ಅಧ್ಯಕ್ಷರು ನನ್ನನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ : ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ

KannadaprabhaNewsNetwork |  
Published : Jul 4, 2025 11:54 PM ISTUpdated : Jul 5, 2025 12:46 PM IST
೪ಬಿಎಸ್ವಿ೦೧- ಬಸವನಬಾಗೇವಾಡಿ ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ. | Kannada Prabha

ಸಾರಾಂಶ

  ಅಧಿಕಾರ ವಹಿಸಿಕೊಂಡ ನಂತರ ಯಾವುದೇ ಸಭೆಗಳನ್ನು ಕರೆಯಲು, ಸಾಮಾನ್ಯ ಸಭೆ ಕರೆಯಲು ನನ್ನನ್ನು ಅಧ್ಯಕ್ಷರು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ ಆರೋಪಿಸಿದರು.

 ಬಸವನ ಬಾಗೇವಾಡಿ :  ಪಟ್ಟಣದ ಅಭಿವೃದ್ಧಿ ಮಾಡುತ್ತಾರೆ ಎಂಬ ವಿಶ್ವಾಸದ ಮೇಲೆ ಸಚಿವ ಶಿವಾನಂದ ಪಾಟೀಲರು ಪುರಸಭೆಗೆ ಅಧ್ಯಕ್ಷ ಸ್ಥಾನಕ್ಕೆ ಜಗದೇವಿ ಗುಂಡಳ್ಳಿ, ಉಪಾಧ್ಯಕ್ಷ ಸ್ಥಾನಕ್ಕೆ ನನ್ನನ್ನು ಸೇರಿದಂತೆ ಸದಸ್ಯರಿಗೆ ಮಹತ್ತರ ಜವಾಬ್ದಾರಿ ನೀಡಿದ್ದಾರೆ. ಆದರೆ, ಅಧಿಕಾರ ವಹಿಸಿಕೊಂಡ ನಂತರ ಯಾವುದೇ ಸಭೆಗಳನ್ನು ಕರೆಯಲು, ಸಾಮಾನ್ಯ ಸಭೆ ಕರೆಯಲು ನನ್ನನ್ನು ಅಧ್ಯಕ್ಷರು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೀಗ ಪುರಸಭೆ ಅಧ್ಯಕ್ಷರು ಕಾಮಗಾರಿಗಳನ್ನು ಸರಿಯಾಗಿ ಪರಿಶೀಲನೆ ಮಾಡದೇ ಹಾಗೂ ಉಪಾಧ್ಯಕ್ಷರ ಗಮನಕ್ಕೂ ತರದೇ ಪುರಸಭೆಯ ವಿವಿಧ ಬಿಲ್‌ಗಳಿಗೆ ಸಹಿ ಮಾಡಿದ್ದಾರೆ. ಪಟ್ಟಣದ ಪುರಸಭೆ ವ್ಯಾಪ್ತಿಯ ೨೩ ವಾರ್ಡ್‌ಗಳಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲನೆ ಮಾಡದೇ ಅಧ್ಯಕ್ಷರು ಬಿಲ್‌ಗಳಿಗೆ ಸಹಿ ಮಾಡಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಹೆಬ್ಬಾಳದ ಮೋಟಾರ್ ರಿಪೇರಿಗೆಂದು ಎರಡು ಸಲ ತಲಾ ₹ ೩ ಲಕ್ಷ ಸೇರಿ ಒಟ್ಟು ೬ ಲಕ್ಷ ಬಿಲ್ ತೆಗೆಯಲಾಗಿದೆ. ಅಲ್ಲದೇ, ಇತರೆ ಎಂದು ₹ ೧೦ ಲಕ್ಷ ಬಿಲ್ ತೆಗೆಯಲಾಗಿದೆ. ಇದರ ಬಗ್ಗೆ ಅಧ್ಯಕ್ಷರನ್ನು ಕೇಳಿದರೆ ಬಿಲ್‌ಗಳಿಗೆ ಸಹಿ ಮಾಡಿರುವುದಾಗಿ ಹೇಳುತ್ತಾರೆ. ಕಾಮಗಾರಿ ಪರಿಶೀಲನೆ ಮಾಡದೇ ಅವರು ಬಿಲ್‌ಗಳಿಗೆ ಸಹಿ ಮಾಡಿದ್ದಾರೆ. ಇದುವರೆಗೂ ಮೂರು ತಿಂಗಳಲ್ಲಿ ಆದ ₹ ೨೫ ರಿಂದ ೩೦ ಲಕ್ಷ ಬಿಲ್‌ನಲ್ಲಿ ಸಂಶಯ ಮೂಡುತ್ತಿದೆ ಎಂದರು.

