ತಾಲೂಕಿನ ಮೂಗಲಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಶೋಭಾ (45) ಮೃತ ಮಹಿಳೆ. ತೋಟದಲ್ಲಿ ತನ್ನ ತಾಯಿ ಹಾಗೂ ನೆರೆಮನೆಯ ಮಹಿಳೆಯೊಂದಿಗೆ ಕೆಲಸ ಮಾಡುತ್ತಿದ್ದ ವೇಳೆ ದಾಳಿ ನಡೆಸಿದೆ. ಈ ವೇಳೆ ಇಬ್ಬರು ಮಹಿಳೆಯರು ತೋಟದ ಕೆಳಭಾಗಕ್ಕೆ ಓಡಿ ತಪ್ಪಿಸಿಕೊಂಡಿದ್ದಾರೆ. ತೋಟದ ಮೇಲ್ಬಾಗಕ್ಕೆ ಓಡಿದ ಮಹಿಳೆಯನ್ನು ಅಟ್ಟಿಸಿಕೊಂಡು ಹೋಗಿ ತುಳಿದು ಹತ್ಯೆ ಮಾಡಿದೆ.
ಕನ್ನಡಪ್ರಭವಾರ್ತೆ ಸಕಲೇಶಪುರ
ತಾಲೂಕಿನ ಮೂಗಲಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಶೋಭಾ (45) ಮೃತ ಮಹಿಳೆ. ತೋಟದಲ್ಲಿ ತನ್ನ ತಾಯಿ ಹಾಗೂ ನೆರೆಮನೆಯ ಮಹಿಳೆಯೊಂದಿಗೆ ಕೆಲಸ ಮಾಡುತ್ತಿದ್ದ ವೇಳೆ ದಾಳಿ ನಡೆಸಿದೆ. ಈ ವೇಳೆ ಇಬ್ಬರು ಮಹಿಳೆಯರು ತೋಟದ ಕೆಳಭಾಗಕ್ಕೆ ಓಡಿ ತಪ್ಪಿಸಿಕೊಂಡಿದ್ದಾರೆ. ತೋಟದ ಮೇಲ್ಬಾಗಕ್ಕೆ ಓಡಿದ ಮಹಿಳೆಯನ್ನು ಅಟ್ಟಿಸಿಕೊಂಡು ಹೋಗಿ ತುಳಿದು ಹತ್ಯೆ ಮಾಡಿದೆ.ಈ ಮಹಿಳೆಯ ಮೇಲೆ ದಾಳಿ ನಡೆಸಿದ ಆನೆ ಮತ್ತೆ ತೋಟದೊಳಗೆ ಬಂದು ಇಬ್ಬರು ಮಹಿಳೆಯನ್ನು ಹುಡುಕಾಡಿರುವ ದೃಶ್ಯವನ್ನು ಗ್ರಾಮಸ್ಥರು ವೀಕ್ಷಿಸಿದ್ದಾರೆ. ಆ ವೇಳೆಗೆ ಇಬ್ಬರು ಮಹಿಳೆಯರು ಓಡಿ ಗ್ರಾಮದ ಹರೀಶ್ ಎಂಬುವರ ಮನೆ ಮುಂಭಾಗ ಆಶ್ರಯ ಪಡೆದಿರುವುದನ್ನು ಗಮನಿಸಿ ಬೇಲೂರು-ಸಕಲೇಶಪುರ ರಾಜ್ಯಹೆದ್ದಾರಿ ದಾಟಿ ಟಾಟಾ ಎಸ್ಟೇಟ್ ಸೇರಿದ್ದು ಮಹಿಳೆಯ ಮೃತದೇಹ ಮೇಲೆತ್ತುವವರೆಗೂ ಹಂತಕ ಆನೆ ಕೂಗುತ್ತಿದ್ದ ಶಬ್ದ ನೆರೆದಿದ್ದವರಿಗೆ ಕೇಳುತಿತ್ತು.
ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ದೂರಕಿಸಬೇಕು ಹಾಗೂ ಮೃತ ಮಹಿಳೆಯ ಕುಟುಂಬಕ್ಕೆ ೫೦ ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯಹೆದ್ದಾರಿ ೧೧೨ನ್ನು ಬಂದ್ ಮಾಡಿ ಪ್ರತಿಭಟಿಸಲಾಯಿತು.ಪ್ರತಿಭಟನಾಕಾರರು ಮಾತನಾಡಿ, ತಾಲೂಕಿನಲ್ಲಿ ಎರಡು ದಶಕದಲ್ಲಿ ೯೨ ಜನರು ಕಾಡಾನೆ ದಾಳಿಗೆ ತುತ್ತಾಗಿದ್ದಾರೆ. ಆದರೂ ಆಳುವ ಸರ್ಕಾರಗಳಿಗೆ ಕಣ್ಣು ತೆರೆಯುತ್ತಿಲ್ಲ. ಬೆಳಕು ಮೂಡಿದ ನಂತರ ಮನೆ ಬಿಡಬೇಕು, ಕತ್ತಲಾಗುವ ಮುನ್ನ ಮನೆ ಸೇರಬೇಕು. ತೋಟಗದ್ದೆಗಳಿಗೆ ನಮ್ಮದಿಯಾಗಿ ಹೋಗಿಬರುವುದು ಅಸಾಧ್ಯವಾಗಿದೆ. ಆದ್ದರಿಂದ ಸ್ಥಳಕ್ಕೆ ಅರಣ್ಯ ಮಂತ್ರಿ ಆಗಮಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಹೆದ್ದಾರಿ ಬಂದ್ ನಿಂದಾಗಿ ಬೇಲೂರು-ಬೆಳಗೊಡು-ಸಕಲೇಶಪುರ ಮಾರ್ಗದ ಸಂಚಾರ ಕೆಲಕಾಲ ವ್ಯತ್ಯಯವಾಗಿತ್ತು.
ಸ್ಥಳಕ್ಕೆ ಬಂದ ಶಾಸಕ ಸೀಮೆಂಟ್ ಮಂಜು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಮೃತಕುಟುಂಬಕ್ಕೆ ೫೦ ಲಕ್ಷ ಪರಿಹಾರ ಕೊಡಬೇಕು ಎಂಬುದು ನಮ್ಮ ಆಗ್ರಹ. ಆದರೆ, ಪರಿಹಾರ ಮೊತ್ತದ ಘೋಷಣೆ ಸಚಿವ ಸಂಪುಟದಲ್ಲಿ ಆಗಬೇಕಿದೆ. ಈ ಬಗ್ಗೆ ಅರಣ್ಯ ಸಚಿವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ತಮ್ಮ ಬೇಡಿಕೆಯನ್ನು ತಿಳಿಸಿದ್ದೇನೆ. ಜ.೧೬ ರಂದು ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೆಗೌಡರ ನೇತೃತ್ವದಲ್ಲಿ ನಡೆಯಲಿರುವ ಜನಸಂಪರ್ಕ ಸಭೆಗೆ ಅರಣ್ಯ ಸಚಿವರು ಆಗಮಿಸಲಿದ್ದಾರೆ. ಅಂದು ನಡೆಯಲಿರುವ ಜನಸಂಪರ್ಕ ಸಭೆಗೂ ಮುನ್ನ ಹೋರಾಟಗಾರರು, ಬೆಳೆಗಾರ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿ ಪರಿಹಾರ ಮೊತ್ತ ಹಾಗೂ ಕಾಡಾನೆ ಸಮಸ್ಯೆ ಪರಿಹಾರದ ಬಗ್ಗೆ ಚರ್ಚೆ ನಡೆಸೋಣ ಎಂದರು. ಆದರೂ ಪಟ್ಟು ಸಡಿಲಿಸದ ಪ್ರತಿಭಟನಕಾರರು ಸ್ಥಳದಲ್ಲೆ ಪರಿಹಾರದ ಮೊತ್ತ ಘೋಷಣೆಯಾಗಬೇಕು ಎಂದು ಪಟ್ಟುಹಿಡಿದರು. ಜಿಲ್ಲಾಧಿಕಾರಿ ಲತಾಕುಮಾರಿ ಮಾತನಾಡಿ, ಕಾಡನೆಯಿಂದ ಮಹಿಳೆ ಮೃತಪಟ್ಟಿರುವುದು ಬೇಸರದ ವಿಚಾರ. ತೋಟಗದ್ದೆಗಳಿಗೆ ಹೋಗಲು ಹೆದರಬೇಕಾಗಿರುವುದು ದುರದೃಷ್ಟಕರ. ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಜನರು ಮುಂಜಾಗ್ರತೆ ವಹಿಸುವುದು ಅವಶ್ಯಕ. ಸಮಸ್ಯೆ ಪರಿಹಾರದ ಬಗ್ಗೆ ತಜ್ಞರೊಂದಿಗೆ ಚರ್ಚೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಿದ್ದೇನೆ. ಮಹಿಳೆಯ ಸಾವಿನ ತನಿಖೆಗಾಗಿಯೆ ತಂಡ ರಚಿಸಿ ವರಧಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದರು.ಮೃತದೇಹ ಎತ್ತಲು ಒಪ್ಪಿಗೆ:ಜನಪ್ರತಿನಿಧಿಗಳು ಹಾಗೂ ಹಿರಿಯ ಅದಿಕಾರಿಗಳು ನಿರಂತರ ಚರ್ಚೆಯ ನಂತರ ಜಿಲ್ಲಾಧಿಕಾರಿ ಪ್ರತಿಭಟನಕಾರರೊಂದಿಗೆ ಮಾತನಾಡಿ, ಮೃತ ಮಹಿಳೆಯ ಕುಟುಂಬಕ್ಕೆ ಸರ್ಕಾರದ ಎಲ್ಲ ನೆರವನ್ನು ನೀಡಲಾಗುವುದು ಹಾಗೂ ಸ್ಥಳದಲ್ಲಿ ೨೦ ಲಕ್ಷ ಪರಿಹಾರದ ಚೆಕ್ ನೀಡುವುದಲ್ಲದೆ ಜಿಲ್ಲಾಧಿಕಾರಿ ಪರಿಹಾರ ನಿಧಿಯಿಂದ ನಾಲ್ಕು ಲಕ್ಷ ನೀಡಲಾಗುವುದು ಎಂಬ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದೆ ಪಡೆಯಲಾಯಿತು.ಜಿಲ್ಲಾಧಿಕಾರಿ ಮಾತಿಗೆ ಆಕ್ರೋಶ:
ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ರೈತರು ತೋಟಗದ್ದೆಗಳಿಗೆ ಬೆಳಿಗ್ಗೆ ೯ರ ನಂತರ ತೆರಳಬೇಕು. ಸಂಜೆ ಕತ್ತಲಾಗುವ ಮುನ್ನ ಮನೆ ಸೇರಬೇಕು ಎಂಬ ಸಲಹೆ ನೀಡಿದರು. ಇದರಿಂದ ಕೆರಳಿ ಕೆಂಡವಾದ ಜನ ಗ್ರಾಮಗಳಿಗೆ ಬೆಳಗ್ಗೆ ೮ ಗಂಟೆಯ ವೇಳೆ ಹಾಲಿನ ಲಾರಿಗಳು ಬರುತ್ತವೆ. ಲಾರಿ ಹೋದ ನಂತರ ಹಾಲು ಯಾರಿಗೆ ಕೊಡುವುದು. ೯ ಗಂಟೆ ನಂತರ ಯಾರು ನಮಗೆ ಕೆಲಸ ನೀಡುತ್ತಾರೆ. ತಮ್ಮ ಇಲಾಖೆಗಳ ಕೆಲಸವನ್ನು ತಾವುಗಳ ಸರಿಯಾಗಿ ನಿಭಾಯಿಸಲು ಸೂಚಿಸಿ. ಇದನ್ನು ಬಿಟ್ಟು ನಮಗೆ ಬುದ್ಧಿ ಹೇಳಲು ಬರಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಘಟನಾ ಸ್ಥಳದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಭಟನೆ ನೇತೃತ್ವವನ್ನು ಯಡೇಹಳ್ಳಿ ಆರ್ ಮಂಜುನಾಥ್, ರೇಮಶ್ ಪೂಜಾರಿ ಮುಂತಾದವರು ವಹಿಸಿದ್ದರು. ಎಸ್ಪಿ ಶುಭನ್ವಿತಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭಕುಮಾರ್, ಸಹಾಯಕ ಪೋಲಿಸ್ ವರೀಷ್ಠಾಧಿಕಾರಿ ತಮ್ಮಯ್ಯ. ಉಪವಿಭಾಗಾಧಿಕಾರಿ ಮಂಜುನಾಥ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್‌ಕುಮಾರ್, ಡಿವೈಎಸ್‌ಪಿ ಮಾಲತೀಶ್, ತಹಸೀಲ್ದಾರ್ ಸುಪ್ರೀತಾ ಹಲವರು ಇದ್ದರು.