ಭಾರತೀಯ ಪರಂಪರೆಯ ಮಹಾಕಾವ್ಯ ರಾಮಾಯಣ

KannadaprabhaNewsNetwork |  
Published : Oct 27, 2026, 01:30 AM IST
ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ, ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಯುವಜನರು ಮಹರ್ಷಿ ವಾಲ್ಮೀಕಿ ಅವರ ಜೀವನದಿಂದ ಸ್ಫೂರ್ತಿ ಪಡೆದು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಜ್ಞಾನವೇ ಮನುಷ್ಯನ ನಿಜವಾದ ಶಕ್ತಿ. ಶಿಕ್ಷಣದಿಂದ ವ್ಯಕ್ತಿಯ ಜೀವನ ಮಾತ್ರವಲ್ಲ, ಇಡೀ ಸಮಾಜದ ಅಭಿವೃದ್ಧಿಯೂ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ತಿಳಿಸಿದರು

ದೊಡ್ಡಬಳ್ಳಾಪುರ: ಯುವಜನರು ಮಹರ್ಷಿ ವಾಲ್ಮೀಕಿ ಅವರ ಜೀವನದಿಂದ ಸ್ಫೂರ್ತಿ ಪಡೆದು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಜ್ಞಾನವೇ ಮನುಷ್ಯನ ನಿಜವಾದ ಶಕ್ತಿ. ಶಿಕ್ಷಣದಿಂದ ವ್ಯಕ್ತಿಯ ಜೀವನ ಮಾತ್ರವಲ್ಲ, ಇಡೀ ಸಮಾಜದ ಅಭಿವೃದ್ಧಿಯೂ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ತಿಳಿಸಿದರು.

ಬೆಂ.ಗ್ರಾ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಅವರನ್ನು ಆದಿಕವಿ ಎಂದು ಕರೆಯಲಾಗುತ್ತದೆ. ಅವರು ರಚಿಸಿದ ರಾಮಾಯಣ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಅಮೂಲ್ಯ ಮಹಾಕಾವ್ಯವಾಗಿದೆ. ರಾಮಾಯಣವು ಶ್ರೀರಾಮನ ಜೀವನ, ಸೀತಾಮಾತೆಯ ತ್ಯಾಗ, ಲಕ್ಷ್ಮಣನ ಸೇವಾಭಾವ ಮತ್ತು ಹನುಮಂತನ ಭಕ್ತಿಯನ್ನು ತಿಳಿಸುವುದರ ಜೊತೆಗೆ ಸತ್ಯ, ಧರ್ಮ, ಕರ್ತವ್ಯ ಮತ್ತು ನ್ಯಾಯದ ಮಹತ್ವವನ್ನು ಸಾರುತ್ತದೆ ಎಂದು ಹೇಳಿದರು.

ವಾಲ್ಮೀಕಿ ಅವರ ಜೀವನ ನಮಗೆ ಒಂದು ಮಹತ್ವದ ಸಂದೇಶವನ್ನು ನೀಡುತ್ತದೆ. ಮನುಷ್ಯನು ತನ್ನ ಹಿಂದಿನ ಜೀವನದಲ್ಲಿ ಏನೇ ಆಗಿರಲಿ, ತನ್ನ ಪ್ರಯತ್ನ, ಜ್ಞಾನ ಮತ್ತು ಸತ್ಕಾರ್ಯಗಳ ಮೂಲಕ ಮಹಾನ್ ವ್ಯಕ್ತಿಯಾಗಬಹುದು. ಜೀವನದಲ್ಲಿ ಬದಲಾವಣೆ ಸಾಧ್ಯ ಎಂಬುದಕ್ಕೆ ಮಹರ್ಷಿ ವಾಲ್ಮೀಕಿ ಅವರ ಕಥೆ ಪ್ರೇರಣೆಯಾಗಿದೆ ಎಂದರು.

