ಮುನಿಶ್ರೀಗಳ ತತ್ತ್ವ ಆದರ್ಶಗಳನ್ನು ಪಾಲಿಸಬೇಕು: ಎಚ್‌.ಡಿ. ತಮ್ಮಯ್ಯ

KannadaprabhaNewsNetwork | Published : Nov 8, 2024 12:38 AM

ಸಾರಾಂಶ

ಚಿಕ್ಕಮಗಳೂರು, ಮುನಿಶ್ರೀ ಮೋಹಜೀತ್ ಕುಮಾರ್‌ಜೀ ಅವರ ಆಧ್ಯಾತ್ಮಿಕ ಜೀವನವನ್ನು ಕೇವಲ ಪದಗಳಲ್ಲಿ ವರ್ಣಿಸಲಾಗದು. ಸರ್ವರು ಅವರ ತತ್ತ್ವ ಆದರ್ಶಗಳನ್ನು ಪಾಲಿಸಿದಾಗ ಜೀವನದಲ್ಲಿ ಶಾಂತಿ ಲಭಿಸುತ್ತದೆ ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದರು.

- ತೇರಾಪಂಥ್ ಜೈನ್ ಸಂಘ, ಮುನಿಶ್ರೀ ಮೋಹಜೀತ್ ಕುಮಾರ್‌ಜೀರವರ ದೀಕ್ಷಾ ಜೀವನದ ಸ್ವರ್ಣ ಮಹೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮುನಿಶ್ರೀ ಮೋಹಜೀತ್ ಕುಮಾರ್‌ಜೀ ಅವರ ಆಧ್ಯಾತ್ಮಿಕ ಜೀವನವನ್ನು ಕೇವಲ ಪದಗಳಲ್ಲಿ ವರ್ಣಿಸಲಾಗದು. ಸರ್ವರು ಅವರ ತತ್ತ್ವ ಆದರ್ಶಗಳನ್ನು ಪಾಲಿಸಿದಾಗ ಜೀವನದಲ್ಲಿ ಶಾಂತಿ ಲಭಿಸುತ್ತದೆ ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದರು.ನಗರದ ಕುವೆಂಪು ಕಲಾಮಂದಿರದಲ್ಲಿ ಗುರುವಾರ ತೇರಾಪಂಥ್ ಜೈನ್ ಸಂಘ ಏರ್ಪಡಿಸಿದ್ದ ಮುನಿಶ್ರೀ ಮೋಹಜೀತ್ ಕುಮಾರ್‌ಜೀರವರ ದೀಕ್ಷಾ ಜೀವನದ ಸ್ವರ್ಣ ಮಹೋತ್ಸವದಲ್ಲಿ ಮಾತನಾಡಿದರು. ಯಾವುದೇ ಸಮಾಜದಲ್ಲಿ ಗುರುಗಳ ಸ್ವಾಮೀಜಿ ಸ್ಥಾನ ತುಂಬಿ ಐವತ್ತು ವರ್ಷಗಳು ಯಶಸ್ವಿಯಾಗಿ ಆಧ್ಯಾತ್ಮ ಚಿಂತನೆಗಳಲ್ಲಿ ತೊಡಗಿ ಧರ್ಮ ಪ್ರಚಾರ ಮಾಡುವಂತ ಕಾರ್ಯ ಅಷ್ಟು ಸುಲಭವಲ್ಲ, ಈ ಕಾರ್ಯದಲ್ಲಿ ಜೈನ್ ಧರ್ಮದ ವಿಚಾರ ಧಾರೆಗಳನ್ನು ತುಳುಸಿಜೀ ಅವರ ಮಾರ್ಗದರ್ಶನದಲ್ಲಿ ದೇಶಕ್ಕೆ ಪ್ರಚಾರ ಮಾಡಿ, ಮುನಿಶ್ರೀ ಮೋಹಜೀತ್ ಕುಮಾರ್‌ಜೀ ಅವರು ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

