ನರಗುಂದ: ಸಂಸ್ಕಾರಯುತ ವ್ಯಕ್ತಿತ್ವ ರೂಪಿಸುವುದು ಶಿಕ್ಷಣದ ಮೂಲ ಉದ್ದೇಶವಾಗಿದ್ದು, ತರಗತಿಯಲ್ಲಿ ಪಠ್ಯಕ್ರಮ ಅಭ್ಯಾಸಿಸುವುದರ ಜತೆಗೆ ಸಾಮಾಜಿಕ ಕಳಕಳಿಯ ಪಠ್ಯೇತರ ಚಟುವಟಿಕೆಗಳು ಪ್ರಶಿಕ್ಷಣಾರ್ಥಿಗಳನ್ನು ಅನುಭವಶಾಲಿ ನಾಗರಿಕರನ್ನಾಗಿ ಪರಿವರ್ತಿಸುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಡಾ. ಎಸ್.ಬಿ.ಯಾದವಾಡ ಹೇಳಿದರು.
ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವೀರನಗೌಡ ಪಾಟೀಲ ಮಾತನಾಡಿ, ದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಶಿಕ್ಷಣಾರ್ಥಿಗಳ ಮೇಲೆ ಅಪಾರವಾದ ಜವಾಬ್ದಾರಿ ಇದ್ದು ಅದನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದರು.
ಸಂಸ್ಥೆಯ ನಿರ್ದೇಶಕ ಅಜ್ಜನಗೌಡ ಪಾಟೀಲ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಬೇರೆ ಬೇರೆ ಸರ್ಕಾರಿ ಇಲಾಖೆಗಳಲ್ಲಿಯೂ ಕೂಡ ಸೇವೆ ಸಲ್ಲಿಸುತ್ತಿದ್ದಾರೆ ಇದಕ್ಕೆ ಕಾರಣ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ದೊರೆಯುತ್ತಿರುವ ಗುಣಮಟ್ಟದ ತರಬೇತಿ ಶಿಕ್ಷಣವೇ ಕಾರಣ ಇದಕ್ಕೆಲ್ಲ ಶ್ರಮಿಸುತ್ತಿರುವ ಶಿಕ್ಷಕ ವೃಂದದವರಿಗೂ ಕೃತಜ್ಞತೆ ಎಂದರು.ಸಾನ್ನಿಧ್ಯ ವಹಿಸಿದ್ದ ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಹಾಗೂ ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ಮಾತನಾಡಿ, ಮುದ್ದು ಮಕ್ಕಳ ಮನಸ್ಸನ್ನು ಅರಿತು ಅವರನ್ನು ಪ್ರಗತಿಯಡೆಗೆ ಕೊಂಡೊಯ್ಯಬಲ್ಲ ಏಕೈಕ ನೇತಾರ ಶಿಕ್ಷಕ ಇಂತಹ ವೃತ್ತಿ ಪವಿತ್ರವಾದದ್ದಾಗಿದೆ ಇದನ್ನು ನಿಭಾಯಿಸುವ ಸಹನ ಶಕ್ತಿ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಆರ್.ಬಿ. ಪಾಟೀಲ ಮಾತನಾಡಿ, ಮುಂದಿನ ಬಾವಿ ಶಿಕ್ಷಕರಾಗಬೇಕು ಎಂದು ಕನಸು ಹೊತ್ತು ಬಂದ ವಿದ್ಯಾರ್ಥಿಗಳೇ ನಿಮಗಿದು ಒಂದು ಸುವರ್ಣ ಅವಕಾಶ ಕಾರಣ ಶಿಕ್ಷಕ ವೃತ್ತಿ ಎಂಬುದು ಒಂದು ತಪಸ್ಸು ಇದ್ದ ಹಾಗೇ ಅದಕ್ಕೆ ದೇವರೇ ಒಲಿಯುತ್ತಾನೆ ಹಾಗಾಗಿ ದೇವರನ್ನು ಕಾಣುವ ಏಕೈಕ ವ್ಯಕ್ತಿ ಅಂದರೆ ಅದು ಶಿಕ್ಷಕರು ಮಾತ್ರ ಎಂದರು.
ವಂದನಾ ರೇವತ್ಗಾವ್ ಪ್ರಾರ್ಥಿಸಿದರು. ಭಾಗ್ಯಶ್ರೀ ಉಳ್ಳಾಗಡ್ಡಿ ಸ್ವಾಗತಿಸಿದರು. ಶಿವರಂಜನ್ ಗುರು ಬಸಣ್ಣವರ ವಂದಿಸಿದರು. ಜ್ಯೋತಿ ಜಾಮದಾರ್ ಮತ್ತು ಶ್ರೀದೇವಿ ನಿಡಗುಂದಿ ನಿರೂಪಿಸಿದರು.