ಕನ್ನಡಪ್ರಭ ವಾರ್ತೆ ಕುಷ್ಟಗಿ
ಗಂಗಾವತಿ ಉಪವಿಭಾಗ ಕಚೇರಿಗೆ ಕುಷ್ಟಗಿ ತಾಲೂಕನ್ನು ಸೇರಿಸುವ ಪ್ರಸ್ತಾವನೆಯನ್ನು ಕೂಡಲೇ ಕೈ ಬಿಡುವಂತೆ ಒತ್ತಾಯಿಸಿ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹ್ಮದ್ ನಜೀರಸಾಬ ಮೂಲಿಮನಿ ಮಾತನಾಡಿ, ನೂತನವಾಗಿ ರಚನೆ ಮಾಡಲಿರುವ ಗಂಗಾವತಿ ಉಪ ವಿಭಾಗ ವ್ಯಾಪ್ತಿಗೆ ಕುಷ್ಟಗಿ ತಾಲೂಕನ್ನು ಸೇರಿಸಲು ಈಗಾಗಲೇ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ ಎಂಬ ಮಾಹಿತಿಯು ತಿಳಿದು ಬಂದಿದೆ. ಕುಷ್ಟಗಿ ತಾಲೂಕನ್ನು ಗಂಗಾವತಿ ಉಪವಿಭಾಗದ ವ್ಯಾಪ್ತಿಗೆ ಸೇರಿಸಿದರೆ ದೂರದ ಹನುಮಸಾಗರ, ಹನುಮನಾಳ ಸೇರಿದಂತೆ ಕುಷ್ಟಗಿ, ದೋಟಿಹಾಳ, ಕ್ಯಾದಿಗುಪ್ಪ ಹಾಗೂ ಅನೇಕ ಗ್ರಾಮಗಳ ವ್ಯಾಪ್ತಿಯ ರೈತರು, ವಿದ್ಯಾರ್ಥಿಗಳು, ವಕೀಲರು ಸೇರಿದಂತೆ ಸಾಮಾನ್ಯ ವರ್ಗದ ಜನರಿಗೆ ಕಂದಾಯ ಭೂ-ವ್ಯಾಜ್ಯ ಪ್ರಕರಣಗಳ ವಿಚಾರಣೆ ಮತ್ತು ಇತ್ಯರ್ಥಕ್ಕೆ ಗಂಗಾವತಿಗೆ ತೆರಳಬೇಕಾಗುತ್ತದೆ ಎಂದರು.
ಕುಷ್ಟಗಿ ತಾಲೂಕು ಕೊಪ್ಪಳ ಜಿಲ್ಲೆಯ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶ ವ್ಯಾಪ್ತಿಯ ಗಡಿ ತಾಲೂಕು ಆಗಿರುವುದರಿಂದ ಹನುಮಸಾಗರ ಮತ್ತು ಹನುಮನಾಳ ಹೋಬಳಿ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಜನರಿಗೆ ಕುಷ್ಟಗಿ ಮುಖಾಂತರ ಗಂಗಾವತಿಗೆ ತಲುಪಲು 100 ಕಿಮೀಗಿಂತಲೂ ಹೆಚ್ಚು ಅಂತರ ಇರುವುದರಿಂದ ಪೊಲೀಸ್ ಇಲಾಖೆಯ ಡಿವೈಎಸ್ಪಿ ಮತ್ತು ಜೆಸ್ಕಾಂ ನಿಗಮದ ವಿಭಾಗ ಕಚೇರಿಗಳಲ್ಲಿನ ಕಾರ್ಯ ಚಟುವಟಿಕೆಗಳಿಗೆ ಹೆಚ್ಚಾಗಿ ಸಂಚರಿಸುವ ಅಗತ್ಯತೆ ಕಡಿಮೆ ಇರುವುದರಿಂದ, ಕೇವಲ ಕಂದಾಯ ಉಪವಿಭಾಗ ಕಾರ್ಯಗಳಿಗೆ ತೆರಳಲು ಸಮಯ ಮತ್ತು ಹಣದ ವ್ಯರ್ಥ ಬಳಕೆಯಿಂದ ತೀವ್ರ ಅನಾನುಕೂಲವಾಗಲಿದೆ.ಕೊಪ್ಪಳ ಜಿಲ್ಲಾ ಕೇಂದ್ರದೊಂದಿಗೆ ಕುಷ್ಟಗಿ ತಾಲೂಕಿನ ಎಲ್ಲ ಸಾರ್ವಜನಿಕರಿಗೆ ಕಳೆದ 25 ವರ್ಷಗಳಿಂದ ಭಾವನಾತ್ಮಕ ನಂಟು ಏರ್ಪಟ್ಟಿದ್ದು, ಜಿಲ್ಲಾ ನ್ಯಾಯಾಲಯ ಸೇರಿದಂತೆ ಜಿಲ್ಲಾ ಮಟ್ಟದ ಬೇರೆ ಬೇರೆ ಕಚೇರಿಗಳ ಕಾರ್ಯ ಸಾಧನೆಗೆ ಸಾರ್ವಜನಿಕರ ಭಾವನಾತ್ಮಕ ನಂಟಿಗೆ ಅಡಳಿತಾತ್ಮಕವಾಗಿ ಧಕ್ಕೆ ಉಂಟು ಮಾಡಿದಂತಾಗುತ್ತದೆ. ನೂತನ ಗಂಗಾವತಿ ಉಪವಿಭಾಗ ಕಂದಾಯ ವ್ಯಾಪ್ತಿಗೆ ಕುಷ್ಟಗಿ ತಾಲೂಕನ್ನು ಸೇರಿಸುವ ಪ್ರಸ್ತಾವನೆ ಹಾಗೂ ಚಿಂತನೆ ಕೈ ಬಿಟ್ಟು ಕೊಪ್ಪಳ ಜಿಲ್ಲಾ ಕೇಂದ್ರದ ಉಪವಿಭಾಗ ವ್ಯಾಪ್ತಿಗೆ ಕುಷ್ಟಗಿ ತಾಲೂಕನ್ನು ಮೊದಲಿನಂತೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ಕುಷ್ಟಗಿ ತಾಲೂಕಿನಲ್ಲಿ ಬಂದ್ ಹೋರಾಟ ಹಮ್ಮಿಕೊಳ್ಳುವ ಮೂಲಕ ಉಗ್ರ ರೀತಿಯ ಹೋರಾಟ ನಡೆಸಿ, ಹಕ್ಕೋತ್ತಾಯ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭ ಶಾರದಾ ಕಟ್ಟಿಮನಿ, ಹಸನುದ್ದೀನಸಾಬ, ಸೈಯದ್ ಅಮೀರ್, ಗ್ಯಾನಪ್ಪ ಜಾಲಿಹಾಳ, ದೇವಪ್ಪ ಕಂಬಳಿ, ಮೆಹಬೂಬಸಾಬ ನೆರೆಬೆಂಚಿ, ಯಮನೂರಪ್ಪ, ದುರುಗೇಶ, ಶಿವಪ್ಪ, ಮಾಂತೇಶ ಬಿ, ಕಾಡಪ್ಪ ಸೇರಿದಂತೆ ಹಲವರು ಇದ್ದರು.