)
ಮುಂಡರಗಿ: ಪಂಚಪೀಠಗಳ ಒಕ್ಕೂಟ ವ್ಯವಸ್ಥೆಗೆ ಭದ್ರಬುನಾದಿ ಹಾಕಿದ್ದೆ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಎಂದು ರಂಭಾಪುರಿ ವೀರಸಿಂಹಾಸನಾಧೀಶ್ವರ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ ಹೇಳಿದರು.
1966ರಲ್ಲಿ ಛಿದ್ರಗೊಂಡ ಪೀಠಗಳನ್ನು ಒಂದೆಡೆ ಸೇರಿಸಿ ಬೃಹತ್ ಧಾರ್ಮಿಕ ಸಮ್ಮೇಳನ ನಡೆಸಿ 1008 ಅಡ್ಡಪಲಕ್ಕಿಮಹೋತ್ಸವ, 108 ರಥೋತ್ಸವ, ಕೋಟಿ ಬಿಲ್ವಾರ್ಚನೆ ಪೂಜೆ ಮಾಡಿಸಿ ಪಂಚಪೀಠಾಧೀಶರ ಸಮ್ಮಿಲನ ಮಾಡಿದ್ದರು.
ಈಗಲೂ ಪಂಚಪೀಠಗಳ ಒಕ್ಕೂಟ ವ್ಯವಸ್ಥೆಗಾಗಿ ತಾವು 6-7 ಬಾರಿ ಪ್ರಯತ್ನ ಮಾಡುತ್ತಾ ಬಂದಿದ್ದರೂ ಸಮಾನ ಪೀಠಗಳ ಜಗದ್ಗುರುಗಳಿಂದ ಮುಂದೆ ಹಾಗೆ ಆಗದಂತೆ ಆದ ತಪ್ಪನ್ನು ತಿದ್ದಿಕೊಂಡು ಹೋಗುವ ಭರವಸೆ ಸಿಗುತ್ತಿಲ್ಲ. ಈ ಪಂಚಪೀಠಗಳ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಮಾಡಿದವರೇ ಮುಂದೆ ನಿಂತು ಸರಿಪಡಿಸಿದರೆ ಇದು ಅರ್ಧ ಗಂಟೆಯಲ್ಲಿ ಸರಿಯಾಗುತ್ತದೆ. ಆದರೆ ಅವರು ಆ ಪ್ರಯತ್ನವನ್ನು ಅವರು ಮಾಡುತ್ತಿಲ್ಲ. ನಾವು ಮಾತ್ರ ನಮ್ಮ ಪ್ರಯತ್ನವನ್ನು ಯಾವತ್ತೂ ಬಿಟ್ಟಿಲ್ಲ ಎಂದರು.ಹಿರಿಯರಾದ ಎಸ್.ಎಸ್. ಪಾಟೀಲ್ ಅವರು ಮುಂಚೂಣಿಯಲ್ಲಿ ನಿಂತು ಪರಸ್ಪರ ಸಮಾಧಾನ ಮಾಡಿ, ಪರಸ್ಪರ ಸಂವಾದ ಮಾಡಿ, ನಡೆದು ಹೋದಂತಹ ತಪ್ಪು ಕ್ರಮಗಳನ್ನು ಸರಿಪಡಿಸಿ ಪರಿಹರಿಸಬೇಕು. ಅವರು ಕರೆದಲ್ಲಿಗೆ ನಾವು ಬರುತ್ತೇವೆ. ಒಂದುವೇಳೆ ಪಾಟೀಲರು ನಮ್ಮ ಪೀಠಕ್ಕೆ ಬಂದು ಸರಿಪಡಿಸುವುದಾದರೆ ವ್ಯವಸ್ಥೆ ಮಾಡಲು ನಾವು ಸಿದ್ಧ, ಉಜ್ಜಯಿನಿ ಪೀಠಕ್ಕೆ ಹೋಗಿ ಸರಿಪಡಿಸುವುದಾದರೆ ಅವರಿಗೂ ಹೇಳುತ್ತೇವೆ ಅಥವಾ ಇದೇ ಕಲಕೇರಿಯ ತಮ್ಮ ಮನೆಗೆ ಕರೆದರೂ ಸಹ ನಾವು ಇಲ್ಲಿಗೇ ಬರುತ್ತೇವೆ. ನಮ್ಮದು ಯಾವುದಕ್ಕೂ ವಿರೋಧವಿಲ್ಲ ಎಂದರು.
ಈ ಸಂದರ್ಭದಲ್ಲಿ ನಾಡಿನ ವಿವಿಧ ಸ್ವಾಮೀಜಿಗಳು, ಮಾಜಿ ಸಂಸದ ಮಂಜುನಾಥ ಕುನ್ನೂರ, ಡಾ.ಲಿಂಗನಗೌಡ ಪಾಟೀಲ, ಶಿವಕುಮಾರಗೌಡ ಪಾಟೀಲ, ಎಸ್.ಬಿ. ಕರಿಭರಮಗೌಡ್ರ ಉಪಸ್ಥಿತರಿದ್ದರು.