ಕಮಿಷನ್‌ ಕೇಳಿದವನ ಲಾರಿ ಗುದ್ದಿ ಕೊಲ್ಲಿಸಿದ ಪಡಿತರ ಮಾಫಿಯಾ!

KannadaprabhaNewsNetwork |  
Published : Oct 11, 2025, 12:02 AM IST
ಕೊಲೆ | Kannada Prabha

ಸಾರಾಂಶ

ಪಡಿತರ ವಸ್ತುಗಳ ಕಳ್ಳಸಾಗಣೆಗೆ ಕಡಿವಾಣ ಹಾಕುವಂತೆ ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚಿಸಿದ ಹೊರತಾಗಿಯೂ ರಾಜ್ಯದಲ್ಲಿ ಪಡಿತರ ಮಾಫಿಯಾದ ಹಾವಳಿ ನಿಲ್ಲವಂತೆ ಕಾಣುತ್ತಿಲ್ಲ.

- ಬಾಗಲಕೋಟೆ ಅಪಘಾತ ಕೇಸಿಗೆ ಟ್ವಿಸ್ಟ್- ಎಚ್ಚರಿಕೆ ಹೊರತಾಗಿಯೂ ನಿಲ್ಲದ ದಂಧೆ

---

ಪಡಿತರ ಅಕ್ಕಿ ಸಂಗ್ರಹಿಸಿ ದುಬಾರಿಗೆ ಬೆಲೆಗೆ ಮಾರುತ್ತಿದ್ದ ಅಶ್ಫಾಕ್‌ ಸುಲೇಮಾನ, ನಂದೀಶ್ವರ ಪವಾಡಿ, ಮಹೇಶ ಪವಾಡಿ

ಇದರ ಸುಳಿವು ಪಡೆದ ಬಸವರಾಜ ಎಂಬಾತ ಪಡಿತರ ಕಳ್ಳಸಾಗಣೆ ದಂಧೆಕೋರರ ಬಳಿಯೇ ಕಮಿಷನ್‌ಗೆ ಬೇಡಿಗೆ ಇಟ್ಟಿದ್ದ

ಈ ಹಿನ್ನೆಲೆಯಲ್ಲಿ ಬಸವರಾಜನನ್ನು ಮಾತುಕತೆಗೆ ಕರೆಸಿದ್ದ ದಂಧೆಕೋರರು. ಮಾತುಕತೆ ವಿಫಲವಾಗಿ ತೆರಳಿದ್ದ ಖಾನಕೊಂಡ

ಖಾನಕೊಂಡ ಬೈಕಲ್ಲಿ ತೆರಳುವಾಗ ಹಿಂದಿನಿಂದ ಲಾರಿ ವಾಹನ ಡಿಕ್ಕಿ ಹೊಡೆಸಿ ಹತ್ಯೆಗೈದಿದ್ದ ತಂಡ. ವಿಚಾರಣೆ ವೇಳೆ ತಪ್ಪೊಪ್ಪಿಗೆ

==ಕನ್ನಡಪ್ರಭ ವಾರ್ತೆ ಜಮಖಂಡಿ

ಪಡಿತರ ವಸ್ತುಗಳ ಕಳ್ಳಸಾಗಣೆಗೆ ಕಡಿವಾಣ ಹಾಕುವಂತೆ ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚಿಸಿದ ಹೊರತಾಗಿಯೂ ರಾಜ್ಯದಲ್ಲಿ ಪಡಿತರ ಮಾಫಿಯಾದ ಹಾವಳಿ ನಿಲ್ಲವಂತೆ ಕಾಣುತ್ತಿಲ್ಲ. ಇದುವರೆಗೂ ಪಡಿತರವನ್ನು ಅನ್ಯರಾಜ್ಯಗಳಿಗೆ ಕಳ್ಳಸಾಗಣೆ ಮಾಡುತ್ತಿದ್ದ ಇಂಥ ದಂಧೆಕೋರರು ಇದೀಗ ತಮಗೆ ಅಡ್ಡಿಯಾದವರ ಹತ್ಯೆಗೂ ಮುಂದಾಗಿರುವ ಆಘಾತಕಾರಿ ಘಟನೆಯೊಂದು ಬಾಗಲಕೋಟೆಯ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ.

