ಹೊಸಕೋಟೆ: ಮಹಾತ್ಮ ಗಾಂಧೀಜಿಯ ಸ್ವಚ್ಛ ಭಾರತದ ಕನಸು ಸಾಕಾರಗೊಳಿಸಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು ಗ್ರಾಪಂ ಸಿಬ್ಬಂದಿ ಜೊತೆ ಕೈಜೋಡಿಸಬೇಕು ಎಂದು ಅನುಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷ ಮುತ್ಕೂರು ಸಂತೋಷ್ ತಿಳಿಸಿದರು.
ತಾಲೂಕಿನ ಅನುಗೊಂಡನಹಳ್ಳಿ ಗ್ರಾಪಂ ಆವರಣದಲ್ಲಿ ಸ್ವಚ್ಛತಾವಾಹಿನಿ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿ. ಗ್ರಾಮಸ್ಥರು ಎಲ್ಲೆಂದರಲ್ಲಿ ಕಸ ಎಸೆಯದೆ ವೈಜ್ಞಾನಿಕವಾಗಿ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ, ಕಸ ವಿಲೇವಾರಿ ವಾಹನಗಳಿಗೆ ನೀಡಬೇಕು. ಕಸ ವಿಲೇವಾರಿ ಕೇವಲ ಗ್ರಾಪಂ ಕರ್ತವ್ಯವೆಂದು ಮೂಗು ಮುರಿಯಬಾರದು. ಸಾರ್ವಜನಿಕರು ಸಹಕರಿಸಿದರೆ ಮಾತ್ರ ಗ್ರಾಮಗಳ ಅಂದ-ಚೆಂದ ಹೆಚ್ಚಿಸಲು ಸಾಧ್ಯ ಎಂದರು. ಇದಕ್ಕಾಗಿ ಪ್ರತಿಯೊಬ್ಬರು ಸಾರ್ವಜನಿಕ ಸ್ಥಳಗಳನ್ನು ತಮ್ಮ ಮನೆಯ ಆವರಣದಂತೆ ಕಾಣಬೇಕು. ಹೀಗಾದರೆ ಪ್ರತಿಯೊಬ್ಬರಲ್ಲೂ ಸ್ವಚ್ಛತೆ ಕಾಪಾಡುವ ಬಗ್ಗೆ ಕಾಳಜಿ ಹುಟ್ಟುತ್ತದೆ ಎಂದರು.ಪಿಡಿಒ ರವಿಚಂದ್ರ ಮಾತನಾಡಿ, ಅನುಗೊಂಡನಹಳ್ಳಿ ಗ್ರಾಪಂ ಹೆಚ್ಚಿನ ಜನಸಂಖ್ಯೆ ಹೊಂದಿದ್ದು ಕಸ ವಿಲೇವಾರಿ ಬಹು ದೊಡ್ಡ ಸಮಸ್ಯೆಯಾಗಿತ್ತು. ಇದಕ್ಕೆ ಶಾಶ್ವತ ಪರಿಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ಕಸ ಸಂಗ್ರಹಿಸುವ ೨ ವಾಹನಗಳಿಗೆ ಇಂದು ಚಾಲನೆ ನೀಡಲಾಗಿದೆ. ಸಂಗ್ರಹವಾದ ಕಸವನ್ನು ನೇರವಾಗಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ವಿಲೇವಾರಿ ಮಾಡಲಾಗುತ್ತದೆ. ನಾಗರಿಕರು ಮನೆಗಳಲ್ಲಿಯೇ ತ್ಯಾಜ್ಯವನ್ನು ಪ್ರತ್ಯೇಕಿಸಿ ಕಸದ ವಾಹನಗಳಿಗೆ ಹಾಕಬೇಕು. ಅಂಗಡಿ, ಹೋಟೆಲ್ ಹಾಗೂ ವಾಣಿಜ್ಯ ಮಳಿಗೆಗಳ ಕಸವನ್ನು ಎಲ್ಲೆಂದರಲ್ಲಿ ಕಸ ಸುರಿದರೆ ದಂಡದ ಜೊತೆಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಎಂದರು.
ಇದೇ ಸಂದರ್ಭದಲ್ಲಿ ಕಸ ಸಂಗ್ರಹಿಸುವ ಕಾರ್ಮಿಕರಿಗೆ ಸೇಫ್ಟಿ ಕಿಟ್ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು.ಉಪಾಧ್ಯಕ್ಷ ರೂಮಿಯಾ ತರ್ಮೂಪ್ ಅನ್ಸರ್, ಸದಸ್ಯರಾದ ರಾಜ್ ಕುಮಾರ್, ಅಕ್ರಮ್, ವೆಂಕಟರಾಜು , ಸುಷ್ಮಾ ಪ್ರದೀಪ್, ಕಾಂಟ್ರ್ಯಾಕ್ಟರ್ ಗಿರೀಶ್‌ರೆಡ್ಡಿ, ಕಾರ್ಯದರ್ಶಿ ರಾಮೇಗೌಡ, ಕರ ವಸೂಲಿಗಾರ ವಿಶ್ವನಾಥ್, ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ವಸಂತ, ಡಿಇಒ ಶರತ್ ಕುಮಾರ್ ಇತರರಿದ್ದರು.
ಪೋಟೋ :–4 ಹೆಚ್‌ಎಸ್‌ಕೆ 8ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಗ್ರಾಪಂ ಆವರಣದಲ್ಲಿ ಸ್ವಚ್ಛತಾ ವಾಹಿನಿ ಕಸ ಸಂಗ್ರಹ ವಾಹನಗಳಿಗೆ ಗ್ರಾಪಂ ಅಧ್ಯಕ್ಷ ಮುತ್ಕೂರು ಸಂತೋಷ್ ಚಾಲನೆ ನೀಡಿದರು. ಉಪಾಧ್ಯಕ್ಷ ರೂಮಿಯಾ ತರ್ಮೂಪ್ ಅನ್ಸರ್, ಸದಸ್ಯರಾದ ರಾಜ್ ಕುಮಾರ್, ಅಕ್ರಮ್, ಪಿಡಿಒ ರವಿಚಂದ್ರ ಇತರರಿದ್ದರು.