ಬಂತು ಮಳೆ, ಕಪ್ಪತ್ತಗುಡ್ಡಕ್ಕೆ ತಂದಿತು ಕಳೆ!

KannadaprabhaNewsNetwork |  
Published : May 30, 2026, 02:30 AM IST
ಪೋಟೊ ಕ್ಯಾಪ್ಸನ್: ಮಂಜುನಾಥ ಆರ್ ಮೇಗಲಮನಿ  ಮುಂಡರಗಿ ತಾಲೂಕ ಕಪ್ಪತ್ತಗುಡ್ಡ ಅರಣ್ಯ ವಲಯ ಅಧಿಕಾರಿ.ಪೋಟೊ ಕ್ಯಾಪ್ಸನ್: ಕಪ್ಪತ್ತಗುಡ್ಡ ದಿವ್ಯ ಔಷಧ ಸಸ್ಯಗಳ ಆಗರವಾಗಿರುವ ಕಪ್ಪತ್ತಗುಡ್ಡದಲ್ಲಿ ಸದ್ಯ ನಾನಾ ಬಗೆಯ ಸುವಾಸನೆ ಹೂಗಳು ಪರಿಸರ ಪ್ರಿಯರನ್ನು ಕೈಬಿಸಿ ಕರೆಯುತ್ತಿವೆ.ಪೋಟೊ ಕ್ಯಾಪ್ಸನ್: ಕಪ್ಪತ್ತಗುಡ್ಡದಲ್ಲಿ ಮುಂಜಾನೆ    ಆಕಾಶವನ್ನು ಮುಟ್ಟಿರುವ ಬೆಳ್ಳನೆ ತೇಲುವ ಬೆಳ್ಳಿಯಂತ ಮೋಡಗಳ ರಮಣೀಯ ದೃಶ್ಯ. | Kannada Prabha

ಸಾರಾಂಶ

ಗದಗ, ಶಿರಹಟ್ಟಿ, ಮುಂಡರಗಿ ತಾಲೂಕಿನಲ್ಲಿ ಹರಡಿರುವ 33 ಸಾವಿರ ಹೆಕ್ಟೇರ್ ಪ್ರದೇಶ ಹೊಂದಿರುವ ಕಪ್ಪತ್ತಗಿರಿ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಡಂಬಳ: ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಕರ್ನಾಟಕದ ಸಹ್ಯಾದ್ರಿ, ನಿಸರ್ಗ ರಮಣೀಯ ತಾಣ, ದಿವ್ಯ ಔಷಧ ಸಸ್ಯಗಳ ಆಗರವಾಗಿರುವ ಕಪ್ಪತ್ತಗುಡ್ಡಕ್ಕೆ ಕಳೆ ಬಂದಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಗದಗ, ಶಿರಹಟ್ಟಿ, ಮುಂಡರಗಿ ತಾಲೂಕಿನಲ್ಲಿ ಹರಡಿರುವ 33 ಸಾವಿರ ಹೆಕ್ಟೇರ್ ಪ್ರದೇಶ ಹೊಂದಿರುವ ಕಪ್ಪತ್ತಗಿರಿ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ. ಇತ್ತೀಚೆಗೆ ಸುರಿಯುತ್ತಿರುವ ಮಳೆಗೆ ಕಪ್ಪತ್ತಗಿರಿಯಲ್ಲಿ ಹಸಿರು ಇಮ್ಮಡಿಯಾಗಿ ನೂರಾರು ಬಗೆಯ ಹೂವುಗಳು ಅರಳಿ ಸುವಾಸನೆ ಬೀರುತ್ತಿವೆ. ದುಂಬಿಗಳ ಝೇಂಕಾರ, ಪಕ್ಷಿಗಳ, ಪ್ರಾಣಿಗಳ ಕಲರವ, ಮುಂಜಾನೆ ಕಪ್ಪತ್ತಗುಡ್ಡದ ಪರಿಸರದ ಒಡಲಿನಲ್ಲಿ ಮುತ್ತಿಕ್ಕುವ ಬೆಳ್ಳಿ ಮೋಡಗಳು ಗುಡ್ಡಕ್ಕೆ ಹಿರಿಮೆಯ ಗರಿ ಮೂಡಿಸಿವೆ.

ಕಲರವ: ಕಾಡು ಮಲ್ಲಿಗೆಯ ಘಮ, ಹೊನ್ನವರೆ, ಡಬ್ಬುಗಳ್ಳಿ, ಕಾಡು ಕನಕಾಂಬರ ಹೂವು, ತಾವರೆ ಹೂವು, ಸಂಪಿಗೆ, ಕಾಡು ಸೂರ್ಯಕಾಂತಿ, ನೀಲಿ ಕುರುಂಜಿ, ಕಾಡು ಗುಲಾಬಿ, ತಂಗಡಿ ಹೂವು, ಬಿಳಿ ಲಿಲಿ ಜಾತಿಯ ಹೂವುಗಳು, ಕೆಂಪು ಬಲ್ಸಂ ಹೂವು ಹೀಗೆ ನೂರಾರು ಬಗೆಯ ಪುಷ್ಪಗಳು ಸುಗಂಧ ಸೂಸುತ್ತಿವೆ. ಹೀಗಾಗಿ ಪತಂಗಗಳು ಹಾಗೂ ಜೇನುನೊಣಗಳು ಮಕರಂದ ಸವಿಯಲು ಮುಗಿಬೀಳುತ್ತಿರುವ ದೃಶ್ಯ ಮನಮೋಹಕವಾಗಿ ಕಂಡುಬರುತ್ತಿದೆ.

