ಬೊಂಬೆನಗರಿಯಲ್ಲಿ ಮಿತಿಮೀರಿದ ಕಳ್ಳರ ಹಾವಳಿ

KannadaprabhaNewsNetwork | Published : Oct 20, 2023 1:00 AM

ಸಾರಾಂಶ

ಚನ್ನಪಟ್ಟಣ: ಬೊಂಬೆನಾಡಿನಲ್ಲಿ ಕಳ್ಳರ ಕಾಟ ಮಿತಿಮೀರಿದ್ದು, ಗುರುವಾರ ಮುಂಜಾನೆ ನಗರದ ಬೆಂ-ಮೈ ಹೆದ್ದಾರಿಯಲ್ಲಿ ನಾಲ್ಕು ಸರಣಿ ಕಳವಿಗೆ ಯತ್ನಿಸಿದ್ದು, ಒಂದು ಅಂಗಡಿಯಲ್ಲಿ ಕಳ್ಳತನ ಮಾಡಿ, ಮಿಕ್ಕೆರಡು ಅಂಗಡಿಗಳಲ್ಲಿ ವಿಫಲ ಯತ್ನ ನಡೆಸಿದ್ದಾರೆ.
ಚನ್ನಪಟ್ಟಣ: ಬೊಂಬೆನಾಡಿನಲ್ಲಿ ಕಳ್ಳರ ಕಾಟ ಮಿತಿಮೀರಿದ್ದು, ಗುರುವಾರ ಮುಂಜಾನೆ ನಗರದ ಬೆಂ-ಮೈ ಹೆದ್ದಾರಿಯಲ್ಲಿ ನಾಲ್ಕು ಸರಣಿ ಕಳವಿಗೆ ಯತ್ನಿಸಿದ್ದು, ಒಂದು ಅಂಗಡಿಯಲ್ಲಿ ಕಳ್ಳತನ ಮಾಡಿ, ಮಿಕ್ಕೆರಡು ಅಂಗಡಿಗಳಲ್ಲಿ ವಿಫಲ ಯತ್ನ ನಡೆಸಿದ್ದಾರೆ. ನಗರದ ನ್ಯಾಯಾಲಯದ ಮುಂಭಾಗ ಬೆಂ-ಮೈ ಹೆದ್ದಾರಿಯಲ್ಲಿರುವ ಭಾಸ್ಕರ್ ಮೆಡಿಕಲ್ ಸ್ಟೋರ್‌ನ ಬೀಗ ಒಡೆದು ಒಳನುಗ್ಗಿರುವ ಕಳ್ಳರು ಅಂಗಡಿಯಲ್ಲಿದ್ದ ನಗದು, ಚಾಕಲೇಟ್ ಬಾಕ್ಸ್ ಸೇರಿದಂತೆ ಕೆಲ ವಸ್ತುಗಳನ್ನು ಅಪಹರಿಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬಂದ ನಾಲ್ವರು ಈ ಕೃತ್ಯ ನಡೆಸಿದ್ದು, ಇಬ್ಬರು ಅಂಗಡಿಯಲ್ಲಿದ್ದ ಹಣ ಮತ್ತು ವಸ್ತುಗಳನ್ನು ದೋಚಿದ್ದರೆ, ಮತ್ತಿಬ್ಬರು ಹೊರಗಡೆ ನಿಂತಿದ್ದು ರಸ್ತೆಯ ಮೇಲೆ ಗಮನವಿಟ್ಟಿದ್ದಾರೆ. ಅಂಗಡಿಯಲ್ಲಿ ಸುಮಾರು 30 ಸಾವಿರ ರು. ನಗದು ಇತ್ತೆಂದು ಹೇಳಲಾಗಿದ್ದು, ಕಳ್ಳರು ಅಂಗಡಿಯ ಡ್ರಾಯರ್‌ನಲ್ಲಿದ್ದ ಹಣವನ್ನು ಕಳವು ಮಾಡಿದ್ದು, ಹೋಗುವಾಗ ಅವರಲ್ಲಿ ಒಬ್ಬ ಚಾಕಲೇಟ್ ಡಬ್ಬವನ್ನು ಎತ್ತಿಕೊಂಡಿದ್ದಾನೆ. ಕಳ್ಳರ ಗುಂಪಿನ ಕೈಚಳಕ ಹಾಗೂ ಅವರ ಸಂಭಾಷಣೆ ಅಂಗಡಿಯಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಫಲ ಯತ್ನ: ಇದೇ ವೇಳೆ ಕಳ್ಳರ ತಂಡ ಪುರ ಪೊಲೀಸ್ ಠಾಣೆಗೆ ಕೂಗಳತೆಯ ದೂರದಲ್ಲಿರುವ ಅಪೊಲೋ ಮೆಡಿಕಲ್ಸ್ ಹಾಗೂ ನ್ಯೂ ರಾಜ್ ದಿನಸಿ ಅಂಗಡಿಯಲ್ಲಿ ಕಳವಿಗೆ ಯತ್ನಿಸಿ ವಿಫಲರಾಗಿದ್ದಾರೆ. ನಗರದ 4ನೇ ಅಡ್ಡರಸ್ತೆಯಲ್ಲಿನ ನ್ಯೂ ರಾಜ್ ದಿನಸಿ ಅಂಗಡಿಯ ಶೆಟರ್‌ ಬೀಗ ಒಡೆಯಲು ಯತ್ನಿಸುವಾಗ ಅಂಗಡಿಯ ಹೊರಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ಸಿಸಿ ಕ್ಯಾಮೆರಾವನ್ನು ಹೊಡೆದು ಹಾಕಿದ ಬಳಿಕ ಶೆಟರ್ ಬೀಗ ಒಡೆಯುವ ಯತ್ನವೂ ವಿಫಲಗೊಂಡಿದೆ. ನಗರದ ಪುರಪೊಲೀಸ್ ಠಾಣೆ ಸಮೀಪ 2ನೇ ಅಡ್ಡರಸ್ತೆಯಲ್ಲಿರುವ ಅಪೊಲೋ ಮೆಡಿಕಲ್ಸ್ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಅಂಗಡಿಯಲ್ಲಿನ ಕ್ಯಾಶ್ ಡ್ರಾಯರ್‌ ಒಂದನ್ನು ಒಡೆದು ಹಣಕ್ಕಾಗಿ ಹುಡುಕಾಡಿರುವ ದೃಶ್ಯ ಮೆಡಿಕಲ್ ಸ್ಟೋರ್‌ನಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಕಳವು ಯತ್ನದ ಕೃತ್ಯ ಬೊಂಬೆನಗರಿರನ್ನು ಬೆಚ್ಚಿಬೀಳಿಸಿದೆ. ಪೊಟೋ೧೯ಸಿಪಿಟ೨: ಚನ್ನಪಟ್ಟಣದ 4ನೇ ಅಡ್ಡ ರಸ್ತೆಯಲ್ಲಿನ ನ್ಯೂ ರಾಜ್ ದಿನಸಿ ಅಂಗಡಿಯ ಬೀಗ ಒಡೆಯಲು ಯತ್ನಿಸಿರುವುದು.

Share this article