ಕೋವಿಡ್‌ ಹೊಸ ತಳಿಯ ಬಗ್ಗೆ ಸಾರ್ವಜನಿಕರಿಗೆ ಭಯ ಬೇಡ

KannadaprabhaNewsNetwork | Published : Dec 21, 2023 1:15 AM

ಸಾರಾಂಶ

ಕೋವಿಡ್-19 ರಾಜ್ಯ ತಾಂತ್ರಿಕ ಸಲಹಾ ಸಮಿತಿಯು ಎಚ್ಚರಿಕೆ ನೀಡಿದೆ. ಚಳಿಗಾಲದ ಹವಾಮಾನ, ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಹೆಚ್ಚಾಗುವ ಸಂಭವದಿಂದ ಸಲಹಾತ್ಮಕ ಮಾರ್ಗಸೂಚಿಗಳನ್ನು ಶಿಫಾರಸು ಮಾಡಿದೆ. ಈ ಅಂಶಗಳನ್ನು ಜಿಲ್ಲೆಯ ಸಾರ್ವಜನಿಕರು ಸಹ ಪಾಲಿಸುವಂತೆ ಜಿಲ್ಲಾಧಿಕಾರಿ ಗುರುದತ್‌ ಹೆಗಡೆ ಸೂಚಿಸಿದ್ದಾರೆ.

- ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಪ್ರಕರಣವಿಲ್ಲ । ಸುರಕ್ಷತೆಗಾಗಿ ಮುಂಜಾಗೃತಾ ಕ್ರಮ ವಹಿಸಲು ಜಿಲ್ಲಾಧಿಕಾರಿಗಳು ಮನವಿ

ಕನ್ನಡಪ್ರಭ ವಾರ್ತೆ ಧಾರವಾಡ

ಕಳೆದ ಒಂದು ವಾರದಿಂದ ಎಲ್ಲೆಡೆ ಕೋವಿಡ್‌ ಸೋಂಕು ಮತ್ತೆ ಸದ್ದು ಮಾಡುತ್ತಿದೆ. ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲೂ ಕೋವಿಡ್ ಹೊಸ ತಳಿಯ ರೋಗಾಣು ಪತ್ತೆಯಾಗಿರುವ ವರದಿಯಾಗಿದೆ. ಸಮಾಧಾನದ ಸಂಗತಿ ಏನೆಂದರೆ, ಜಿಲ್ಲೆಯಲ್ಲಿ ಇಂದಿನ ವರೆಗೂ ಮತ್ತೆ ಯಾವುದೇ ಸ್ವರೂಪದ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲ ಈ ಸೋಂಕು ಪತ್ತೆಯಾಗದಂತೆ, ಗಾಬರಿಪಡದೇ ಆರೋಗ್ಯ ಸುರಕ್ಷತೆಗಾಗಿ ಸೂಕ್ತ ಮುನ್ನೆಚ್ಚರಿಕೆ, ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಸೂಚಿಸಿದೆ.

ಈಗಾಗಲೇ ಕೋವಿಡ್‌ ಕುರಿತು ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ಸಹ ನಡೆಸಿದ್ದಾರೆ. ರಾಜ್ಯ ಸರ್ಕಾರದಿಂದ ಬಂದಿರುವ ಸೂಚನೆಗಳನ್ನು ಅಧಿಕಾರಿಗಳಿಗೆ ತಿಳಿಸಿದ್ದು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಗುರುದತ್‌ ಹೆಗಡೆ, ಕೋವಿಡ್-19 ರಾಜ್ಯ ತಾಂತ್ರಿಕ ಸಲಹಾ ಸಮಿತಿಯು ಎಚ್ಚರಿಕೆ ನೀಡಿದೆ. ಚಳಿಗಾಲದ ಹವಾಮಾನ, ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಹೆಚ್ಚಾಗುವ ಸಂಭವದಿಂದ ಸಲಹಾತ್ಮಕ ಮಾರ್ಗಸೂಚಿಗಳನ್ನು ಶಿಫಾರಸು ಮಾಡಿದೆ. ಈ ಅಂಶಗಳನ್ನು ಜಿಲ್ಲೆಯ ಸಾರ್ವಜನಿಕರು ಸಹ ಪಾಲಿಸುವಂತೆ ಸೂಚಿಸಿದ್ದಾರೆ.

