ನಿಂಗರಾಜ ಬೇವಿನಕಟ್ಟಿ
ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಇಂದು ನಿಡಗುಂದಿಯ ವೀರಭದ್ರೇಶ್ವರ ದೇವಸ್ಥಾನದ ಪ್ರಾಂಗಣದಿಂದ ಸಾರೋಟಿನಲ್ಲಿ ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಗುರುವಾರ ಅತ್ಯಂತ ವೈಭವಪೂರಿತವಾಗಿ ಚಾಲನೆಗೊಂಡಿತು.
ಈ ವೇಳೆ ವಿವಿಧ ಕಲಾತಂಡಗಳು, ಛದ್ಮವೇಷ ಧರಿಸಿದ್ದ ಶಾಲಾ ಮಕ್ಕಳು, ಮಕ್ಕಳ ಕೋಲಾಟ, ಕೈಯಲ್ಲಿ ಸಾಹಿತಿಗಳ ಹಾಗೂ ವಚನಕಾರರ ಭಾವಚಿತ್ರಗಳು, ಹೆಜ್ಜೆಮೇಳ, ಕನ್ನಡಾಂಬೆಯ ಸ್ಲೋಗನ್ ಘೋಷಿಸುತ್ತಾ ಸಾಗಿದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಸಮ್ಮುಖದಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು. ರೋಣ ಪುರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಮುಖಂಡ ಮಿಥುನ ಪಾಟೀಲರನ್ನೊಳಗೊಂಡಂತೆ ಹರಗುರು ಚರ ಮೂರ್ತಿಗಳು ಮೆರವಣಿಗೆಗೆ ಚಾಲನೆ ನೀಡಿದರು.ನಿಡಗುಂದಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಗ್ರಾಪಂ ಮುಂಭಾಗಕ್ಕೆ ಆಗಮಿಸಿ ಅಲ್ಲಿಂದ ಮೂರು ಕಿ.ಮೀ. ದೂರದಲ್ಲಿರುವ ನಿಡಗುಂದಿಕೊಪ್ಪ ಗ್ರಾಮದ ಶ್ರೀಮಠದ ಆವರಣದಲ್ಲಿನ ಮುಖ್ಯ ವೇದಿಕೆಗೆ ತಲುಪಿತು. ಗ್ರಾಮದ ವೀರಭದ್ರೇಶ್ವರ ಕರಡಿಮಜಲು, ಡೊಳ್ಳು ಕುಣಿತ, ಹಲಗೆ ಮೇಳ, ಡೊಳ್ಳು ಕುಣಿತ, ನಂದಿಕೋಲು ಕುಣಿತ, ಅಲಂಕೃತಗೊಂಡ ಚಕ್ಕಡಿಗಳು ಭಾಗಿ, ಗೊಂಬೆಗಳ ವೇಷಧಾರಿಗಳು, ಶಾಲಾ ಮಕ್ಕಳ ಕೋಲಾಟದ ತಂಡಗಳು ರಂಗು ತುಂಬಿದರೆ, ಸ್ವಾತಂತ್ರ್ಯ ಹೋರಾಟಗಾರರು, ಬಸವಾದಿ ಶರಣರ ಛದ್ಮವೇಷ ಧರಿಸಿದ್ದ ಶಾಲಾ ಮಕ್ಕಳ ಮೆರವಣಿಗೆಗೆ ಮೆರುಗು ನೀಡಿದರು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಮುಖಂಡರು ಕಲಾತಂಡಗಳ ವಾದ್ಯಗಳನ್ನು ನುಡಿಸುವುದರ ಜತೆಗೆ ನೃತ್ಯ ಮಾಡಿದರು.