ನರಗುಂದ: ಮಕ್ಕಳ ಆಸಕ್ತಿ, ಅಭಿರುಚಿ, ಕಲ್ಪನೆ, ಭಾವನೆ, ಯೋಚನೆಗಳು ಕಥೆ ಕವನ ಹಾಗೂ ನಾಟಕಗಳ ಮೂಲಕ ಅಭಿವ್ಯಕ್ತಗೊಳ್ಳುತ್ತವೆ. ಇಂತಹ ಮಕ್ಕಳ ಕಲ್ಪನಾಲೋಚನೆಗಳಿಗೆ ಮಕ್ಕಳ ಸಾಹಿತ್ಯ ಸಂಭ್ರಮ ಉತ್ತಮ ವೇದಿಕೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ ಹೇಳಿದರು.
ಅವರು ತಾಲೂಕಿನ ಜಗಾಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜಿಪಂ, ತಾಪಂ, ಶಾಲಾ ಶಿಕ್ಷಣ ಇಲಾಖೆ, ಹುಣಶೀಕಟ್ಟಿ, ಬನಹಟ್ಟಿ ಹಾಗೂ ಕಣಕಿಕೊಪ್ಪ ಗ್ರಾಪಂ ಸಂಯುಕ್ತಾಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಮಕ್ಕಳ ಸಾಹಿತ್ಯ ಸಂಭ್ರಮ-೨೦೨೪ರ ಮೂರು ದಿನಗಳ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿ ಮಾತನಾಡಿದರು.ಪ್ರತಿಯೊಂದು ಮನೆಯ ಮಕ್ಕಳು ಸಾಹಿತಿಗಳಾಬೇಕು. ಸಾಹಿತಿಗಳಿರುವ ಮನೆಯ ಮಕ್ಕಳಲ್ಲೂ ಸಾಹಿತ್ಯ ಸೃಜನೆ ಮಾಡುವ ಕಾರ್ಯಕ್ರಮ ಮಕ್ಕಳ ಸಾಹಿತ್ಯ ಸಂಭ್ರಮವಾಗಿರುವುದು ವಿಶೇಷ. ಮಕ್ಕಳಲ್ಲಿನ ಸೃಜನೆಶೀಲತೆ, ತರಹೇವಾರಿ ಆಲೋಚನೆಗಳು ಹಾಗೂ ಅಭಿರುಚಿಗಳನ್ನು ಹೊರತೆಗೆಯುವ ಕೆಲಸವನ್ನು ಮಕ್ಕಳ ಸಾಹಿತ್ಯ ಸಂಭ್ರಮ ಮಾಡಲಿದೆ. ಹೀಗಾಗಿ ತಾಲೂಕಿನ ಈ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸದುಪಯೋಗವನ್ನು ಭಾಗವಹಿಸಿದ ಎಲ್ಲ ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಮಕ್ಕಳ ಆರಂಭಿಕ ೨೫ ವರ್ಷದ ಜೀವನ ಪ್ರಕಾಶಮಾನವಾದ ಜೀವನವಾಗಿದೆ. ಇಂತಹ ಪ್ರಕಾಶಮಾನವಾದ ಜೀವನದಲ್ಲಿ ಸಂಪನ್ಮೂಲ ಶಿಕ್ಷಕರು ಮಕ್ಕಳ ಬೌದ್ಧಿಕತೆಯನ್ನು ತಿದ್ದಿ ತೀಡಿ ಶೈಕ್ಷಣಿಕವಾಗಿ ಸದೃಢರನ್ನಾಗಿ ಮಾಡುತ್ತಾರೆ. ಈ ಕಾರ್ಯಕ್ರಮದಲ್ಲಿ ೧೯ ಅಧಿಕ ಸಂಪನ್ಮೂಲ ವ್ಯಕ್ತಿಗಳು ಸೇರಿ ೧೦೦ಕ್ಕೂ ಅಧಿಕ ಮಕ್ಕಳಲ್ಲಿನ ವಿವಿಧ ಪ್ರತಿಭೆಯನ್ನು ಹೊರತಗೆಯುವ ಕೆಲಸ ಮಾಡುವ ಜವಾಬ್ದಾರಿ ಹೊಂದಿದ್ದಾರೆ. ಮಕ್ಕಳೆಲ್ಲರೂ ಸಂಪನ್ಮೂಲ ವ್ಯಕ್ತಿಗಳು ಕೊಡುವ ಸೂಚನೆಗಳನ್ವಯ ನಡೆದುಕೊಂಡು ಈ ಕಾರ್ಯಕ್ರಮ ಯಶಸ್ವಿಗೆ ಸಾಕ್ಷಿ ಆಗಿದೆ ಎಂದರು.ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಇನಾಮದಾರ ಮಾತನಾಡಿದರು. ಮಕ್ಕಳ ಸಾಹಿತ್ಯ ಸಂಭ್ರಮದಂತಹ ಕಾರ್ಯಕ್ರಮ ಮಕ್ಕಳ ಜ್ಞಾನಾಭಿವೃದ್ಧಿಯನ್ನು ಹೆಚ್ಚಿಸುವಂತ ಕಾರ್ಯಕ್ರಮವಾಗಿವೆ. ಮಕ್ಕಳಲ್ಲಿ ಅನೇಕ ಪ್ರತಿಭೆಗಳು ಇರುತ್ತವೆ. ಅಂತಹ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ಕಾರ್ಯವನ್ನು ಮಕ್ಕಳ ಸಾಹಿತ್ಯ ಸಂಭ್ರಮ ಮಾಡಲಿದೆ. ಇದರ ಲಾಭವನ್ನು ಶಿಬಿರದಲ್ಲಿ ಭಾಗವಹಿಸಿದ ಮಕ್ಕಳೆಲ್ಲ ಪಡೆದುಕೊಳ್ಳಬೇಕೆಂದು ಶಾಲಾ ಮಕ್ಕಳಿಗೆ ಮಾರ್ಗದರ್ಶಿಸಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಎಸ್. ಉಳ್ಳಾಗಡ್ಡಿ ಮಾತನಾಡಿ, ಮೂರು ದಿನಗಳ ಕಾಲ ನಡೆಯುವ ಮಕ್ಕಳ ಸಾಹಿತ್ಯ ಸಂಭ್ರಮದ ಹೂರಣವನ್ನು ಪರಿಚಯಿಸಿದರು.ಕವಿತೆ ಕಟ್ಟೋಣ, ಕಥೆ ಕಟ್ಟೋಣ, ನಾಟಕ ಮಾಡೋಣ ಹಾಗೂ ನಾನು ರಿಪೋರ್ಟರ್ ಎಂದು ನಾಲ್ಕು ವಿಭಾಗಗಳಲ್ಲಿ ಮಕ್ಕಳ ಜ್ಞಾನವನ್ನು ಹೆಚ್ಚಿಸುವ ಕೆಲಸ ಮಾಡಲಾಗುತ್ತದೆ. ಪ್ರತಿಯೊಂದು ವಿಭಾಗಕ್ಕೂ ನಿಯೋಜಿಸಿರುವ ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ಅಭಿರುಚಿಯನ್ನು ಹೊರತಗೆಯುವ ಕೆಲಸ ಮಾಡುತ್ತಾರೆ. ಇದರಿಂದ ಮಕ್ಕಳಲ್ಲಿ ಅಡಗಿರುವ ಜ್ಞಾನ ಹೊರಹೊಮ್ಮಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಹುಣಶೀಕಟ್ಟಿ, ಬನಹಟ್ಟಿ ಹಾಗೂ ಕಣಕಿಕೊಪ್ಪ ಗ್ರಾಪಂ ವ್ಯಾಪ್ತಿಯ ೧೪ ಹಿರಿಯ ಮತ್ತು ಪ್ರೌಢ ಶಾಲೆಗಳ ೧೦೦ ಕ್ಕೂ ಅಧಿಕ ಮಕ್ಕಳು, ಶಿಕ್ಷಕಿ ಭುವನೇಶ್ವರಿ ಅಂಗಡಿ, ವಾಣಿ ಹೂಗಾರ, ಶಿಕ್ಷಕ ಬಿ.ಎನ್. ಮಲ್ಲಾಪೂರ ವಂದಿಸಿದರು. ಶಿಕ್ಷಕರಾದ ಎನ್.ಎಂ. ನಾಯ್ಕರ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕಿ ಕೃಷ್ಣಮ್ಮ ಹಾದಿಮನಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆನಂದ ಭೋವಿ, ಹುಣಶೀಕಟ್ಟಿ, ಬನಹಟ್ಟಿ ಹಾಗೂ ಕಣಕಿಕೊಪ್ಪ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು. ಜಗಾಪೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು, ತಾಪಂ, ಸಿಬ್ಬಂದಿ ವರ್ಗ, ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.