17 ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿ ಆಚಾರ್ಯ ತುಳಸೀ ಜೀಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಅವರು ಜೀವನದಲ್ಲಿ 50 ವರ್ಷ ಸಾಗಿ ಬಂದಿದ್ದಾರೆ. ಧೀಕ್ಷೆ ಪಡೆದ ಬಳಿಕ 45 ವರ್ಷಗಳ ಕಾಲ ವಿವಿಧ ಶಾಸ್ತ್ರಗಳಾದ ತತ್ವಶಾಸ್ತ್ರ, ಜೈನ್ ತತ್ವ ಸಮಾವೇಶ, ಸಿದ್ಧಾಂತ, ದೀಪಿಕಾ, ಆಗಮ ಗ್ರಂಥಗಳ ಅಧ್ಯಯನ ಮಾಡಿ, ಧಾರ್ಮಿಕ ಸಂಘಟನೆಗೆ ಒತ್ತು ನೀಡಿ ದಾಖಲೆ ನಿರ್ಮಿಸಿದ್ದಾರೆ ಎಂದು ತಿಳಿಸಿದರು.ಪ್ರವಚನಗಳ ಮೂಲಕ ಅಹಿಂಸಾತ್ಮಕ ಪ್ರಜ್ಞೆಗಳನ್ನು ಅನುಯಾಯಿಗಳಿಗೆ ಮೈಗೂಡಿಸಿಕೊಂಡು ಸರಳ, ಸ್ನೇಹ ಪರತೆ, ಜೀವನದಲ್ಲಿ ಆಲೋಚನೆಗಳು ಇಷ್ಟೊಂದು ಆಳಕ್ಕೆ ತಲುಪುತ್ತವೆ ಎಂಬುದು ಮೋಹಜೀತ್ ಅವರ ವಿಚಾರಧಾರೆಯಾಗಿತ್ತು ಎಂದು ಹೇಳಿದರು.ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಬಸವ ಮಂದಿರದ ಪೀಠಾಧ್ಯಕ್ಷ ಡಾ. ಮರುಳಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿ, ಮುನಿಶ್ರೀ ಮೋಹಜೀತ್ ಕುಮಾರ್‌ಜೀ ಯವರು ಗುರು ಪರಂಪರೆಯನ್ನು ಶ್ರೀಮಂತಗೊಳಿಸಿ ಜೀವನ ಮೌಲ್ಯಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸ ಮಾಡುವ ಮೂಲಕ ಸಾರ್ಥಕ ಜೀವನ ನಡೆಸಿದ್ದಾರೆ ಎಂದರು.

ಇಡೀ ಸಮಾಜದ ಒಳಗೆ ಇರುವ ದುಶ್ಚಟಗಳನ್ನು, ದುರ್ಬುದ್ದಿಗಳನ್ನು ಹೋಗಲಾಡಿಸಲು ಆಂದೋಲನ ಮಾಡಲು ಸಾವಿರಾರು ಕಿಲೋ ಮೀಟರ್ ಪಾದಯಾತ್ರೆ ನಡೆಸಿರುವ ಮುನಿಶ್ರೀ ಮೋಹಜಿತ್ ಕುಮಾರ್‌ಜೀ ಅವರು ಕೇವಲ ಒಂದು ಸಮುದಾಯಕ್ಕೆ ಸೇರಿದವರಲ್ಲ ಎಂದರು.

ದೈವ ಸನ್ಯಾಸಿ ಆಗಿದ್ದ ಮೋಹಜೀತ್ ಕುಮಾರ್‌ಜೀ ಅವರು ಅಧಿಕಾರದಿಂದ ನಮಸ್ಕಾರ ಪಡೆದುಕೊಳ್ಳಲಾಗದು ತ್ಯಾಗದಿಂದ ಮಾತ್ರ ಸಾಧ್ಯ ಎಂದು ಮನಗಂಡಿದ್ದು, ಇದು ಜಾರಿಯಾದಾಗ ಅಮೃತತ್ವ ಮತ್ತು ಗೌರವ ಸಿಗುತ್ತದೆ ಎಂದು ನಂಬಿದ್ದರು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜೈನ್ ಸಮುದಾಯದಿಂದ ಮುನಿಶ್ರೀ ಮೋಹಜೀತ್ ಕುಮಾರ್‌ಜೀ ಅವರಿಗೆ ಧೀಕ್ಷಾ ಸ್ವರ್ಣ ಮಹೋತ್ಸವ ಅಂಗವಾಗಿ ಗೌರವ ಸಮರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್, ಮಾಜಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಡಾ.ಮೋಹನ್, ಕೆ.ಟಿ. ರಾಧಾಕೃಷ್ಣ, ಗೌತಮ್ ಚಂದ್, ವಿಪುಲ್ ಕುಮಾರ್ ಜೈನ್, ಪದಮ್‌ಚಂದ್ ಉಪಸ್ಥಿತರಿದ್ದರು.

ತೇರಾಪಂಥ್ ಸಂಘದ ಅಧ್ಯಕ್ಷ ಮಹೇಂದ್ರ ಡೋಷಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

7 ಕೆಸಿಕೆಎಂ 5ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಗುರುವಾರ ತೇರಾಪಂಥ್ ಜೈನ್ ಸಂಘ ಏರ್ಪಡಿಸಿದ್ದ ಮುನುಶ್ರೀ ಮೋಹಜೀತ್ ಕುಮಾರ್‌ಜೀರವರ ದೀಕ್ಷಾ ಜೀವನದ ಸ್ವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎಚ್‌.ಡಿ. ತಮ್ಮಯ್ಯ ಮಾತನಾಡಿದರು.

Share this article