ಶಿಗ್ಗಾಂವಿಯ ತಹಶೀಲ್ದಾರ್ ಪ್ಲಾಟ್‌ನಲ್ಲಿರುವ ಸಮಸ್ಯೆ ತ್ವರಿತ ಇತ್ಯರ್ಥ: ಯಾಸೀರ್ ಅಹ್ಮದಖಾನ್ ಪಠಾಣ

KannadaprabhaNewsNetwork |  
Published : Apr 19, 2025, 12:40 AM IST
ಶಿಗ್ಗಾಂವಿ ತಾಲೂಕಿನ ಬಂಕಾಪುರದ ಪುರಸಭೆ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ನಿವೇಶನದ ಮಾಲೀಕರು ಮತ್ತು ಪುರಸಭೆ ನಡುವಿನ ಹಗ್ಗಜಗ್ಗಾಟದಲ್ಲಿ ನಿವೇಶನಗಳ ಖರೀದಿದಾರರಿಗೆ ತೊಂದರೆ ನೀಡುವುದು ಸರಿಯಲ್ಲ. ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಈ ವ್ಯಾಜ್ಯ ಇತ್ಯರ್ಥ ಮಾಡಲಾಗುವುದು ಎಂದು ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಹೇಳಿದರು.

ಶಿಗ್ಗಾಂವಿ: ತಾಲೂಕಿನ ಬಂಕಾಪುರ ಪಟ್ಟಣದ ತಹಶೀಲ್ದಾರ್ ಪ್ಲಾಟ್‌ನಲ್ಲಿರುವ ಸಮಸ್ಯೆಯನ್ನು ತ್ವರಿತವಾಗಿ ಇತ್ಯರ್ಥಪಡಿಸಿ, ಅದರಿಂದ ಪುರಸಭೆಗೆ ತೆರಿಗೆ ಮೂಲಕ ಬರುವ ಹಣದಿಂದಲೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಹೇಳಿದರು.

ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಆರಂಭದಲ್ಲಿ ತಹಶೀಲ್ದಾರ್ ಪ್ಲಾಟ್‌ನ ನಿವೇಶನಗಳನ್ನು ಮಾರಾಟ ಮಾಡುವ ವೇಳೆ ಉದ್ಯಾನಕ್ಕೆ ಮೀಸಲಿಟ್ಟ ಜಾಗವನ್ನೂ ಮಾಲೀಕರು ಮಾರಾಟ ಮಾಡಿದ್ದಾರೆ. ಈ ತಪ್ಪು ಗೊತ್ತಾದ ತಕ್ಷಣ ಎಚ್ಚೆತ್ತುಕೊಂಡ ಮಾಲೀಕರು, ಮಾರಾಟ ಮಾಡಿದ ಜಾಗದಷ್ಟೆ ಖಾಲಿ ಜಾಗವನ್ನು ಉದ್ಯಾನಕ್ಕಾಗಿ ಬೇರೆಡೆ ನೀಡುತ್ತಿದ್ದಾರೆ ಎಂದರು.

ಹೀಗಿದ್ದರೂ ಉದ್ಯಾನ ನಿರ್ಮಾಣ ಉದ್ದೇಶಿತ ಜಾಗವನ್ನೇ ಬಿಟ್ಟುಕೊಡಬೇಕು ಎಂದು ಕೆಲವರು ವ್ಯಾಜ್ಯ ಹೂಡಿದ್ದಾರೆ. ಬಹುದಿನಗಳಿಂದ ಇದು ಇತ್ಯರ್ಥಗೊಂಡಿಲ್ಲ. ನಿವೇಶನದ ಮಾಲೀಕರು ಮತ್ತು ಪುರಸಭೆ ನಡುವಿನ ಹಗ್ಗಜಗ್ಗಾಟದಲ್ಲಿ ನಿವೇಶನಗಳ ಖರೀದಿದಾರರಿಗೆ ತೊಂದರೆ ನೀಡುವುದು ಸರಿಯಲ್ಲ. ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಈ ವ್ಯಾಜ್ಯ ಇತ್ಯರ್ಥ ಮಾಡಲಾಗುವುದು. ಉದ್ಯಾನದ ಜಾಗದ ಹೊರತಾಗಿ, ನಿವೇಶನ ಖರೀದಿದಾರರಿಗೆ ಉತಾರ ನೀಡುವುದು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.

₹೩೦೦ ಕೋಟಿ ಅನುದಾನಕ್ಕೆ ಪ್ರಸ್ತಾವ: ಬಂಕಾಪುರ, ಶಿಗ್ಗಾಂವಿ, ಸವಣೂರ ಪಟ್ಟಣಕ್ಕೆ ವರದಾ ನದಿಯಿಂದ ಪ್ರತ್ಯೇಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸರ್ಕಾರಕ್ಕೆ ₹೩೦೦ ಕೋಟಿ ಅನುದಾನದ ಪ್ರಸ್ತಾವ ಸಲ್ಲಿಸಲಾಗಿದೆ. ಮಲ್ಲಪ್ಪನ ಕೆರೆ ಅಭಿವೃದ್ಧಿ, ನಾಡಕಚೇರಿ ಕಟ್ಟಡ, ಪಶು ಆಸ್ಪತ್ರೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಪುರಸಭೆ ಅಧ್ಯಕ್ಷೆ ಮಮತಾ ಮಾಗಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಆಂಜನೇಯ ಗುಡಿಗೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಯೂಬಖಾನ್ ಪಠಾಣ, ಮುಖ್ಯಾಧಿಕಾರಿ ಶಿವಾನಂದ ಅಜ್ಜನವರ ಇದ್ದರು.ನಿವೇಶನ ಮಂಜೂರಾತಿಗೆ ಸೂಚನೆ: ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಕರೆಯಲು ಸಭೆ ಅನುಮತಿ ನೀಡಬೇಕು. ಕಳಪೆ ಕಾಮಗಾರಿ ಆದಲ್ಲಿ ಆಕ್ಷೇಪ ಮಾಡುವುದು ಸರಿ ಎನಿಸುತ್ತದೆ. ಯಾವುದೇ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಬೇಡ, ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಹೇಳಿದರು.

ಮಾದರಿ ಶಾಲೆ ಕಟ್ಟಡ, ವಾಲ್ಮೀಕಿ ಸಮುದಾಯ ಭವನ ಸೇರಿದಂತೆ ಎಲ್ಲ ಸಮುದಾಯ ಭವನಗಳ ನಿರ್ಮಾಣಕ್ಕಾಗಿ ನಿವೇಶನಗಳ ಮಂಜೂರಾತಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