ಪಟ್ಟಣದ ಎಲ್ಲ ೨೩ ವಾರ್ಡ್‌ಗಳಲ್ಲಿರುವ ಸಮಸ್ಯೆಗಳನ್ನು ಅಧ್ಯಕ್ಷರು, ಉಪಾಧ್ಯಕ್ಷರು, ಆಯಾ ವಾರ್ಡಿನ ಸದಸ್ಯರು ಸಮನ್ವಯತೆಯೊಂದಿಗೆ ಬಗೆ ಹರಿಸಲು ವಾರ್ಡ್ ಸಭೆ ನಡೆಸಬೇಕು. ಇದರಿಂದಾಗಿ ಪಟ್ಟಣದಲ್ಲಿ ಅಭಿವೃದ್ಧಿ ಮಾಡಲು ಪೂರಕವಾಗುತ್ತದೆ. ಸಚಿವರು ಈಗಾಗಲೇ ಪಟ್ಟಣ ಸೇರಿದಂತೆ ಮತ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಪಟ್ಟಣದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಚಿವ ಶಿವಾನಂದ ಪಾಟೀಲ ಅವರೊಂದಿಗೆ ಮಾತನಾಡಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿಕೊಳ್ಳಬಹುದು ಎಂದು ಅಭಿಪ್ರಾಯ ಪಟ್ಟರು.

ಪ್ರತಿ ಸಭೆಯಲ್ಲಿ ಅಧ್ಯಕ್ಷರ ಪತಿ ಹಾಜರಾಗುತ್ತಿದ್ದಾರೆ. ಪುರಸಭೆ ಕಾರ್ಯಗಳಲ್ಲಿ ಅವರ ಪತಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದರ ಬಗ್ಗೆ ಬಹಿರಂಗವಾಗಿ ಸಾಮಾನ್ಯ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ನನ್ನೊಂದಿಗೆ ಅಧ್ಯಕ್ಷರು ವಾಗ್ವಾದ ಮಾಡಿದ್ದರು. ಇನ್ನೂ ಪಟ್ಟಣದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಬಿಲ್‌ಗಳಿಗೆ ಕಾಮಗಾರಿ ಪರಿಶೀಲನೆ ಮಾಡದೇ ಸಹಿ ಮಾಡುತ್ತಿದ್ದಾರೆ. ಕಾಮಗಾರಿ ಪೂರ್ಣಗೊಂಡಿದೆ. ಅದು ಯಾವ ಸ್ಥಿತಿಯಲ್ಲಿದೆ ಎಂದು ಪರಿಶೀಲನೆ ಮಾಡದೆ, ವಸ್ತು ಸ್ಥಿತಿ ಪರಿಶೀಲಿಸದೇ ಬಿಲ್‌ಗಳಿಗೆ ಸಹಿ ಹಾಕುತ್ತಿದ್ದಾರೆ. ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ಕಾಮಗಾರಿ ಆಗದೇ ಬಿಲ್ ಮಾಡಿರುವುದು ಮೇಲ್ನೋಟಕ್ಕೆ ನನ್ನ ಗಮನಕ್ಕೆ ಬಂದಿದೆ. ಇದು ಹೀಗೆ ಮುಂದುವರಿದರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದರು.

ಪುರಸಭೆ ಕಾರ್ಯಗಳಲ್ಲಿ ಅಧ್ಯಕ್ಷರ ಪತಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಸಾಮಾನ್ಯ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ನನ್ನೊಂದಿಗೆ ಅಧ್ಯಕ್ಷರು ವಾಗ್ವಾದ ಮಾಡಿದರು. ಅಭಿವೃದ್ಧಿ ಕಾಮಗಾರಿಗಳ ಬಿಲ್‌ಗಳಿಗೆ ಕಾಮಗಾರಿ ಪರಿಶೀಲನೆ ಮಾಡದೇ ಸಹಿ ಮಾಡುತ್ತಿದ್ದಾರೆ. ಕಾಮಗಾರಿ ಪೂರ್ಣಗೊಂಡಿದೆ. ಅದು ಯಾವ ಸ್ಥಿತಿಯಲ್ಲಿದೆ ಎಂದು ಪರಿಶೀಲನೆ ಮಾಡದೆ, ವಸ್ತು ಸ್ಥಿತಿ ನೋಡದೇ ಬಿಲ್‌ಗಳಿಗೆ ಸಹಿ ಹಾಕಲಾಗುತ್ತಿದೆ. ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ಕಾಮಗಾರಿ ಆಗದೇ ಬಿಲ್ ಮಾಡಿದ್ದು ನನ್ನ ಗಮನಕ್ಕೆ ಬಂದಿದೆ. ಇದು ಹೀಗೆ ಮುಂದುವರಿದರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ.

ಅಶೋಕ ಹಾರಿವಾಳ, ಪುರಸಭೆ ಉಪಾಧ್ಯಕ್ಷ

PREV
Read more Articles on