ಮಹರ್ಷಿ ವಾಲ್ಮೀಕಿ ಅವರು ಕೇವಲ ಒಬ್ಬ ಕವಿಯಲ್ಲ, ಅವರು ಜ್ಞಾನ, ಮಾನವೀಯತೆ, ಸಮಾನತೆ ಮತ್ತು ಸತ್ಯದ ಪ್ರತೀಕವಾಗಿದ್ದಾರೆ. ಅವರು ತಮ್ಮ ಜ್ಞಾನ ಮತ್ತು ಸಾಹಿತ್ಯದ ಮೂಲಕ ಸಮಾಜಕ್ಕೆ ಉತ್ತಮ ಮಾರ್ಗವನ್ನು ತೋರಿಸಿದರು. ಮನುಷ್ಯನ ಶ್ರೇಷ್ಠತೆ ಅವನ ಜನ್ಮದಿಂದ ನಿರ್ಧಾರವಾಗುವುದಿಲ್ಲ; ಅವನ ಗುಣ, ನಡತೆ, ಜ್ಞಾನ ಮತ್ತು ಕಾರ್ಯಗಳಿಂದ ನಿರ್ಧಾರವಾಗುತ್ತದೆ ಎಂಬ ಸಂದೇಶವನ್ನು ಅವರ ಜೀವನದಿಂದ ನಾವು ಪಡೆಯಬಹುದು ಎಂದು ತಿಳಿಸಿದರು.

ಇಂದಿನ ಸಮಾಜದಲ್ಲಿ ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು ಅತ್ಯಂತ ಪ್ರಸ್ತುತವಾಗಿವೆ. ಸಮಾಜದಲ್ಲಿ ಜಾತಿ-ಮತಗಳ ಭೇದಭಾವವನ್ನು ಮರೆತು, ಎಲ್ಲರೂ ಸಮಾನರು ಎಂಬ ಭಾವನೆಯಿಂದ ಬದುಕಬೇಕು. ಬಡವರು, ದುರ್ಬಲರು ಮತ್ತು ಹಿಂದುಳಿದವರನ್ನು ಗೌರವಿಸಬೇಕು. ಸತ್ಯದ ಹಾದಿಯಲ್ಲಿ ನಡೆಯಬೇಕು ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ಹೇಳಿದರು.

ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್ ಮಾತನಾಡಿ, ವಾಲ್ಮೀಕಿ ರಾಮಾಯಣ ಉತ್ತಮ ಆಡಳಿತ ವ್ಯವಸ್ಥೆಯನ್ನು ಸಮಾಜಕ್ಕೆ ಕೊಡುಗೆ ನೀಡುವುದರ ಜೊತೆಗೆ ಶ್ರೀರಾಮನ ಜೀವನ, ಸೀತಾಮಾತೆಯ ಪತಿವ್ರತಾ ಧರ್ಮ, ಲಕ್ಷ್ಮಣನ ಸಹೋದರತ್ವ ಮತ್ತು ಹನುಮಂತನ ಸ್ವಾಮಿನಿಷ್ಠೆ ಸತ್ಯ, ಧರ್ಮ, ಕರ್ತವ್ಯ ಮತ್ತು ನ್ಯಾಯದ ಮಹತ್ವವನ್ನು ತಿಳಿಸುತ್ತದೆ. ಸಮಾಜದಲ್ಲಿ ಮಹರ್ಷಿ ವಾಲ್ಮೀಕಿ ತತ್ವ, ಆದರ್ಶ, ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

ಸೂಲಿಬೆಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕ ಸುಬ್ರಹ್ಮಣಿ ಉಪನ್ಯಾಸ ನೀಡಿ, ಮಹರ್ಷಿ ವಾಲ್ಮೀಕಿ ಅವರು ಕೇವಲ ಕವಿ ಅಷ್ಟೇ ಆಗಿರಲಿಲ್ಲ, ಅವರು ಮಹಾನ್ ತಪಸ್ವಿ, ಮಹಾನ್ ಜ್ಞಾನಿ, ಸಮಾಜಕ್ಕೆ ಮಾರ್ಗದರ್ಶನ ನೀಡಿದಂತಹ ಗುರು ಮತ್ತು ಮಾನವೀಯ ಮೌಲ್ಯಗಳ ಪ್ರತಿಪಾದಕ ಎಂದರು.

ವಿದ್ಯಾರ್ಥಿಗಳಿಗೆ ಸನ್ಮಾನ:

ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪಾಂಡುರಂಗ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

26ಕೆಡಿಬಿಪಿ1-

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ, ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು-ನಾಳೆ ಸಿಜಿಕೆ ರಂಗನಮನ ಕಾರ್ಯಕ್ರಮ
ಮತ್ತೆ ಬೆಳ್ಳೂರು ಶಿವರಾಂ ಬಣಕ್ಕೆ ಬ್ರಾಹ್ಮಣಸಭಾ ಅಧಿಕಾರ