ಸವಾಯಿ ಗಂಧರ್ವರ ಹೆಸರಿನ ಪುರಸ್ಕಾರ ಪುಣ್ಯದ ಗೌರವ: ಪಂ. ಕೈವಲ್ಯಕುಮಾರ ಗುರವ

KannadaprabhaNewsNetwork |  
Published : Oct 05, 2026, 02:00 AM IST
ಕಾರ್ಯಕ್ರಮದಲ್ಲಿ ಪಂ. ಕೈವಲ್ಯಕುಮಾರ ಎಸ್. ಗುರವ ಅವರಿಗೆ ರಾಷ್ಟ್ರೀಯ ಸಂಗೀತ ಪುರಸ್ಕಾರ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ಸವಾಯಿ ಗಂಧರ್ವರ ಪುಣ್ಯತಿಥಿ ಅಂಗವಾಗಿ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಗೀತ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ಸಂತಸ ತಂದಿದೆ.

ಸವಾಯಿ ಗಂಧರ್ವ ಪುಣ್ಯತಿಥಿ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕುಂದಗೋಳ

ಸವಾಯಿ ಗಂಧರ್ವರ ಪುಣ್ಯತಿಥಿ ಅಂಗವಾಗಿ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಗೀತ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ಸಂತಸ ತಂದಿದೆ. ಅವರ ಹೆಸರಿನ ರಾಷ್ಟ್ರೀಯ ಸಂಗೀತ ಪುರಸ್ಕಾರ ಸ್ವೀಕರಿಸಿರುವುದು ಅತ್ಯಂತ ಪುಣ್ಯದ ಸಂಗತಿ ಎಂದು ಪಂ. ಕೈವಲ್ಯಕುಮಾರ ಎಸ್. ಗುರವ ಹೇಳಿದರು.

ಪಟ್ಟಣದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಭಾನುವಾರ ಸಂಜೆ ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸವಾಯಿ ಗಂಧರ್ವರ 74ನೇ ಪುಣ್ಯತಿಥಿ ಕಾರ್ಯಕ್ರಮ ಉದ್ಘಾಟಿಸಿ, ರಾಷ್ಟ್ರೀಯ ಸಂಗೀತ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

ಕುಂದಗೋಳದ ನಾಡಿಗೇರ ವಾಡೆ ಅನೇಕ ಶ್ರೇಷ್ಠ ಸಂಗೀತಗಾರರನ್ನು ನಾಡಿಗೆ ನೀಡಿದೆ. ಶ್ರೀಮಂತ ನಾಡಿಗೇರ, ಗಂಗೂಬಾಯಿ ಹಾನಗಲ್ ಸೇರಿದಂತೆ ಹಲವು ಮಹನೀಯರು ಸಂಗೀತವನ್ನು ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ ಪಸರಿಸಿದ್ದಾರೆ. ಅಂತಹ ಮಹನೀಯರ ಪುಣ್ಯಭೂಮಿಯಲ್ಲಿ ಗೌರವ ದೊರೆತಿರುವುದು ಹೆಮ್ಮೆಯ ಸಂಗತಿ ಎಂದರು.

ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿ, ನಾಡಿಗೇರ ವಾಡೆ ಅನೇಕ ಸಾಹಿತಿಗಳು, ಸಂಗೀತಗಾರರು ಹಾಗೂ ಕಲಾವಿದರನ್ನು ನಾಡಿಗೆ ನೀಡಿದೆ. ಇಂತಹ ಪುಣ್ಯಭೂಮಿಯಲ್ಲಿ ಪ್ರತಿವರ್ಷ ಸಂಗೀತ ಕಾರ್ಯಕ್ರಮ ಆಯೋಜಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಅರ್ಜುನ ನಾಡಿಗೇರ ಮಾತನಾಡಿ, ಮುಂದಿನ ವರ್ಷ ನಾನಾಸಾಹೇಬ ನಾಡಿಗೇರ ಅವರ 50ನೇ ಪುಣ್ಯಸ್ಮರಣೆ ಹಾಗೂ ಸವಾಯಿ ಗಂಧರ್ವರ 75ನೇ ಪುಣ್ಯಸ್ಮರಣೆ ಅಂಗವಾಗಿ ಮೂರು ದಿನಗಳ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುವುದು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಇದಕ್ಕೂ ಮುನ್ನ ಪದ್ಮಶ್ರೀ ಪುರಸ್ಕೃತ ಪಂಡಿತ ಎಂ. ವೆಂಕಟೇಶಕುಮಾರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಪಂ. ಜಯತೀರ್ಥ ಮೇವುಂಡಿ, ವಿದುಷಿ ಸುನಿತಾ ಟಕಾರೆ, ದುಶ್ಯಂತ ರುಪೋಲಿಯಾ, ಸದಾಶಿವ ಮುಳೆ, ಭಾಗ್ಯಶ್ರೀ ದೇಶಪಾಂಡೆ, ಪಂ. ಅಮಿತಾನಂದ ರಾಯ್, ಪಂ. ವಿನಾಯಕ ಹೆಗಡೆ ಸೇರಿದಂತೆ ಹಲವು ಕಲಾವಿದರು ಸಂಗೀತ ಪ್ರಸ್ತುತಿಪಡಿಸಿದರು.

ಸವಾಯಿ ಗಂಧರ್ವ ಸಂಸ್ಥೆಯ ಉಪಾಧ್ಯಕ್ಷ ಮುತ್ತಣ್ಣ ತಡಸೂರ, ಟಿ.ಎಸ್. ಗೌಡಪ್ಪನವರ, ಜಿತೇಂದ್ರ ಕುಲಕರ್ಣಿ, ಡಾ. ಅಶೋಕ್ ನಾಡಿಗೇರ, ನಾಗರಾಜ ದೇಶಪಾಂಡೆ, ಗಂಗಾಧರಯ್ಯ ನಾವಳ್ಳಿಮಠ, ಅಭಿಷೇಕ್ ಪಾಟೀಲ, ಸಿದ್ದು ಧಾರವಾಡ ಶೆಟ್ಟರ್, ಶಂಕರಗೌಡ ದೊಡ್ಡಮನಿ, ವಾಸುದೇವ ಕಾರೇಕರ್, ವೀಣಾ ಹಾನಗಲ್, ಬಸವರಾಜ ಬ್ಯಾಹಟ್ಟಿ ಸೇರಿದಂತೆ ಸಂಸ್ಥೆಯ ಸದಸ್ಯರು ಹಾಗೂ ಸಂಗೀತಾಭಿಮಾನಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಲುವೆಗಳಿಗೆ ಸಮರ್ಪಕ ನೀರು ಹರಿಸಲು ತುಂಗಭದ್ರಾ ರೈತ ಸಂಘ ಆಗ್ರಹ
ಕಾಣೆಯಾದ ಮಕ್ಕಳ ಪತ್ತೆಗೆ ಪೊಲೀಸ್ ಇಲಾಖೆ ಚುರುಕು