ಬೀಕನಹಳ್ಳಿ ಶ್ರೀ ಚಾಮುಂಡೇಶ್ವರಿ ಸುಕ್ಷೇತ್ರದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ
ಸಮಾಜದಲ್ಲಿ ದುಷ್ಟ ಶಕ್ತಿಗಳು ದೂರವಾಗಿ ಸಜ್ಜನ ಶಕ್ತಿಯ ವಿಜಯವಾಗಬೇಕು. ದುಷ್ಟ ಶಕ್ತಿಯ ದಮನ, ಶಿಷ್ಟ ಶಕ್ತಿಯ ರಕ್ಷಣೆ ಮಾಡುವುದೇ ನವರಾತ್ರಿ ಮಹೋತ್ಸವದ ಉದ್ದೇಶ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಬೀಕನಹಳ್ಳಿಯ ಶ್ರೀ ಚಾಮುಂಡೇಶ್ವರಿ ಸುಕ್ಷೇತ್ರದಲ್ಲಿ 73ನೇ ವರ್ಷದ ನಾಡ ಹಬ್ಬ ದಸರಾ ಮಹೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ದೇವಿ ಆರಾಧಿಸುವ ಮೂಲಕ ನಮ್ಮೊಳಗಿರುವ ದುಷ್ಟ ಶಕ್ತಿ ದೂರವಾಗಬೇಕು. ಧರ್ಮ, ನೀತಿ, ನೈತಿಕತೆ ಇವು ಬರಬೇಕಾದರೆ ಶಿಷ್ಟ ಶಕ್ತಿ ರಕ್ಷಣೆಯಾಗಬೇಕು. ದೇಶದಲ್ಲಿರುವ ವಿರೋಧಿಗಳೆಲ್ಲರೂ ನಾಶವಾಗಿ ಸಂರಕ್ಷಿತವಾಗಬೇಕು. ಧರ್ಮ ಶಾಸ್ತ್ರದ ರಕ್ಷಣೆಗೆ ಶಸ್ತ್ರದ ಅವಶ್ಯಕತೆ ಇದೆ ಎಂದು ಹೇಳಿದರು.ರಾಕ್ಷಸಿ ಶಕ್ತಿ ಸಂಹಾರಕ್ಕೆ ಎಲ್ಲಾ ದೇವತೆಗಳು ತಮ್ಮ ಶಕ್ತಿ ಧಾರೆಯೆರೆದು ವಿವಿಧ ರೂಪದಲ್ಲಿ ಸಮಾಜದ ರಕ್ಷಣೆ ಮಾಡಿರುವ ಕುರಿತು ಪುರಾಣ ಕಥೆಗಳಲ್ಲಿ ಕೇಳಿದ್ದೇವೆ ಎಂದರು.
ದೇಶದಲ್ಲಿ ಸಿದ್ಧಾಂತ, ಅಭಿಪ್ರಾಯ ಭೇದ, ರಾಜಕೀಯ ಪಕ್ಷಗಳು ಇರಬಹುದು. ದೇಶಕ್ಕೆ ಯಾರು ಶತ್ರುಗಳಾಗಿ ಇರುತ್ತಾರೆಯೋ ಅವರು ದೇಶವಾಸಿಗಳಿಗೂ ಶತ್ರುಗಳಾಗಿರುತ್ತಾರೆ. ದೇಶಕ್ಕೆ ಮಿತ್ರರಾದವರು ದೇಶ ವಾಸಿಗಳಿಗೆ ಮಿತ್ರರಾಗಿದ್ದು ಈ ನಿಟ್ಟಿನಲ್ಲಿ ನವರಾತ್ರಿ ಉತ್ಸವಗಳು ಜನರಿಗೆ ಸತ್ಯದ ದರ್ಶನ ಮಾಡುತ್ತಿವೆ ಎಂದು ಕರೆ ನೀಡಿದರು.
ಭಾರತ್ ಮಾತಾ ಕೀ ಜೈ ಎಂದು ದೇಶಕ್ಕೆ ಗುಣಗಾನ ಮಾಡಿ ಜಯಕಾರ ಹಾಕುವುದು ತಪ್ಪು ಅಂತ ಯಾರಿಗೆ ಅನ್ನಿಸುತ್ತದೆಯೋ ಅವರನ್ನು ಭಾರತೀಯರು ಎಂದು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ. ದೇಶದ ಪ್ರಶ್ನೆ ಬಂದಾಗ ನಾವೆಲ್ಲಾ ಒಂದಾಗಬೇಕು. ಧರ್ಮದ ಪ್ರಶ್ನೆ ಬಂದಾಗ ಜಾತಿಯನ್ನು ಮೀರಿ ಸನಾತನಿಯರಾಗಿ, ಹಿಂದೂಗಳಾಗಿ ಎದ್ದು ನಿಲ್ಲಬೇಕೆಂದು ಎಚ್ಚರಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಬಿ.ಜಿ. ಸೋಮಶೇಖರ್ ಮಾತನಾಡಿ, 17ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅರಸರು ದಸರಾ ನವರಾತ್ರಿ ಮಹೋತ್ಸವ ಆಚರಿಸುತ್ತ ಬಂದಿದ್ದರು. ವಿಶ್ವ ವಿಖ್ಯಾತ ಮೈಸೂರು ನಾಡ ದಸರಾ ಹಬ್ಬ ಆಚರಿಸುವ ಮಾದರಿಯಲ್ಲಿ ಬೀಕನಹಳ್ಳಿಯಲ್ಲಿ ದಸರಾ ಉತ್ಸವ ಆಚರಣೆ ಆಗುತ್ತಿರುವುದನ್ನು ಶ್ಲಾಘಿಸಿದರು.
ಚಾಮುಂಡೇಶ್ವರ ಸುಕ್ಷೇತ್ರದ ಅಧ್ಯಕ್ಷ ಬಿ.ಪಿ. ನಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಉಪಾಧ್ಯಕ್ಷ ಗುರುಬಸಪ್ಪ, ಯೋಗಾನಂದ್, ಸೋಮೇ ಗೌಡ, ನಾಗರಾಜ್, ಪರಮೇಶ್ವರಪ್ಪ, ಎಚ್.ಪಿ. ಮಂಜೇಗೌಡ ಹಾಗೂ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.
ಚಿಕ್ಕಮಗಳೂರು ನಗರ ಹೊರ ವಲಯದ ಬೀಕನಹಳ್ಳಿಯ ಶ್ರೀ ಚಾಮುಂಡೇಶ್ವರಿ ಸುಕ್ಷೇತ್ರದಲ್ಲಿ ದಸರಾ ಮಹೋತ್ಸವಕ್ಕೆ ಸಿ.ಟಿ.ರವಿ ಚಾಲನೆ ನೀಡಿದರು. ನಿರಂಜನ್, ಮಂಜೇಗೌಡ, ನಂಜಪ್ಪ, ಗುರುಬಸಪ್ಪ, ಯೋಗಾನಂದ್ ಇದ್ದರು.