ಬ್ಯಾಡಗಿ: ಪಟ್ಟಣದ ಹಂಸಭಾವಿ ರಸ್ತೆಯಲ್ಲಿ ಹಿಂದೂ ರಾಷ್ಟ್ರ ಸ್ವಯಂಸೇವಾ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ‘ಬ್ಯಾಡಗಿ ಕಾ ರಾಜಾ’ ಗಣೇಶನ ಶೋಭಾಯಾತ್ರೆ ಗುರುವಾರ ರಾತ್ರಿ ಸಕಲ ವಾದ್ಯ ವೈಭವಗಳೊಂದಿಗೆ ಅತ್ಯಂತ ವಿಜೃಂಭಣೆಯಿದ ಸಂಪನ್ನಗೊಂಡಿತು.
ವೈವಿಧ್ಯಮಯ ಕಲಾ ತಂಡಗಳ ಮೆರುಗು: ಶೋಭಾಯಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದು ವಿವಿಧ ಕಲಾ ತಂಡಗಳ ಪ್ರದರ್ಶನ. ಕೋಲುಗೊಂಬೆ, ಕರಡಿ ಕುಣಿತ, ಜಾಂಜ್ ಸೇರಿದಂತೆ ವಿವಿಧ ವಾದ್ಯ ಹಾಗೂ ಜಾನಪದ ಕಲಾ ಪ್ರಕಾರಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ಕಲಾವಿದರ ಲಯಬದ್ಧ ಪ್ರದರ್ಶನಕ್ಕೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಮೆರವಣಿಗೆಯ ಉತ್ಸಾಹವನ್ನು ಹೆಚ್ಚಿಸಿದ್ದು ವಿಶೇಷವಾಗಿತ್ತು. ಯುವಕರು, ಮಹಿಳೆಯರು ಸೇರಿದಂತೆ ವಿವಿಧ ವಯೋಮಾನದ ಭಕ್ತರು ಸಂಗೀತದ ತಾಳಕ್ಕೆ ಹೆಜ್ಜೆ ಹಾಕಿ ಗಣೇಶನಿಗೆ ಭಕ್ತಿಪೂರ್ವಕವಾಗಿ ವಿದಾಯ ಹೇಳಿದರು. ಸಾಂಪ್ರದಾಯಿಕ ವಾದ್ಯಗಳ ಸದ್ದು, ಕಲಾವಿದರ ಪ್ರದರ್ಶನ ಹಾಗೂ ಭಕ್ತರ ಉತ್ಸಾಹದಿಂದ ಶೋಭಾಯಾತ್ರೆ ಹಬ್ಬದ ವಾತಾವರಣವನ್ನು ಸೃಷ್ಟಿಸಿತು.
ರಕ್ತದಾನ ಶಿಬಿರ, ಅನ್ನಸಂತರ್ಪಣೆ: ಗಣೇಶೋತ್ಸವದ ಅಂಗವಾಗಿ ಹಿಂದೂ ರಾಷ್ಟ್ರ ಸ್ವಯಂಸೇವಾ ಸಂಘದ ವತಿಯಿಂದ ರಾಣಿಬೆನ್ನೂರು ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ರಕ್ತದಾನ ಶಿಬಿರದ ಮೂಲಕ ಮಾನವೀಯ ಸೇವೆಗೆ ಆದ್ಯತೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ಧಾರ್ಮಿಕ ಆಚರಣೆಯೊಂದಿಗೆ ಸಾಮಾಜಿಕ ಸೇವಾ ಚಟುವಟಿಕೆಗಳಿಗೂ ಒತ್ತು ನೀಡಿದ ಸಂಘಟಕರ ಪ್ರಯತ್ನ ಗಮನ ಸೆಳೆಯಿತು. ಗಣೇಶೋತ್ಸವದ ಅಂಗವಾಗಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.ಭಕ್ತಿ, ಸಂಭ್ರಮದೊಂದಿಗೆ ಗಣೇಶೋತ್ಸವಕ್ಕೆ ತೆರೆ:ಒಂದು ತಿಂಗಳ ಕಾಲ ಭಕ್ತರ ಆಕರ್ಷಣೆಯ ಕೇಂದ್ರವಾಗಿದ್ದ ಬ್ಯಾಡಗಿ ಕಾ ರಾದಾ ಗಣೇಶನ ಶೋಭಾಯಾತ್ರೆ ಸಾಂಪ್ರದಾಯಿಕ ಆಚರಣೆ, ಜಾನಪದ ಕಲಾ ಪ್ರದರ್ಶನ ಹಾಗೂ ಸಾರ್ವಜನಿಕರ ಉತ್ಸಾಹದೊಂದಿಗೆ ಸಂಪನ್ನಗೊಂಡಿತು. ಗಣೇಶೋತ್ಸವವು ಧಾರ್ಮಿಕ ಭಕ್ತಿ, ಸಾಂಸ್ಕೃತಿಕ ವೈಭವ ಮತ್ತು ಸಾಮಾಜಿಕ ಸೇವೆಯ ಸಮ್ಮಿಲನಕ್ಕೆ ಸಾಕ್ಷಿಯಾ ಯಿತು.