ಭಗವಾನ್‌ ಮಹಾವೀರರ ತತ್ವಗಳು ವಿಶ್ವಮಾನ್ಯವಾದುದು: ಪ್ರವೀಣ ಹುಚ್ಚಣ್ಣನವರ

KannadaprabhaNewsNetwork |  
Published : Apr 11, 2025, 12:31 AM IST
10ಎಚ್.ಎಲ್.ವೈ-1: ತಾಲೂಕಾಡಳಿತ ಸೌಧದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ ಅವರು ಭಗವಾನ್ ಮಹಾವೀರರ ಜಯಂತಿ ಆಚರಣೆಗೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಹಳಿಯಾಳ ತಾಲೂಕು ಆಡಳಿತ ಸೌಧದಲ್ಲಿ ಭಗವಾನ್ ಮಹಾವೀರರ ಜಯಂತಿ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹವಗಿ ಮತ್ತು ತೇರಗಾಂದ ಗ್ರಾಮದ ಜೈನ ಬಸದಿಯಲ್ಲೂ ಭಕ್ತಿ-ಶ್ರದ್ಧೆಯಿಂದ ಆಚರಿಸಲಾಯಿತು.

ಹಳಿಯಾಳ: ಅಶಾಂತಿ, ಗಲಭೆ, ಹಿಂಸೆ, ಜಾತೀಯತೆ ಮತ್ತು ತಾರತಮ್ಯಗಳಿಂದ ಜಗತ್ತು ದುಸ್ತರವಾಗಿದೆ. ಸಮಾಜದಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ, ಸಹನೆ ಮತ್ತು ಸಹಬಾಳ್ವೆಯನ್ನು ನಿರ್ಮಿಸುವ ಶಕ್ತಿ ಭಗವಾನ್ ಮಹಾವೀರರು ಬೋಧಿಸಿದ ಅಹಿಂಸಾ ಸಿದ್ಧಾಂತಕ್ಕೆ ಇದೆ ಎಂದು ತಹಸೀಲ್ದಾರ್‌ ಪ್ರವೀಣ ಹುಚ್ಚಣ್ಣನವರ ಹೇಳಿದರು.

ಗುರುವಾರ ತಾಲೂಕು ಆಡಳಿತ ಸೌಧದಲ್ಲಿ ಆಯೋಜಿಸಿದ ಭಗವಾನ್ ಮಹಾವೀರರ ಜಯಂತಿ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಬದುಕುವ ಹಕ್ಕು ಎಲ್ಲ ಜೀವಿಗಳಿಗೂ ಸಮಾನವಾಗಿ ಇದೆ. ತಾವೂ ಬದುಕಿ ಇತರ ಜೀವಿಗಳಿಗೂ ಬದುಕಲು ಸಮಾನ ಅವಕಾಶ ನೀಡುವಂತೆ ಸಾರುವ ಜೈನ ಧರ್ಮ ಶ್ರೇಷ್ಠವಾದುದು. ಭಗವಾನ್ ಮಹಾವೀರರ ತತ್ವಗಳು ವಿಶ್ವಮಾನ್ಯವಾಗಿದ್ದು, ಸಾರ್ವಕಾಲಿಕ ಮೌಲ್ಯ ಹೊಂದಿವೆ ಎಂದರು.

ಸ್ಥಳೀಯ ಜೈನ ಸಮುದಾಯದ ಹಿರಿಯರಾದ ಧರಣೇಂದ್ರ ಶಾಸ್ತ್ರೀಗಳು ಮಾತನಾಡಿ, ಭಗವಾನ್ ಮಹಾವೀರರು ಬೋಧಿಸಿದ ತತ್ವಗಳನ್ನು ನಾವು ನಿತ್ಯವೂ ಜೀವನದಲ್ಲಿ ಅನುಷ್ಠಾನ ಮಾಡಿ ಧರ್ಮ ಮಾರ್ಗದಲ್ಲಿ ನಡೆದರೆ ಜೀವನ ಪಾವನವಾಗುವುದು. ಮನಸ್ಸಿನಲ್ಲಿ ಹಿಂಸೆಯ ಬಗ್ಗೆ ಯೋಚಿಸಿದರೂ ಅದು ಹಿಂಸೆಯೇ ಆಗಿರುತ್ತದೆ. ಹಿಂಸೆಯಿಂದ ಶಾಂತಿ ಮತ್ತು ವಿಕಾಸಗಳು ಸಾಧ್ಯವಿಲ್ಲ ಎಂದರು.

ಭಗವಾನ್ ಮಹಾವೀರರ ತತ್ವಗಳ ಅನುಷ್ಠಾನದ ಮೂಲಕ ಜಗತ್ತು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ ಎಂದರು.

ಜಿಪಂ ಎಇಇ ಆರ್. ಸತೀಶ್, ಗ್ರೇಡ್-2 ತಹಸೀಲ್ದಾರ್‌ ಹನುಮಂತ ಪರೋಡಕರ, ಕಂದಾಯ ಇಲಾಖೆಯ ಸೆಂಡ್ರಾ ಡಾಯಸ್, ಕಿರಣ ಜಕ್ಕಲಿ, ಜೈನ ಸಮುದಾಯದ ಪ್ರಮುಖರಾದ ಸಂದೇಶ ಪಾಟೀಲ, ನಾಗರಾಜ ಶೆಟ್ಟಿ, ಶ್ರೀಕಾಂತ ಅಂಗಡಿ, ಪಾರೀಶ್ ಎಬ್ರೇರ ಹಾಗೂ ಹವಗಿ, ತೇರಗಾಂವ ಗ್ರಾಮದ ಜೈನ ಸಮುದಾಯದ ಹಿರಿಯರು ಉಪಸ್ಥಿತರಿದ್ದರು. ಕಂದಾಯ ಇಲಾಖೆಯ ಪರಶುರಾಮ ಶಿಂದೆ ಕಾರ್ಯಕ್ರಮ ನಿರ್ವಹಿಸಿದರು.

ತಾಲೂಕಿನ ಹವಗಿ ಮತ್ತು ತೇರಗಾಂದ ಗ್ರಾಮದ ಜೈನ ಬಸದಿಯಲ್ಲಿ ಭಗವಾನ ಮಹಾವೀರರ ಜಯಂತಿಯನ್ನು ಭಕ್ತಿ-ಶ್ರದ್ಧೆಯಿಂದ ಆಚರಿಸಲಾಯಿತು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