ಓರಿಯಂಟೇಶನ್ ತರಬೇತಿ ಕಾರ್ಯಕ್ರಮ
ನೊಂದ ಮಹಿಳೆಗೆ ಶೀಘ್ರ ನ್ಯಾಯ ಒದಗಿಸುವುದು ಕಾನೂನಿನ ಉದ್ದೇಶವಾಗಿದೆ. ಕಾಲಕಾಲಕ್ಕೆ ಕಾಯ್ದೆಗಳ ಪುನರ್ ಮನನಕ್ಕೆ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಹಾಗೂ ನಿಯಮಗಳ ಅನುಷ್ಠಾನದಲ್ಲಿ ಭಾಗಿದಾರ ಇಲಾಖೆಗಳ ಪಾತ್ರ ಕುರಿತು ಎರಡು ದಿನಗಳ ಓರಿಯಂಟೇಶನ್ ತರಬೇತಿ ಉದ್ಘಾಟಿಸಿ ಮಾತನಾಡಿದರು.ಕೇಂದ್ರ ಹಾಗೂ ರಾಜ್ಯ ಪ್ರತಿ ಕಾನೂನು ಜಾರಿಗೆ ಮಾಡಿದಾಗಲೂ ಆ ಕಾನೂನಿನ ಅರಿವು ಮೂಡಿಸುವ ಉದ್ದೇಶ ಹೊಂದಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಗೆ ವಸತಿ, ಜೀವನಾಂಶ ಸೇರಿದಂತೆ ಅಗತ್ಯ ನೆರವು ಒದಗಿಸುವುದು ಅಗತ್ಯ. ದೌರ್ಜನ್ಯ ಪ್ರಕರಣಗಳಲ್ಲಿ ಕೂಡಲೇ ಎಫ್‌ಐಆರ್ ದಾಖಲಿಸಬಾರದು.ಪ್ರಕರಣಗಳ ಮಾಹಿತಿ ಕಲೆ ಹಾಕಬೇಕು. ಸಣ್ಣ-ಪುಟ್ಟ ಕಾರಣಗಳಿದ್ದರೆ ಕೌನ್ಸಲಿಂಗ್ ಮೂಲಕ ಮನವೋಲಿಸಿ ರಾಜಿಸಂಧಾನದ ಮಾಡಿಸುವ ಮೂಲಕ ಜೀವನ ನಡೆಸಲು ಸಲಹೆ ನೀಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಎಸ್.ರಾಘವೇಂದ್ರಸ್ವಾಮಿ ಮಾತನಾಡಿ, ಭ್ರೂಣ ಲಿಂಗಪತ್ತೆ ಹಾಗೂ ಭ್ರೂಣ ಹತ್ಯೆ ನಿಷೇಧಿಸಲಾಗಿದೆ. ಮಕ್ಕಳ ಆರೋಗ್ಯದ ಹಿತದೃಷ್ಟಿ ಮಾತ್ರ ಸ್ಕ್ಯಾನಿಂಗ್ ಮಾಡಿಸಬೇಕು. ಪಾಲಕರಲ್ಲಿ ಗಂಡು -ಹೆಣ್ಣು ಎಂಬ ಬೇಧ ಮನೋಭಾವ ಹೋಗಬೇಕು. ಜಿಲ್ಲೆಯ ಲಿಂಗಾನುಪಾತ ಒಂದು ಸಾವಿರ ಪುರುಷರಿಗೆ ೯೫೬ ಮಹಿಳೆಯರಿದ್ದಾರೆ. ಜಿಲ್ಲೆಯಲ್ಲಿ ೭೧ ಸ್ಕ್ಯಾನಿಂಗ್ ಸೆಂಟರ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಭ್ರೂಣ ಲಿಂಗಪತ್ತೆ ಪ್ರಕರಣಗಳು ಕಂಡುಬಂದಿಲ್ಲ. ಎಲ್ಲರೂ ಹೆಣ್ಣು ಮಕ್ಕಳನ್ನು ಉಳಿಸಿಸುವ ಕಾರ್ಯ ಕೈಜೋಡಿಸೋಣ ಎಂದರು.
ಸಾಧಕ ಮಹಿಳೆಯರಿಗೆ ಸನ್ಮಾನ:
ಭ್ರೂಣ ಹತ್ಯೆ ತಡೆದ ಪರಿಮಳಾ ಜೈನ್, ಬಾಲ್ಯ ವಿವಾಹ ತಡೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಇಲಾಖೆಯ ರೇಣುಕಾ, ಗಿರಿಜಾ ಹಾಗೂ ಶಾಂತಮ್ಮ, ಆಶಾ ಕಾರ್ಯಕರ್ತರಾದ ಶಿಲ್ಪಾ ಮುದಿಗೌಡ್ರ, ರತ್ನ ಮಾಳಗಿ, ಉತ್ತಮ ಕಾರ್ಯನಿರ್ವಹಿಸಿದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ರೇಖಾ ನಾಯಕ, ಸ್ಕ್ಯಾನಿಂಗ್ ಸೆಂಟರ್ ಸಹಾಯಕಿ ರತ್ನ, ಅರ್ಪಿತಾ ಉಪ್ಪಾರ ಹಾಗೂ ಸ್ಪಂದನಾ ದತ್ತು ಕೇಂದ್ರದಿಂದ ಹೆಣ್ಣು ಮಗು ದತ್ತು ಪಡೆದ ಮಂಜುನಾಥ ದಂಪತಿ ಹಾಗೂ ದೇವರಾಜ ತಿಪ್ಪಣ್ಣವರ ದಂಪತಿಗಳನ್ನು ಸನ್ಮಾನಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದಾರ್ತಿ ಸ್ವಾಗತಿಸಿದರು. ಸೋಮನಗೌಡ್ರ ಗಾಳಿಗೌಡ್ರ ನಿರೂಪಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ಹೆಗಡೆ ವಂದಿಸಿದರು.