ಕನ್ನಡಪ್ರಭ ವಾರ್ತೆ ಕೆಜಿಎಫ್ಬಿಇಎಂಎಲ್ ಹೊರಗುತ್ತಿಗೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರೊಂದಿಗೆ ಚರ್ಚಿಸುವುದಾಗಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.ಕೆಜಿಎಫ್‌ನ ಪೈವ್ ಲೈಟ್ಸ್ ಬಳಿ ಕಳೆದ ೧೩ ದಿನಗಳಿಂದ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಕೋಲಾರ ಸಂಸದ ಮಲ್ಲೇಶ್ ಬಾಬು, ಶಾಸಕರಾದ ವೆಂಕಟ ಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್ ಅವರೊಂದಿಗೆ ಎಚ್ಡಿಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ನಿಮ್ಮ ಬೇಡಿಕೆಗಳ ಬಗ್ಗೆ ಈಗಾಗಲೇ ಕಂಪನಿಯ ಸಿಎಂಡಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಅವರು ನೌಕರಿ ಕಾಯಂಗೊಳಿಸುವ ಬೇಡಿಕೆ ಒಂದನ್ನು ಬಿಟ್ಟು ಉಳಿದ ಬೇಡಿಕೆಗಳನ್ನು ಈಡೇರಿಸಲು ಸ್ಪಂದಿಸಿದ್ದಾರೆ. ನಾನು ನಾಳೆ (ಸೋಮವಾರ) ಬೆಳಗ್ಗೆ ದೆಹಲಿಗೆ ತೆರಳುತ್ತಿದ್ದು, ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಹಾಗೂ ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತೇನೆ. ಅವರು ಖಂಡಿತಾ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಸಚಿವರ ಮಾತಿಗೆ ಸ್ಪಂದಿಸಿದ ಕಾರ್ಮಿಕರು, ಈ ಕೂಡಲೇ ನಾವು ಕೆಲಸಕ್ಕೆ ಹಾಜರಾಗಬೇಕು ಎನ್ನುವ ನಿಮ್ಮ ಒತ್ತಾಸೆಯ ಬಗ್ಗೆ ಚರ್ಚೆ ನಡೆಸುತ್ತೇವೆ. ಇಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಕಳಕಳಿಗೆ ವಿರುದ್ಧವಾದ ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದು ಹೇಳಿದರು.
ಈ ವೇಳೆ ಸಂಸದ ಮಲ್ಲೇಬಾಬು, ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್, ಶ್ರೀನಿವಾಸಪುರ ವೆಂಕಟಶಿವಾರೆಡ್ಡಿ, ಮಾಜಿ ಶಾಸಕ ವೈ.ಸಂಪಂಗಿ , ಸಿಎಂಆರ್ಶ್ರೀ ನಾಥ್, ಕೆ.ರಾಜೇಂದ್ರನ್ ನಗರಸಭೆ ಮಾಜಿ ಅಧ್ಯಕ್ಷ ವಳ್ಳಲ್‌ಮುನಿಸ್ವಾಮಿ ಹಾಗೂ ಇತರರು ಹಾಜರಿದ್ದರು.