ವನಸ್ಪತಿಗಳು: ಬಸವನಪಾದ, ರುದ್ರಾಕ್ಷಿ ಸಪ್ತವರ್ಣ, ಅನಂತ ಮೂಲ, ಅಜವಾನ, ಅತ್ತಿ ಅಡಸೋಗಿ, ನಕರಿಸೊಪ್ಪು, ಅಮಟೆ, ಚಿತ್ರಮೂಲ, ಸಂಜೀವಿನಿ, ಕಾಡು ತುಳಸಿ, ಅಮೃತಬಳ್ಳಿ, ಅರಳಿ, ಆಲ, ಕಾಡು ಬಾದಾಮಿ, ಅಂಕೇರಿ, ರಕ್ತಚಂದನ, ಕಕ್ಕಿ ಕವಳೆ, ಕಣಗಲ, ಹನುಮ ಹಸ್ತ, ಕಾಡಿಗ್ಗರಗ, ಉತ್ತರಾಣಿ, ಕಾಡನಿಂಬೆ, ಗಜಗಕಾಸರಕ್, ಕೇಶ ಕೆಜೋರಾ, ಕರ್ಪೂರ, ಲೋಬಾನ, ಕರಿಲೆಕ್ಕ, ಬಿಳಿಯಕ್ಕ, ಗುಲಗಂಜಿ, ಚೊಗಚಿ, ಗೊರಂಟೆ, ತೇಗ, ತಪಸಿ, ಪಾರಿಜಾತ, ಪುಷ್ಕರ ಮೂಲ, ಬಕುಲಾಬಾಲಿ, ಮೂಚ ಪತ್ತಿ, ಶಂಕಪುಷ್ಪ ಹೊಗ್ಗೂಳ, ಹಿರೇಮದ್ದು, ಹಿಪ್ಪಲ, ಸೊನಕ್ಕೆ, ಶಿಖಕಲ್ಲಿ, ಸಬ್ಬಸಗಿ ಹೀಗೆ ತರಹೇವಾರಿ ಗಿಡಮರಗಳನ್ನು ಹಸಿರು ಮನಸೋಲದೇ ಇರಲಾರರು.

ಬೆಂಕಿಯಲ್ಲಿ ಅರಳಿದ ಹೂವುಗಳು: ಬೇಸಿಗೆ ಕಾಲದಲ್ಲಿ ಕೆಲ ಕಿಡಿಗೇಡಿಗಳಿಂದ ಮತ್ತು ಮೂಢನಂಬಿಕೆಗೆ ಹೊತ್ತಿಸಿದ ಬೆಂಕಿ ಕೆನ್ನಾಲಿಗೆಗೆ ಕೆಲ ಕಡೆ ಸುಟ್ಟು ಕರಕಲಾಗುವ ಗಿಡ, ಮರ, ಹೂವು, ಬಳ್ಳಿಕಾಯಿಗಳು, ಸಮೃದ್ಧ ಮಳೆ ಸುರಿದಾಗ ವಿಸ್ಮಯ ರೂಪದಲ್ಲಿ ಗಿಡಗಳು ಚಿಗುರೊಡೆದು ಹೂವು, ಕಾಯಿಗಳು ಬಿಟ್ಟು ರಮಣೀಯವಾಗಿ ಕಂಗೊಳಿಸುತ್ತಿವೆ.

ಮುಂಡರಗಿ ಆರ್‌ಎಫ್‌ಒ ಮಂಜುನಾಥ ಮೇಗಲಮನಿ ಮತ್ತು ಗದಗ ಜಿಲ್ಲೆಯ ಹಿರಿಯ ಅಧಿಕಾರಿಗಳ, ಸಿಸಿ ಕ್ಯಾಮೆರಾಗಳ, ದ್ರೋನ್‌ ಕ್ಯಾಮೆರಾಗಳ ಕಣ್ಗಾವಲು, ಸಿಬ್ಬಂದಿಯ ವಿಶೇಷ ಕಾಳಜಿಯಿಂದ ಸಸ್ಯವರ್ಗ ಹುಲುಸಾಗಿ ಬೆಳೆದಿವೆ.

ಸುರಕ್ಷತೆಗೆ ಒತ್ತು: ಮಳೆಗೆ ಕಪ್ಪತ್ತಗುಡ್ಡ ಹಚ್ಚುಹಸಿರಿನಿಂದ ಕೂಡಿ ನೂರಾರು ಔಷಧೀಯ ಸಸ್ಯಗಳ ಹೂವು ಬಿಟ್ಟಿದ್ದು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಸಾಧ್ಯತೆ ಇದ್ದು, ಹಿರಿಯ ಅಧಿಕಾರಿಗಳ ಸಲಹೆಯಂತೆ ಸುರಕ್ಷತೆಗೆ ಪ್ಲಾಸ್ಟಿಕ್ ಮುಕ್ತವಾದ ಚಾರಣಕ್ಕೆ ಒತ್ತು ನೀಡಲಾಗಿದೆ. ಪರಿಸರಕ್ಕೆ ಹಾನಿ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮುಂಜರಗಿ ಆರ್‌ಎಫ್‌ಒ ಮಂಜುನಾಥ ಮೇಗಲಮನಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುರಸಭೆ ನಿರ್ಲಕ್ಷ್ಯ ಧೋರಣೆ ಆರೋಪ: ಮಾಜಿ ಸದಸ್ಯ ಪ್ರತಿಭಟನೆ
ಕೊಡಗು ಜಿಲ್ಲೆಗೆ ಸಚಿವ ಸ್ಥಾನ ನಿರೀಕ್ಷೆ!