ಕ್ರಮಗಳಿವು

60 ವರ್ಷ ಹಾಗೂ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು, ವಿಶೇಷವಾಗಿ ಕಿಡ್ನಿ, ಹೃದಯ, ಲೀವರ್ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಹಾಗೂ ಗರ್ಭಿಣಿಯರು, ಎದೆ ಹಾಲುಣಿಸುವ ತಾಯಂದಿರು ಜನದಟ್ಟಣೆ, ಹೊರಾಂಗಣ ಪ್ರದೇಶಗಳಿಗೆ ತೆರಳಿದಾಗ ಮಾಸ್ಕ್ ಧರಿಸಬೇಕು. ಅಗತ್ಯ ಗಾಳಿ-ಬೆಳಕಿನ ವ್ಯವಸ್ಥೆಯಿಲ್ಲದ ಮತ್ತು ಹೆಚ್ಚು ಜನಸಂದಣಿಯಿರುವ ಪ್ರದೇಶಗಳಿಗೆ ಸಾಧ್ಯವಾದಷ್ಟು ತೆರಳುವಂತಿಲ್ಲ. ಜ್ವರ, ಕೆಮ್ಮು, ನೆಗಡಿ, ಉಸಿರಾಟದ ಸೋಂಕಿನ ಲಕ್ಷಣಗಳನ್ನು ಹೊಂದಿದವರು ತಕ್ಷಣವೇ ಅಗತ್ಯ ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಮೂಗು ಹಾಗೂ ಬಾಯಿ ಮುಚ್ಚುವಂತೆ ಮಾಸ್ಕ್ ಧರಿಸಬೇಕು, ಅಗತ್ಯ ಗಾಳಿ-ಬೆಳಕಿನ ವ್ಯವಸ್ಥೆಯಿಲ್ಲದ ಮತ್ತು ಹೆಚ್ಚು ಜನಸಂದಣಿಯಿರುವ ಪ್ರದೇಶಗಳಿಗೆ ಭೇಟಿ ನೀಡಬಾರದು ಎಂದು ತಿಳಿಸಿದ್ದಾರೆ.

ಉತ್ತಮ ವೈಯಕ್ತಿಕ ಸ್ವಚ್ಚತೆ, ಆಗಾಗ್ಗೆ ಕೈಗಳನ್ನು ಸೋಪು ಹಾಗೂ ನೀರಿನಿಂದ ತೊಳೆದುಕೊಳ್ಳುವುದು, ಮುಂಜಾಗ್ರತೆ ಪಾಲನೆಯು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ಮನೆಯಲ್ಲಿರುವುದು ಸೂಕ್ತ. ಆರೋಗ್ಯ ಸಮಸ್ಯೆಗಳನ್ನು ಹೊಂದಿದವರು ಮಾಸ್ಕ್ ಧರಿಸಬೇಕು. ಹಾಗೂ ಅಂತಾರಾಷ್ಟ್ರೀಯ ಪ್ರಯಾಣದ ಸಂದರ್ಭದಲ್ಲಿ ಎಚ್ಚರಿಕೆಯಿಂದಿದ್ದು, ವಿಮಾನ ನಿಲ್ದಾಣದಲ್ಲಿ ಹಾಗೂ ವಿಮಾನದ ಒಳಗೆ ಮಾಸ್ಕ್ ಧರಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಏನೇನು ಸಿದ್ಧತೆ

ಜಿಲ್ಲೆಯಲ್ಲಿ ಕೋವಿಡ್ –19 ನಿಯಂತ್ರಣಕ್ಕಾಗಿ ಎಲ್ಲ ಅಗತ್ಯ ಕ್ರಮಗಳನ್ನು ಕೈಕೊಳ್ಳಲಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ, ಧಾರವಾಡ ಜಿಲ್ಲಾ ಆಸ್ಪತ್ರೆ ಮತ್ತು ಕಲಘಟಗಿ, ನವಲಗುಂದ ಮತ್ತು ಕುಂದಗೋಳ ತಾಲೂಕು ಆಸ್ಪತ್ರೆಗಳಲ್ಲಿ ಸೋಂಕಿನ ನಿಯಂತ್ರಣಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಚಿಕಿತ್ಸೆಗಾಗಿ ವಿವಿಧ ಆಸ್ಪತೆಗಳಲ್ಲಿ ಒಟ್ಟು 5,450 ಹಾಸಿಗೆಗಳು ಲಭ್ಯವಿವೆ. 1666 ಆಕ್ಸಿಜನ್ ಹಾಸಿಗೆಗಳು, 565 ಐ.ಸಿ.ಯು. ಹಾಸಿಗೆಗಳು, 205 ವೆಂಟಿಲೇಟರ್ಸ್ ಹಾಸಿಗೆಗಳು, 400 ಆಕ್ಷಿಜನ್ ಕಾನಸೆಂಟ್ರೇಟರ್ಸ್, 1307 ಆಕ್ಷಿಜನ್ ಸಿಲಿಂಡರ್‌ಗಳು, 15 ಪಿ.ಎಸ್.ಎ. ಪ್ಲ್ಯಾಂಟ್‌ಗಳು ಹಾಗೂ 21 ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸ್ಟೋರೆಜ್ ಟ್ಯಾಂಕ್‌ಗಳು ಲಭ್ಯವಿವೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಮತ್ತು ಧಾರವಾಡದ ಡಿಮ್ಹಾನ್ಸ್ ಆಸ್ಪತ್ರೆಯಲ್ಲಿ ಕೋವಿಡ್–19 ಪರೀಕ್ಷೆ ಕೈಗೊಳ್ಳಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಪ್ರಸ್ತುತ ಜಿಲ್ಲೆಯಲ್ಲಿ ಯಾವುದೇ ಕೋವಿಡ್-19 ರ ಪ್ರಕರಣವು ವರದಿಯಾಗಿಲ್ಲ. ಸಾರ್ವಜನಿಕರು ಯಾವುದೇ ಗಾಬರಿ ಪಡುವ ಅಗತ್ಯವಿಲ್ಲ. ಸಾರ್ವಜನಿಕರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡಬೇಕು ಹಾಗೂ ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

Share this article