ವೈದ್ಯೆ ಮೇಲೆ ಅತ್ಯಾಚಾರ-ಮಾನವ ಜಗತ್ತು ತಲೆತಗ್ಗಿಸುವ ಘಟನೆ

KannadaprabhaNewsNetwork | Published : Aug 18, 2024 1:52 AM

ಸಾರಾಂಶ

ಕೋಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾದ ಘಟನೆಯನ್ನು ತೀವ್ರವಾಗಿ ಖಂಡಿಸಿದ ಸರ್ಕಾರಿ ಮತ್ತು ಖಾಸಗಿ ವೈದ್ಯರು ಶನಿವಾರ ಭಟ್ಕಳದಲ್ಲಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಭಟ್ಕಳ: ಕೋಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾದ ಘಟನೆಯನ್ನು ತೀವ್ರವಾಗಿ ಖಂಡಿಸಿದ ಸರ್ಕಾರಿ ಮತ್ತು ಖಾಸಗಿ ವೈದ್ಯರು ಶನಿವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಸಹಾಯಕ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮನವಿಯಲ್ಲಿ ವೈದ್ಯಕೀಯ ವಿದ್ಯಾರ್ಥಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾನವ ಜಗತ್ತು ತಲೆ ತಗ್ಗಿಸುವಂತೆ ಮಾಡಿದೆ. ಈ ಘಟನೆಯಿಂದ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಎಲ್ಲರ ಆತ್ಮಸ್ಥೈರ್ಯ ಕುಸಿಯುವಂತೆ ಮಾಡಿದೆ. ದುಷ್ಟರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸರ್ಕಾರ ಸೂಕ್ತ ಕಾನೂನು ರೂಪಿಸಬೇಕು ಎಂದು ಆಗ್ರಹಿಸಲಾಗಿದೆ. ಘಟನೆಯನ್ನು ತೀವ್ರವಾಗಿ ಖಂಡಿಸಿ ಮಾತನಾಡಿದ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ್, ವೈದ್ಯೋ ನಾರಾಯಣ ಹರಿ ಎನ್ನುವುದನ್ನು ಬಿಟ್ಟು ನಮ್ಮನ್ನು ಬದುಕಲು ಬಿಡಿ ಎನ್ನುವ ಪರಿಸ್ಥಿತಿ ಬಂದೊದಗಿದೆ. ಇಂತಹ ಘಟನೆಯಿಂದ ಹೆಣ್ಣು ಮಕ್ಕಳು ಎಷ್ಟೇ ವಿದ್ಯಾಭ್ಯಾಸ ಪಡೆದರೂ ಯಾರಿಂದಲೂ ರಕ್ಷಿಸಲು ಸಾಧ್ಯವಿಲ್ಲ ಎನ್ನುವ ಸತ್ಯ ತಿಳಿದಂತಾಗಿದೆ. ಹೀನ ಕೃತ್ಯ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮುಂದೆ ಎಲ್ಲಿಯೂ ಇಂತಹ ಘಟನೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ಆಯುಕ್ತೆ ಡಾ. ನಯನಾ ಅವರು ಕೋಲ್ಕತ್ತಾದಲ್ಲಿ ನಡೆದ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಇಂತಹ ಘಟನೆ ನಡೆಯಬಾರದಿತ್ತು. ಈ ಪ್ರತಿಭಟನೆ ವೈದರಿಗೆ ಮಾತ್ರ ಸೀಮಿತವಾಗಿಲ್ಲ. ಇದನ್ನು ಎಲ್ಲರೂ ಖಂಡಿಸಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು ಎಂದರು.

ಪ್ರತಿಭಟನೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಪಾಲ್ಗೊಂಡಿದ್ದರು.

Share this article