಲಿ ವಾಡಿಕೆಯಂತೆ ಮಳೆಯಾಗಿದ್ದರೆ ತಾಲೂಕಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ಎಳ್ಳು ಮತ್ತು ಅಲಸಂದೆ ಬೆಳೆ ಬೆಳೆದು ಕಟಾವಿನ ನಂತರ ಮಾರಾಟ ಮಾಡಿ ಅದರಿಂದ ಬರುವ ಹಣದಲ್ಲಿ ಜಮೀನಿನ ಉಳುಮೆ ಮಾಡಿಸಿ ಮುಂಗಾರು ಕೃಷಿ ಚಟುವಟಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪೂರ್ವ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ತಾಲೂಕಿನ ರೈತರಿಗೆ ಮುಂಗಾರು ಹಂಗಾಮಿನ ಉಳುಮೆ ಮತ್ತು ಬಿತ್ತನೆ ಕಾರ್ಯದ ಖರ್ಚು ವೆಚ್ಚಗಳಿಗೆ ನೆರವಾಗುತ್ತಿದ್ದ ಎಳ್ಳು ಮತ್ತು ಅಲಸಂದೆ ಬೆಳೆ ಈ ಬಾರಿ ಇಲ್ಲದಿರುವುದು ಬಹುತೇಕ ರೈತರಿಗೆ ಸಂಕಷ್ಟಕ್ಕೀಡಾಗುವಂತೆ ಮಾಡಿದೆ.

ವಾಡಿಕೆಯಂತೆ ಈ ವೇಳೆಗೆ ತಾಲೂಕಿನಲ್ಲಿ 105.50 ಮಿ.ಮೀಟರ್‌ನಷ್ಟು ಮಳೆಯಾಗಿ 3 ಸಾವಿರ ಹೆಕ್ಟೇರ್‌ನಲ್ಲಿ ಅಲಸಂದೆ ಹಾಗೂ 2150 ಹೆಕ್ಟೇರ್‌ನಲ್ಲಿ ಎಳ್ಳು ಬಿತ್ತನೆಯಾಗಿ ಬೆಳವಣಿಗೆ ಹಂತದಲ್ಲಿರಬೇಕಿತ್ತು. ಆದರೆ, ಕಳೆದ ಜನವರಿಯಿಂದ ಈವರೆಗೆ ಕೇವಲ 43.50 ಮಿ.ಮೀ.ನಷ್ಟು ಮಳೆಯಾಗಿರುವ ಹಿನ್ನೆಲೆಯಲ್ಲಿ 355 ಹೆಕ್ಟೇರ್‌ನಲ್ಲಿ ಅಲಸಂದೆ ಹಾಗೂ 50 ಹೆಕ್ಟೇರ್‌ನಲ್ಲಿ ಎಳ್ಳು ಬಿತ್ತನೆಯಾಗಿದೆ. ಕಳೆದ ವರ್ಷ ಈ ವೇಳೆಗೆ 361 ಮಿ.ಮೀ.ನಷ್ಟು ಮಳೆಯಾಗಿತ್ತು. ಎಳ್ಳು ಮತ್ತು ಅಲಸಂದೆ ಬೆಳೆಯನ್ನೂ ಸಹ ರೈತರು ಉತ್ತಮವಾಗಿ ಬೆಳೆದಿದ್ದರು.

ಈ ಬಾರಿ ಪೂರ್ವ ಮುಂಗಾರಿನಲ್ಲಿ ವಾಡಿಕೆಯಂತೆ ಮಳೆಯಾಗಿದ್ದರೆ ತಾಲೂಕಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ಎಳ್ಳು ಮತ್ತು ಅಲಸಂದೆ ಬೆಳೆ ಬೆಳೆದು ಕಟಾವಿನ ನಂತರ ಮಾರಾಟ ಮಾಡಿ ಅದರಿಂದ ಬರುವ ಹಣದಲ್ಲಿ ಜಮೀನಿನ ಉಳುಮೆ ಮಾಡಿಸಿ ಮುಂಗಾರು ಕೃಷಿ ಚಟುವಟಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಬಿತ್ತನೆ ಮಾಡಲು ರಾಗಿ, ಗೊಬ್ಬರ ಖರೀದಿಸುವ ಜೊತೆಗೆ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ದಾಖಲು ಮಾಡಲು ಬಳಸಿಕೊಳ್ಳುತ್ತಿದ್ದರು.

ಆತಂಕದಲ್ಲಿರುವ ರೈತರು:

ಪೂರ್ವ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರೈತರು ಕೃಷಿ ಜಮೀನುಗಳನ್ನು ಉಳುಮೆ ಮಾಡಿಸಲಾಗುತ್ತಿಲ್ಲ. ರೈತರು ಕೊರೆಸಿರುವ ಕೊಳವೆ ಬಾವಿಗಳಲ್ಲಿ ದಿನಕಳೆದಂತೆ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಜಾನುವಾರುಗಳಿಗೆ ಹಸಿ ಮೇವಿನ ಕೊರತೆಯೂ ಎದುರಾಗುತ್ತಿದೆ. ನಿರೀಕ್ಷೆಯಂತೆ ಮುಂಗಾರು ಮಳೆ ಬೀಳುವುದೋ ಇಲ್ಲವೋ ಎಂಬ ಆತಂಕದಲ್ಲಿರುವ ರೈತರು ತಲೆಗೆ ಕೈಕೊಟ್ಟು ಆಕಾಶದತ್ತ ನೋಡುವಂತಾಗಿದೆ.

ತಾಲೂಕಿನಲ್ಲಿ ಇಷ್ಟರ ವೇಳೆಗೆ 2150 ಹೆಕ್ಟೇರ್‌ನಲ್ಲಿ ಎಳ್ಳು ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ, ಪೂರ್ವ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಅಲ್ಲಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗಿದ್ದು ಕೇವಲ 50 ಹೆಕ್ಟೇರ್‌ನಲ್ಲಿ ಮಾತ್ರ ಎಳ್ಳು ಬಿತ್ತನೆಯಾಗಿದೆ. ಇಲಾಖೆಯಲ್ಲಿ 13 ಕ್ವಿಂಟಲ್‌ನಷ್ಟು ಅಲಸಂದೆ ಬಿತ್ತನೆ ಬೀಜ ದಾಸ್ತಾನಿದೆ. ಅಲಸಂದೆ ಬಿತ್ತನೆಗೆ ಇನ್ನೂ ಕಾಲಾವಕಾಶವಿದ್ದು, ಕಳೆದ ಎರಡು ದಿನದಿಂದ ತಾಲೂಕಿನ ಹಲವೆಡೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಿಯಾಯ್ತಿ ದರದಲ್ಲಿ ಅಲಸಂದೆ ಖರೀದಿಸಿ ಬಿತ್ತನೆ ಮಾಡಬಹುದು.

-ಆರ್.ಹರೀಶ್, ಸಹಾಯಕ ಕೃಷಿ ನಿರ್ದೇಶಕರು, ನಾಗಮಂಗಲ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನನಗೆ ವಿಸಿಟಿಂಗ್ ಕಾರ್ಡ್‌ ಜಿಲ್ಲಾಧ್ಯಕ್ಷರು ಬೇಡ: ಎಚ್ಡಿಕೆ
ವನ್ಯಜೀವಿ-ಮಾನವ ಸಂಘರ್ಘ: ಐದೇ ವರ್ಷದಲ್ಲಿ 270 ಸಾವು!