ಸತ್ಯಶೋಧನೆ, ನಿಖರತೆ ಪತ್ರಕರ್ತರಿಗೆ ಅತ್ಯಂತ ಮುಖ್ಯ: ಕೆ.ವಿ.ಪ್ರಭಾಕರ್

KannadaprabhaNewsNetwork |  
Published : Nov 29, 2026, 01:45 AM IST
ಕ್ಯಾಪ್ಷನ28ಕೆಡಿವಿಜಿ32 ದಾವಣಗೆರೆಯಲ್ಲಿಂದು ನಡೆದ ಜಿಲ್ಲಾ ವರದಿಗಾರರ ಕೂಟದ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭವನ್ನು ನಿಕಟಪೂರ್ವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಉದ್ಘಾಟಿಸಿದರು. ............ಕ್ಯಾಪ್ಷನ28ಕೆಡಿವಿಜಿ33 ದಾವಣಗೆರೆಯಲ್ಲಿಂದು ನಡೆದ ಜಿಲ್ಲಾ ವರದಿಗಾರರ ಕೂಟದ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭದಲ್ಲಿ ನೂತನ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿಗೆ ಪೈಲ್, ಕೀ ಹಸ್ತಾಂತರಿಸಿದರು. ಇ.ಎಂ.ಮಂಜುನಾಥ, ಬಿ.ಎನ್.ಮಲ್ಲೇಶ್, ಕೆ.ಏಕಾಂತಪ್ಪ ಇತರರು ಇದ್ದರು. | Kannada Prabha

ಸಾರಾಂಶ

ಡಿಜಿಟಲ್ ಮಾಧ್ಯಮ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಬೆಳವಣಿಗೆಯಿಂದ ಸುಳ್ಳು ಸುದ್ದಿಗಳನ್ನು ಸೃಷ್ಠಿಸಿ ಹರಡುವುದು ಸುಲಭವಾಗಿದೆ. ಗಾಳಿಯಲ್ಲಿ ಗುಂಡು ಹಾರಿಸಿದಂತೆ ಸುಳ್ಳು ಸುದ್ದಿ ಹರಡಿದರೆ ಅದು ಯಾರನ್ನು ತಲುಪುತ್ತದೆ, ಯಾವ ರೀತಿಯ ಹಾನಿ ಉಂಟುಮಾಡುತ್ತದೆ ಎಂಬುದು ಗೊತ್ತಾಗುವುದಿಲ್ಲ. ಹೀಗಾಗಿ ಸತ್ಯಶೋಧನೆ ಮತ್ತು ನಿಖರತೆ ಪತ್ರಕರ್ತರಿಗೆ ಅತ್ಯಂತ ಮುಖ್ಯ ಎಂದು ನಿಕಟಪೂರ್ವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ.

- ವರದಿಗಾರರ ಕೂಟದ ಪದಾಧಿಕಾರಿಗಳ ಸೇವಾ ಸ್ವೀಕಾರ । ಪತ್ರಕರ್ತರ ಕಲ್ಯಾಣ, ಆರೋಗ್ಯ ವಿಮೆ, ನಿವೇಶನ, ಕಟ್ಟಡಕ್ಕೆ ಒತ್ತು- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಡಿಜಿಟಲ್ ಮಾಧ್ಯಮ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಬೆಳವಣಿಗೆಯಿಂದ ಸುಳ್ಳು ಸುದ್ದಿಗಳನ್ನು ಸೃಷ್ಠಿಸಿ ಹರಡುವುದು ಸುಲಭವಾಗಿದೆ. ಗಾಳಿಯಲ್ಲಿ ಗುಂಡು ಹಾರಿಸಿದಂತೆ ಸುಳ್ಳು ಸುದ್ದಿ ಹರಡಿದರೆ ಅದು ಯಾರನ್ನು ತಲುಪುತ್ತದೆ, ಯಾವ ರೀತಿಯ ಹಾನಿ ಉಂಟುಮಾಡುತ್ತದೆ ಎಂಬುದು ಗೊತ್ತಾಗುವುದಿಲ್ಲ. ಹೀಗಾಗಿ ಸತ್ಯಶೋಧನೆ ಮತ್ತು ನಿಖರತೆ ಪತ್ರಕರ್ತರಿಗೆ ಅತ್ಯಂತ ಮುಖ್ಯ ಎಂದು ನಿಕಟಪೂರ್ವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದರು.

