ಹುಬ್ಬಳ್ಳಿ: ನಗರದಲ್ಲಿ ಶನಿವಾರ ಬೆಳಗ್ಗೆಯಿಂದ ಸುರಿದ ಮಳೆಯಿಂದ ನಗರದಲ್ಲಿ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ.ಬೆಳಗ್ಗೆಯೇ ದಟ್ಟವಾದ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಬೆಳಗ್ಗೆ 10 ಗಂಟೆಯಾದರೂ ಕತ್ತಲು ಕವಿದಂತೆ ಬಾಸವಾಗಿತ್ತು. ನಂತರ ಜೋರಾದ ಗಾಳಿಯೊಂದಿಗೆ ಮಳೆ ಸುರಿಯಿತು. ಏಪ್ರಿಲ್ ತಿಂಗಳಲ್ಲಿಯೇ ಎರಡ್ಮೂರು ಬಾರಿ ವರುಣನ ಸಿಂಚನವಾಗಿತ್ತು. ಆದರೆ, ಶನಿವಾರ ಸುರಿದಂತೆ ಧಾರಾಕಾರ ಮಳೆಯಾಗಿರಲಿಲ್ಲ. ಕೆಲಕಾಲ ಧಾರಾಕಾರ ಮಳೆ ಸುರಿದು ನಂತರ ಆಗಾಗ ತುಂತುರು ಮಳೆ ಸುರಿಯುತ್ತಿತ್ತು.
ರಸ್ತೆಗಳ ಮೇಲೆ ನೀರು:
ಒಮ್ಮಿಂದೊಮ್ಮಲೆ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ನಗರದ ಹಲವು ಕಡೆಗಳಲ್ಲಿ ಚರಂಡಿ ಬಂದಾಗಿ ನೀರೆಲ್ಲ ರಸ್ತೆಯ ಮೇಲೆ ಹರಿಯುವಂತಾಯಿತು. ಇದರಿಂದಾಗಿ ವಾಹನ ಸವಾರರು, ಪಾದಾಚಾರಿಗಳು ಈ ಮಳೆಯ ನೀರಿನಲ್ಲೇ ಸಂಚರಿಸಿದರು. ಇಲ್ಲಿನ ಹಳೇ ಹುಬ್ಬಳ್ಳಿಯ ಕೆಲವೆಡೆ, ಗೋಕುಲ ರಸ್ತೆ, ದುರ್ಗದಬೈಲ್ ಮಾರುಕಟ್ಟೆ, ಬಟರ್ ಮಾರ್ಕೆಟ್, ತುಳಜಾ ಭವಾನಿ ವೃತ್ತ ಸೇರಿದಂತೆ ವಿವಿಧೆಡೆ ಚರಂಡಿ ಬಂದ್ ಆಗಿ ನೀರೆಲ್ಲ ರಸ್ತೆಯ ಮೇಲೆ ಹರಿದು ಸ್ಥಳೀಯರು ಪರದಾಡುವಂತಾಯಿತು. ಸ್ಥಳೀಯರೇ ಚರಂಡಿಯಲ್ಲಿ ಸಂಗ್ರಹವಾಗಿದ್ದ ಕಸ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿದರು. ಧಾರವಾಡದಲ್ಲೂ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಆದರೆ, ಜೋರಾದ ಗಾಳಿ ಬೀಸಿದ್ದರಿಂದ ಮಳೆ ಬರಲಿಲ್ಲ.
ನವಲಗುಂದ ಪಟ್ಟಣ ಸೇರಿದಂತೆ ಹಲವೆಡೆ ಶುಕ್ರವಾರ ರಾತ್ರಿ ಹಾಗೂ ಶನಿವಾರ ಸುರಿದ ಮಳೆಯು ಸಾಕಷ್ಟು ಅವಾಂತರ ಸೃಷ್ಟಿಸಿದೆ. ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಹೊಲದ ಒಡ್ಡುಗಳು ಒಡೆದು ನೀರೆಲ್ಲ ಹೊಲಕ್ಕೆ ನುಗ್ಗಿ ಹಾನಿ ಮಾಡಿದೆ. ಇನ್ನೊಂದೆಡೆ ಪಟ್ಟಣದ ಹಲವೆಡೆ ಬಿರುಗಾಳಿಗೆ ಹಲವು ಮರಗಳು ಧರೆಗುರುಳಿದರೆ, ಇನ್ನು ಕೆಲವು ಗಿಡಗಳು ಮನೆಯ ಚಾವಣಿ, ವಿದ್ಯುತ್ ಕಂಬಗಳ ಮೇಲೆ ಬಿದ್ದು ತೀವ್ರ ಹಾನಿಯನ್ನುಂಟು ಮಾಡಿವೆ. ಇದರಿಂದಾಗಿ ಶುಕ್ರವಾರ ರಾತ್ರಿ ವಿದ್ಯುತ್ ಕಡಿತಗೊಂಡು ಜನರು ಪರದಾಡುವಂತಾಯಿತು. ಪಟ್ಟಣದ ಗಾಂಧಿ ಮಾರುಕಟ್ಟೆ ಹತ್ತಿರವಿರುವ ಸುರೇಶ ತೋಟಗೇರ ಮನೆಯ ಮೇಲೆ ತೆಂಗಿನ ಮರ ಉರುಳಿ ಹೆಂಚುಗಳು ಒಡೆದು ಹಾನಿಯಾಗಿದ್ದು, ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಮುತ್ತಣ್ಣ ಚಿಕ್ಕನರಗುಂದ ಭೇಟಿನೀಡಿ ಪರಿಶೀಲಿಸಿದರು.