ಬಿಸಿಲಿನಿಂದ ಬಸವಳಿದ ಜನರಿಗೆ ತಂಪೆರೆದ ಮಳೆ

KannadaprabhaNewsNetwork |  
Published : Apr 19, 2024, 01:01 AM IST
ಫೋಟೊ ಶೀರ್ಷಿಕೆ: 18ಎಚ್‌ವಿಆರ್5 ಹಾವೇರಿ ನಗರದ ಹೊರವಲಯದಲ್ಲಿ ಸ್ಥಾಪಿಸಿದ್ದ ಚೆಕ್‌ಪೋಸ್ಟ್ ಗಾಳಿ, ಮಳೆಗೆ ಕಿತ್ತುಕೊಂಡು ಹೋಗಿದೆ. ಫೋಟೊ ಶೀರ್ಷಿಕೆ: 18ಎಚ್‌ವಿಆರ್5ಎ ಹಾವೇರಿ ತಾಲೂಕಿನ ದಿಡಗೂರ ಗ್ರಾಮದಲ್ಲಿ ಸಿಡುಲು ಬಡಿದು ನಾಲ್ಕು ಕುರಿ ಮೃತಪಟ್ಟಿವೆ.  | Kannada Prabha

ಸಾರಾಂಶ

ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೂ ಬಿಸಲಿನ ವಾತಾವರಣದಿಂದ ಕೂಡಿತ್ತು. ಸಂಜೆ 4ಕ್ಕೆ ಏಕಾಏಕಿ ಮೋಡ ಕವಿದು ಗುಡುಗು ಸಹಿತ ಅರ್ಧಗಂಟೆಗೂ ಹೆಚ್ಚುಕಾಲ ಉತ್ತಮ ಮಳೆ ಸುರಿಯಿತು.

ಕನ್ನಡಪ್ರಭ ವಾರ್ತೆ ಹಾವೇರಿ

ಬಿರು ಬಿಸಿಲಿನ ಧಗೆಯಿಂದ ಬಸವಳಿದಿದ್ದ ನಗರದ ಜನರಿಗೆ ಗುರುವಾರ ಸುರಿದ ವರ್ಷದ ಮೊದಲ ಮಳೆ ಜನರ ಮೊಗದಲ್ಲಿ ಹರ್ಷ ಮೂಡಿಸಿದೆ. ಕೆಲವೆಡೆ ಮೊದಲ ಮಳೆ ಅವಾಂತರ ಸೃಷ್ಟಿಸಿದ್ದು, ತಾಲೂಕಿನ ದಿಡಗೂರ ಗ್ರಾಮದಲ್ಲಿ ಸಿಡಿಲು ಬಡಿದು ನಾಲ್ಕು ಕುರಿ ಮೃತಪಟ್ಟಿವೆ.

ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೂ ಬಿಸಲಿನ ವಾತಾವರಣದಿಂದ ಕೂಡಿತ್ತು. ಸಂಜೆ 4ಕ್ಕೆ ಏಕಾಏಕಿ ಮೋಡ ಕವಿದು ಗುಡುಗು ಸಹಿತ ಅರ್ಧಗಂಟೆಗೂ ಹೆಚ್ಚುಕಾಲ ಉತ್ತಮ ಮಳೆ ಸುರಿಯಿತು. ಮೊದಲ ಮಳೆಯ ಸಿಂಚನದಿಂದಾಗಿ ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ನಗರದ ಜನರು ನಿಟ್ಟುಸಿರು ಬಿಟ್ಟಿದ್ದು, ವಾತಾವರಣ ತಂಪಾಯಿತು. ಮಳೆ ಸುರಿದಿದ್ದರಿಂದ ನಗರದಲ್ಲಿ ಕೆಲವು ಪ್ರದೇಶಲ್ಲಿ ರಸ್ತೆ ಮೇಲೆ ಚರಂಡಿ ನೀರು ಹಾಯ್ದು ಸಂಚಾರಕ್ಕೆ ತೊಂದರೆ ಎದುರಿಸುವಂತಾಯಿತು. ಕೆಲಕಾಲ ವಿದ್ಯುತ್ ಕಡಿತಗೊಂಡಿತ್ತು.

ಜಿಲ್ಲೆಯ ಹಾನಗಲ್ಲ ಪಟ್ಟಣ, ಶಿಗ್ಗಾಂವಿ, ರಾಣಿಬೆನ್ನೂರು, ಬ್ಯಾಡಗಿ, ಸವಣೂರು ತಾಲೂಕಿನ ಕೆಲವು ಭಾಗದಲ್ಲಿ ಸಾಧಾರಣ ಮಳೆ ಆಗಿದೆ. ಹಾವೇರಿ ತಾಲೂಕಿನ ಕೆಲ ಭಾಗದಲ್ಲಿ ಮಳೆಯಾಗಿದ್ದರೆ, ಕೆಲ ಭಾಗದಲ್ಲಿ ಮಳೆಯಾಗಿಲ್ಲ. ಬ್ಯಾಡಗಿ ಪಟ್ಟಣದಲ್ಲಿ ಉತ್ತಮ ಮಳೆಯಾಗಿದೆ. ಹಾನಗಲ್ಲ ತಾಲೂಕಿನ ಸಂಜೆ ಸುರಿದ ಗಾಳಿ, ಮಳೆಯಿಂದಾಗಿ ಮಾವಿನ ತೋಪುಗಳಲ್ಲಿ ಮಾವಿನ ಕಾಯಿಗಳು ಉದುರಿದ್ದು, ರೈತರು ನಷ್ಟ ಅನುಭವಿಸುವಂತಾಯಿತು. ಶಿಗ್ಗಾಂವಿ ತಾಲೂಕಿನಲ್ಲಿ ಗಾಳಿ, ಮಳೆಗೆ ಎರಡು ಮನೆಗಳಿಗೆ ಹಾನಿ ಸಂಭವಿಸಿದ್ದು, ಒಂದು ತೆಂಗಿನ ಮರ ಉರುಳಿ ಬಿದ್ದಿದೆ. ವಿಪರಿತ ಗಾಳಿಯಿಂದಾಗಿ ಅಲ್ಲಲ್ಲಿ ಬತ್ತದ ಬಣವೆಗಳು ನೆಲಕ್ಕೆ ಉರುಳಿ ಬಿದ್ದಿರುವ ಘಟನೆಗಳು ನಡೆದಿವೆ.

ಗಾಳಿಗೆ ಕಿತ್ತುಹೊದ ಚೆಕ್‌ಪೋಸ್ಟ್

ನಗರದಲ್ಲಿ ಗುರುವಾರ ಸಂಜೆ ಭಾರಿ ಗಾಳಿ, ಮಳೆ ಹಿನ್ನೆಲೆಯಲ್ಲಿ ನಗರದ ಹೊರವಲಯದ ಅಜ್ಜಯ್ಯನ ಗುಡಿ ಬಳಿ ಸ್ಥಾಪಿಸಿದ್ದ ಚೆಕ್‌ಪೋಸ್ಟ್ ಕಿತ್ತುಕೊಂಡು ಹೋಗಿದೆ. ಚೆಕ್‌ಪೋಸ್ಟ್‌ಗೆ ಅಳವಡಿಸಿದ್ದ ಪೆಂಡಾಲ್, ತಗಡು, ಖುರ್ಚಿ, ಟೇಬಲ್‌ಗಳಿ ಚೆಲ್ಲಾಪಿಲ್ಲಿಯಾಗಿವೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