ಇಲ್ಲಿನ ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ 2026-2028ನೇ ಸಾಲಿನ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಾಧ್ಯಮಗಳ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ ಎಂಬ ಮಾತುಗಳ ನಡುವೆಯೂ ಜನರಿಗೆ ಮುದ್ರಣ ಮಾಧ್ಯಮದ ಮೇಲೆ ಇಂದಿಗೂ ವಿಶ್ವಾಸವಿದೆ. ರಾಜ್ಯಮಟ್ಟದ ಪತ್ರಿಕೆಗಳ ಜೊತೆಗೆ ಜಿಲ್ಲಾಮಟ್ಟದ ಪತ್ರಿಕೆಗಳ ಬಗ್ಗೆಯೂ ಗಮನ ಹರಿಸಬೇಕಿದೆ. ಜನರು ನಿಖರವಾದ ಸುದ್ದಿಗಾಗಿ ಇಂದಿಗೂ ಪತ್ರಕರ್ತರನ್ನೇ ನೋಡುತ್ತಾರೆ. ನಕಲಿ ಸುದ್ದಿಗಳನ್ನು ನೀಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಮಾಧ್ಯಮಗಳ ವಿಶ್ವಾಸಾರ್ಹತೆಗೆ ಧಕ್ಕೆಯಾಗಲಿದೆ ಎಂದು ಎಚ್ಚರಿಸಿದರು.

ಇಂದಿನ ಪತ್ರಿಕೋದ್ಯಮ ತನ್ನ ಮೂಲ ಆಶಯ ಮತ್ತು ಜವಾಬ್ದಾರಿ ಮರೆಯುತ್ತಿರುವ ಸಂದರ್ಭದಲ್ಲಿ ಪತ್ರಕರ್ತರು ಸುಳ್ಳುಗಳಿಗೆ ಕವಚವಾಗದೆ, ಸತ್ಯದ ಕಿಟಕಿಗಳಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ. ಇಂದಿನ ಪತ್ರಿಕೆಗಳಲ್ಲಿ ಜಾಹೀರಾತುಗಳು, ಬಣ್ಣದ ಪುಟಗಳು ಹಾಗೂ ವಿವಿಧ ಲೇಖನಗಳು ಹೆಚ್ಚಾಗಿದ್ದರೂ ಪತ್ರಿಕೋದ್ಯಮದ ನಿಜವಾದ ಉದ್ದೇಶ ಮರೆಯಾಗುತ್ತಿದೆ. ಜನರ ಸಮಸ್ಯೆಗಳ ಮೇಲೆ ಗಮನ ಹರಿಸುವುದು ಕಡಿಮೆಯಾಗುತ್ತಿದೆ. ಸ್ವಾತಂತ್ರ‍್ಯ ಪೂರ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ತಿಲಕ್ ಸೇರಿದಂತೆ ಹಲವರು ಜನರಲ್ಲಿ ಸ್ಫೂರ್ತಿ ಮತ್ತು ಉತ್ಸಾಹ ತುಂಬಲು ಪತ್ರಿಕೆಗಳನ್ನು ನಡೆಸಿದರು. ಅನಂತರ ಅಭಿವೃದ್ಧಿಪರ ಹಾಗೂ ತನಿಖಾ ಪತ್ರಿಕೋದ್ಯಮ ಬೆಳೆದಿತ್ತು. ಆದರೆ ಈಗ ''''ಸ್ಟೇಟ್‌ಮೆಂಟ್ ಓರಿಯೆಂಟೆಡ್'''' ವರದಿಗಾರಿಕೆ ಹೆಚ್ಚಾಗಿದ್ದು, ರಾಜಕಾರಣಿಗಳು ಮತ್ತು ಅಧಿಕಾರಿಗಳ ಹೇಳಿಕೆಗಳಿಗೆ ಪ್ರತಿಕ್ರಿಯೆ ಪಡೆಯುವುದಕ್ಕೆ ಸೀಮಿತವಾಗುತ್ತಿದೆ ಎಂದು ವಿಷಾದಿಸಿದರು.

