ಜನರ ಹಸಿವಿನ ಕೂಗು ಪ್ರಧಾನಿಗೆ ಕೇಳಿಸದೆ?

KannadaprabhaNewsNetwork | Published : Apr 30, 2024 2:10 AM

ಸಾರಾಂಶ

ಮೋದಿ ಸರ್ಕಾರದ ಬಂಡವಾಳಶಾಹಿ ಪರ ನೀತಿಗಳಿಂದಾಗಿ ಜನರ ಬದುಕು ಬೀದಿಗೆ ಬಂದಿದೆ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ಉಮಾ ದಾವಣಗೆರೆಯಲ್ಲಿ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಮೋದಿ ಸರ್ಕಾರದ ಬಂಡವಾಳಶಾಹಿ ಪರ ನೀತಿಗಳಿಂದಾಗಿ ಜನರ ಬದುಕು ಬೀದಿಗೆ ಬಂದಿದೆ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ಉಮಾ ಆರೋಪಿಸಿದರು.

ನಗರದ ಎಸಿ ಕಚೇರಿ ಮುಂಭಾಗದಲ್ಲಿ ಸೋಮವಾರ ನಡೆದ ಪಕ್ಷದ ಅಭ್ಯರ್ಥಿ ಅಣಬೇರು ತಿಪ್ಪೇಸ್ವಾಮಿ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಅತಿ ದಿನ 7,000ಕ್ಕೂ ಹೆಚ್ಚು ಜನ ಸಾಯುತ್ತಿದ್ದಾರೆ. ಹಾವೇರಿಯ ಯುವಕನೊಬ್ಬ ತಾಯಿಯ ಹಸಿವು ನೀಗಿಸಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೆಹಲಿಯಲ್ಲಿ ಮಕ್ಕಳು ಹಸಿವಿನಿಂದ ಸಾಯುತ್ತಿದ್ದರೂ, ಮತಿಭ್ರಮಣೆಗೊಂಡ ತಾಯಿಯೊಬ್ಬಳು ''''''''ನನಗೆ ಊಟ ಕೊಡಿ'''''''' ಎಂದು ಅಂಗಲಾಚುತ್ತಿದ್ದಳು. ಜನರ ಈ ಹಸಿವಿನ ಕೂಗು ಪ್ರಧಾನಿ ಮೋದಿಯವರಿಗೆ ಕೇಳಿಸದೆ? ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ಉಮಾ ಪ್ರಶ್ನೆ ಮಾಡಿದರು.

ಆಡಳಿತ ಪಕ್ಷ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟ ರಚನೆಯಾಗಿದೆ. ಎಡವಾದಿ ಪಕ್ಷಗಳಾದ ಸಿಪಿಐ ಸಿಪಿಐಎಂ ಕೂಡ ಪ್ಯಾಸಿವ್ಯಾದಿ ಬಿಜೆಪಿಯನ್ನು ಸೋಲಿಸಬೇಕು ಎಂಬ ಕಾರಣ ನೀಡಿ ಈ ಒಕ್ಕೂಟ ಸೇರಿದ್ದಾರೆ. ಆದರೆ, ಬಹುಕಾಲ ದೇಶವನ್ನಾಳಿದ ಕಾಂಗ್ರೆಸ್ ತುರ್ತು ಪರಿಸ್ಥಿತಿಯನ್ನು ಹೇರಿ ಜನರ ಪ್ರಜಾತಾಂತ್ರಿಕ ಹಕ್ಕುಗಳನ್ನು ಕಸಿದಿದೆ. ಅಂದಿನ ಕಾಂಗ್ರೆಸ್ಸಿನ ನೀತಿಗಳನ್ನೇ ಇಂದು ಬಿಜೆಪಿಯು ಮುಂದುವರಿಸಿದೆಯಷ್ಟೆ. ಇವರೆಲ್ಲರೂ ಒಂದೇ. ಈಗ ಚುನಾವಣೆಗಳಲ್ಲಿ ಹಣ ಸುರಿದು ಮತಗಳನ್ನು ಖರೀದಿ ಮಾಡುತ್ತಾರೆ ಎಂದು ದೂರಿದರು.

ಪಕ್ಷದ ಅಭ್ಯರ್ಥಿ ಅಣಬೇರು ತಿಪ್ಪೇಸ್ವಾಮಿ ಮಾತನಾಡಿ ಜನರ ಬೆಂಬಲವನ್ನು ಯಾಚಿಸಿದರು. ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಅಪರ್ಣಾ ಬಿ ಆರ್, ಜಿಲ್ಲಾ ಸಮಿತಿ ಸದಸ್ಯರಾದ ಮದು ತೊಗಲೇರೆ, ಮಂಜುನಾಥ್ ಕುಕ್ಕುವಾಡ, ಟಿವಿಎಸ್ ರಾಜು ಸೇರಿದಂತೆ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.

Share this article