ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಬ್ರಾಹ್ಮಣ ಸಭಾ ಆಡಳಿತ ಮಂಡಳಿಗೆ ಯಶಸ್ವಿಯಾಗಿ ಚುನಾವಣೆ ನಡೆದು ೧೫ ಮಂದಿ ನಿರ್ದೇಶಕರು ಆಯ್ಕೆಯಾದರು.ಬೆಳ್ಳೂರು ಶಿವರಾಮು ಮತ್ತು ಜಿ.ವಿ.ನಾಗರಾಜ್ ತಂಡದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಬೆಳ್ಳೂರು ಶಿವರಾಮ್ ತಂಡದ ೯ ಮಂದಿ ಹಾಗೂ ಜಿ.ವಿ.ನಾಗರಾಜ್ ತಂಡದಿಂದ ಮೂವರು ಹಾಗೂ ಎರಡೂ ತಂಡಗಳಲ್ಲಿ ಗುರುತಿಸಿಕೊಳ್ಳದ ಮೂವರು ಅಭ್ಯರ್ಥಿಗಳು ಸೇರಿದಂತೆ ೧೫ ಮಂದಿ ಆಯ್ಕೆಯಾಗಿದ್ದಾರೆ.
ಬೆಳ್ಳೂರು ಶಿವರಾಮ್ ತಂಡದ ಉಮಾ ದೊರೆಸ್ವಾಮಿ (೬೪೪), ಹರ್ಷಕೆಫೆ ಗೋಪಾಲ್ (೫೪೨), ಶಂಕರನಾರಾಯಣಶಾಸ್ತ್ರಿ (೫೩೮), ಪ್ರಸನ್ನಮಯ್ಯ (೫೨೧), ಬೆಳ್ಳೂರು ಮುರಳಿ (೫೧೭), ಮಧು ಬಸರಾಳು (೪೭೦), ಅಣ್ಣಿ ವಿಶ್ವನಾಥ್ (೪೬೩), ಉಪೇಂದ್ರಶರ್ಮ (೪೪೪), ನಾಗರತ್ನ (೫೦೩) ಹಾಗೂ ಜಿ.ವಿ. ನಾಗರಾಜ್ ತಂಡದಿಂದ ಜಿ.ವಿ. ನಾಗರಾಜು (೪೮೩), ಪದ್ಮಾ ಶ್ರೀನಿವಾಸ್ (೫೭೭), ಬಾಲಸುಬ್ರಮಣ್ಯ (೪೨೩) ಆಯ್ಕೆಯಾದರೆ, ಯಾವುದೇ ಗುಂಪಿನಲ್ಲಿ ಸೇರ್ಪಡೆಯಾಗದೆ ಪ್ರತ್ಯೇಕವಾಗಿ ಸ್ಪರ್ಸಿದ್ದ ಮಧು ಶಾಮಿಯಾನ ರಮೇಶ್ (೫೮೦), ಹೊಳಲು ರಾಘವೇಂದ್ರ (೪೯೦), ಶ್ರೀಪತಿ ಭಾರದ್ವಾಜ್ (೪೨೬) ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಕಾರಿ ಸೋಮಕುಮಾರ್ ತಿಳಿಸಿದ್ದಾರೆ.ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಮಧುಸೂದನ್ ಮಾತನಾಡಿ, ಚುನಾವಣೆಯಲ್ಲಿ ಆಯ್ಕೆಯಾದ ೧೫ ನಿರ್ದೇಶಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಸಮುದಾಯದ ಏಳಿಗೆಗೆ ಶ್ರಮಿಸಲು ನಿರ್ಧರಿಸಿದ್ದೇವೆ. ಸಮುದಾಯದ ಹಿರಿಯರಿಗೆ ವೃದ್ಧಾಪ್ಯ ವೇತನ, ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಆರ್ಥಿಕ ನೆರವು ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ.ಅಲ್ಲದೆ, ಆರ್ಥಿಕವಾಗಿ ಹಿಂದುಳಿದ ವಿಪ್ರ ಬಂಧುಗಳ ಕುಟುಂಬದಲ್ಲಿ ಯಾರಾದರೂ ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುವ ಬಗ್ಗೆಯೂ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ನೂತನ ನಿರ್ದೇಶಕರಾಗಿ ಆಯ್ಕೆಯಾದ ಬೆಳ್ಳೂರು ಮುರಳಿ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ೧೫ ನಿರ್ದೇಶಕರು ಒಟ್ಟಾಗಿ ಚರ್ಚಿಸಿ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಗಳನ್ನು ಕೈಗೊಳ್ಳಲಿದ್ದಾರೆ. ಹಿಂದಿನ ಆಡಳಿತ ಮಂಡಳಿ ಹಲವು ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಸಣ್ಣಪುಟ್ಟ ಲೋಪದೋಷಗಳು ಹಾಗೂ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಬಗೆಹರಿಸಿಕೊಂಡು ಎಲ್ಲರನ್ನೂ ಒಮ್ಮತಕ್ಕೆ ತಂದು ಸಮುದಾಯದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಲಾಗುವುದು ಎಂದರು.
ಬೆಳ್ಳೂರು ಶಿವರಾಮ್ ತಂಡದಿಂದ ಆಯ್ಕೆಯಾದ ನೂತನ ನಿರ್ದೇಶಕರು ಈ ಸಂದರ್ಭದಲ್ಲಿ ಹಾಜರಿದ್ದರು.