ಪತ್ರಕರ್ತರ ಸಂಘಟನೆಗಳು ಪತ್ರಕರ್ತರ ಹಾಗೂ ಪತ್ರಿಕೋದ್ಯಮದ ಹಿತಕ್ಕಾಗಿ ಕೆಲಸ ಮಾಡುತ್ತವೆ. ಅವುಗಳಿಗೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು. ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ವಾರ್ತಾ ಇಲಾಖೆ ಆದೇಶದಿಂದ ಉಂಟಾಗಿದ್ದ ಸಮಸ್ಯೆಯನ್ನು ಕೇವಲ ಹತ್ತು ನಿಮಿಷಗಳಲ್ಲಿ ಬಗೆಹರಿಸಿದ ಘಟನೆ ಸ್ಮರಿಸಿದರು. ದಾವಣಗೆರೆಯಲ್ಲಿ ನಡೆದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಮ್ಮೇಳನದಲ್ಲಿ ಘೋಷಿಸಿದಂತೆ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ ಜಾರಿಗೊಳಿಸಲಾಗಿದೆ. ಪತ್ರಕರ್ತರು ಮತ್ತು ಅವರ ಕುಟುಂಬದ ಆರೋಗ್ಯ ರಕ್ಷಣೆಗಾಗಿ ಮುಖ್ಯಮಂತ್ರಿಗಳ ಆರೋಗ್ಯ ಸಂಜೀವಿನಿ ಯೋಜನೆ ಜಾರಿಯಾಗಿದ್ದು, ಅನಾರೋಗ್ಯದ ಸಂದರ್ಭದಲ್ಲಿ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ದೊರೆಯಲಿದೆ ಎಂದರು.

ಸಮಾರಂಭದಲ್ಲಿ ಕೂಟದ ಗೌರವಾಧ್ಯಕ್ಷ ಬಿ.ಎನ್‌.ಮಲ್ಲೇಶ್‌, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಕೂಟದ ಹಿರಿಯ ಉಪಾಧ್ಯಕ್ಷ ಕೆ.ಚಂದ್ರಣ್ಣ, ವಿಜಯವಾಣಿ ಸ್ಥಾನಿಕ ಸಂಪಾದಕ ಎನ್.ಡಿ. ಶಾಂತಕುಮಾರ್, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ, ಸಂಯುಕ್ತ ಕರ್ನಾಟಕ ಸ್ಥಾನಿಕ ಸಂಪಾದಕ ಮಂಜುನಾಥ್ ಗೌರಕ್ಕಳವರ, ಕೂಟದ ಗೌರವ ಅಧ್ಯಕ್ಷ ಕೆ.ಏಕಾಂತಪ್ಪ, ಮಾಜಿ ಅಧ್ಯಕ್ಷ ಬಸವರಾಜ ದೊಡ್ಡಮನಿ, ಕಾನಿಪ ಜಿಲ್ಲಾಧ್ಯಕ್ಷ ಮಂಜುನಾಥ್ ಏಕಬೋಟೆ, ಕೂಟದ ಪ್ರಧಾನ ಕಾರ್ಯದರ್ಶಿ ಮಧು ನಾಗರಾಜ್, ಖಜಾಂಚಿ ಮಹೇಶ್ ಕಾಶೀಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಮಧ್ಯ ಕರ್ನಾಟಕ ಹಾಗೂ ಪಿಪಿಎಲ್-5 ಕ್ರಿಕೆಟ್ ಟೂರ್ನಿಯ ಪ್ರೋಮೋ, ಲೋಗೋ ಅನಾವರಣಗೊಳಿಸಲಾಯಿತು. ಹಿರಿಯ ಪತ್ರಕರ್ತರಿಗೆ ಜೀವಮಾನ ಸೇವಾ ಸಾಧನೆಗಾಗಿ ಗೌರವ ಸನ್ಮಾನ ಹಾಗೂ ಜಿಲ್ಲಾಡಳಿತದ ರಾಜ್ಯೋತ್ಸವ ಪುರಸ್ಕೃತರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಜೀವಮಾನ ಸೇವಾ ಸಾಧನೆಗಾಗಿ ಸನ್ಮಾನ:

ಕೂಟದ ಹಿರಿಯ ಉಪಾಧ್ಯಕ್ಷ ಕೆ.ಚಂದ್ರಣ್ಣ, ಗೌರವ ಅಧ್ಯಕ್ಷ ಕೆ.ಏಕಾಂತಪ್ಪ, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ, ಸಂಯುಕ್ತ ಕರ್ನಾಟಕ ಸ್ಥಾನಿಕ ಸಂಪಾದಕ ಮಂಜುನಾಥ್ ಗೌರಕ್ಕಳವರ, ಕೂಟದ ಮಾಜಿ ಅಧ್ಯಕ್ಷ ಬಸವರಾಜ ದೊಡ್ಡಮನಿ ಹಾಗೂ ಸುವರ್ಣ ಟಿವಿ ಮಾಜಿ ಹಿರಿಯ ವರದಿಗಾರ ಡಾ.ವರದರಾಜ್ ಅವರಿಗೆ ಜೀವಮಾನ ಸೇವಾ ಸಾಧನೆಗಾಗಿ ಗೌರವ ಸನ್ಮಾನ ಮಾಡಲಾಯಿತು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ: ಜಿಲ್ಲಾಡಳಿತದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎ.ಎನ್.ನಿಂಗಪ್ಪ, ಪುನೀತ್ ಆಪ್ತಿ, ಕೆ.ಎನ್.ಮಲ್ಲಿಮೂರ್ತಿ, ಹನುಮಂತ ರಾವ್, ಶೇಖರಗೌಡ ಪಾಟೀಲ್ ಹಾಗೂ ಬಾ.ರಾ.ಮಹೇಶ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

- - -

(ಬಾಕ್ಸ್‌)

* ಪತ್ರಕರ್ತರಿಗೆ ನಿವೇಶನ ನೀಡಲು ಪ್ರಯತ್ನ: ಸುರೇಶ್

ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ನೂತನ ಸದಸ್ಯ ಕೆ.ಎಂ.ಸುರೇಶ್ ಮಾತನಾಡಿ, ವರದಿಗಾರರ ಕೂಟಕ್ಕೆ ನಿವೇಶನ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಇತ್ತೀಚೆಗೆ ನಿವೇಶನ ನೀಡುವ ಭರವಸೆ ನೀಡಿದ್ದಾರೆ ಎಂದರು. ಹಿಂದೆ ಬಿಜೆಪಿ ಸರ್ಕಾರವಿದ್ದಾಗ, ತಾವು ದೂಡಾ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮಂಜಣ್ಣ ಮತ್ತು ಏಕಾಂತಪ್ಪ ಅವರ ಮನವಿ ಮೇರೆಗೆ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಒಂದು ರೂಪಾಯಿ ದರದಲ್ಲಿ 70*90 ಅಳತೆಯ ನಿವೇಶನ ನೀಡಲಾಗಿತ್ತು. ಆದರೆ ನಂತರ ಅದು ಕಾರ್ಯರೂಪಕ್ಕೆ ಬಂದಿಲ್ಲ. 2008ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಶವಂತ ರಾವ್ ಜಾಧವ್ ಅಧ್ಯಕ್ಷರಾಗಿದ್ದಾಗ, ರವೀಂದ್ರನಾಥ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭ ನಿವೇಶನವಿಲ್ಲದ 30 ಹಿರಿಯ ಪತ್ರಕರ್ತರಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೂಲಕ ರಿಯಾಯಿತಿ ದರದಲ್ಲಿ 30 ನಿವೇಶನಗಳನ್ನು ಕೊಡಿಸಲಾದ ವಿಚಾರವನ್ನು ಸ್ಮರಿಸಿದರು.ವಿದೇಶಗಳಲ್ಲಿ ಘಟನೆ ನಡೆದಾಗ ಸಣ್ಣ ಪ್ರಮಾಣದಲ್ಲಿ ಸುದ್ದಿ ಪ್ರಕಟಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾದಾಗ ದೊಡ್ಡ ಪ್ರಮಾಣದಲ್ಲಿ ಪ್ರಕಟಿಸಲಾಗುತ್ತದೆ. ಆದರೆ, ನಮ್ಮಲ್ಲಿ ಘಟನೆಗಳನ್ನು ದೊಡ್ಡದಾಗಿ ತೋರಿಸಿ, ಶಿಕ್ಷೆಯಾದಾಗ ಸಣ್ಣ ಮೂಲೆಯಲ್ಲಿ ಪ್ರಕಟಿಸಲಾಗುತ್ತದೆ. ಹೀಗಾಗಿ ಪತ್ರಕರ್ತರು ಸಕಾರಾತ್ಮಕ ಪತ್ರಿಕೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಮನವಿ ಮಾಡಿದರು.

- - -

(ಟಾಪ್‌ ಕೋಟ್‌)

ಜಿಲ್ಲಾ ಪತ್ರಿಕೆಗಳಿಂದ ಬಂದಿರುವ ತಮಗೆ ಗ್ರಾಮೀಣ ಹಾಗೂ ಜಿಲ್ಲಾ ಪತ್ರಕರ್ತರ ಕಷ್ಟ-ಸುಖಗಳ ಆಳವಾದ ಅರಿವಿದೆ. ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ನಡೆಸುತ್ತಿರುವ ಚಟುವಟಿಕೆಗಳು ರಾಜ್ಯಕ್ಕೆ ಮಾದರಿಯಾಗಿವೆ.

- ಕೆ.ವಿ.ಪ್ರಭಾಕರ್‌, ನಿಕಟಪೂರ್ವ ಸಿಎಂ ಮಾಧ್ಯಮ ಸಲಹೆಗಾರ.

- - -

-28ಕೆಡಿವಿಜಿ32: ದಾವಣಗೆರೆಯಲ್ಲಿ ಶನಿವಾರ ನಡೆದ ಜಿಲ್ಲಾ ವರದಿಗಾರರ ಕೂಟದ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭವನ್ನು ನಿಕಟಪೂರ್ವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಉದ್ಘಾಟಿಸಿದರು. -28ಕೆಡಿವಿಜಿ33: ದಾವಣಗೆರೆಯಲ್ಲಿ ಶನಿವಾರ ನಡೆದ ಜಿಲ್ಲಾ ವರದಿಗಾರರ ಕೂಟದ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭದಲ್ಲಿ ನೂತನ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿಗೆ ಫೈಲ್, ಕೀ ಹಸ್ತಾಂತರಿಸಿದರು. ಇ.ಎಂ.ಮಂಜುನಾಥ, ಬಿ.ಎನ್.ಮಲ್ಲೇಶ್, ಕೆ.ಏಕಾಂತಪ್ಪ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಡಿಸೆಂಬರ್‌ 10ರಂದು ಸುವರ್ಣಸೌಧದ ಎದುರು ಉಪವಾಸ
ಜನಪ್ರತಿನಿಧಿಗಳ ಸ್ನೇಹಸಂಗಮಕ್ಕೆ ಸಾಕ್ಷಿಯಾದ ಹಾವೇರಿ