ಬುಧವಾರ ಜಮಖಂಡಿ ತಾಲೂಕಿನ ಬಂಡಿಗಣಿ ಕ್ರಾಸ್‌ನಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ವ್ಯಕ್ತಿ ಮೃತಪಟ್ಟ ಪ್ರಕರಣದ ಪಡಿತರ ಕಳ್ಳಸಾಗಣೆ ಮಾಫಿಯಾದ ಕೈವಾಡವಿರುವುದು ಬೆಳಕಿಗೆ ಬಂದಿದೆ. ಇಂಥದ್ದೊಂದು ವ್ಯವಸ್ಥಿತ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?:

ಜಮಖಂಡಿ ಗ್ರಾಮೀಣ ಠಾಣೆ ವ್ಯಾಪ್ತಿಯ ರಬಕವಿ-ಬನಹಟ್ಟಿ ರಸ್ತೆಯ ಬಂಡಿಗಣಿ ಕ್ರಾಸ್‌ನಲ್ಲಿ ಬುಧವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಪತ್ರಕರ್ತ ಬಸವರಾಜ ಖಾನಗೊಂಡ (40) ಮೃತಪಟ್ಟಿದ್ದರು. ಇವರು ಬರುತ್ತಿದ್ದ ಸ್ಕೂಟಿಗೆ ಪಿಕಪ್‌ ವಾಹನ (KA -48 A-1732) ಹಿಂದಿನಿಂದ ಬಂದು ಡಿಕ್ಕಿ ಹೊಡೆದಿತ್ತು. ಪೊಲೀಸರು ಇದನ್ನು ಹಿಟ್ ಆ್ಯಂಡ್‌ ರನ್ ಕೇಸ್‌ ಎಂದು ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನದ ಮಾಲಿಕ ಅಶ್ಫಾಕ್‌ ಸುಲೇಮಾನ ಮುಲ್ಲಾ, ಈತನ ಸಹಚರರಾದ ನಂದೀಶ್ವರ ಪವಾಡಿ ಮತ್ತು ಮಹೇಶ ಪವಾಡಿಯನ್ನು ಬಂಧಿಸಿ, ವಾಹನವನ್ನು ವಶಪಡಿಸಿಕೊಂಡಿದ್ದರು.

ಕಮಿಷನ್‌ ಕೇಳಿದ್ದಕ್ಕೆ ಹತ್ಯೆ:

ವಿಚಾರಣೆ ವೇಳೆ, ಆರೋಪಿ ಅಶ್ಫಾಕ್‌ ಸುಲೇಮಾನ ಮುಲ್ಲಾ ಸ್ವಯಂಪ್ರೇರಿತ ಹೇಳಿಕೆ ನೀಡಿದ್ದು, ಉದ್ದೇಶಪೂರ್ವಕವಾಗಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಪ್ರಕರಣದ ಆರೋಪಿಗಳು ಪಡಿತರ ಅಕ್ಕಿಯನ್ನು ಸಂಗ್ರಹಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇದನ್ನರಿತ ಖಾನಗೊಂಡ, ಕಮಿಷನ್‌ಗೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಡೀಲ್‌ ಕುದುರಿಸಲು ಬುಧವಾರ ಮಧ್ಯಾಹ್ನ ತೇರದಾಳದ ಹೋಟೆಲ್‌ಗೆ ಖಾನಗೊಂಡನನ್ನು ಚರ್ಚೆಗೆ ಕರೆಸಲಾಗಿತ್ತು. ಪರಿಚಯಸ್ಥರಾಗಿದ್ದ ರಾಘವೇಂದ್ರ ತೇಲಿ ಎಂಬುವರ ಮಧ್ಯಸ್ಥಿಕೆಯಲ್ಲಿ ಚರ್ಚೆ ನಡೆದಿತ್ತು. ಸಭೆ ಮುಗಿಯುತ್ತಿದ್ದಂತೆ ಅಶ್ಫಾಕ್‌, ಸ್ಥಳದಿಂದ ಹೊರಟು ಹೋಗಿದ್ದ.

ಲಾಡಿ ಡಿಕ್ಕಿ ಹೊಡೆಸಿ ಹತ್ಯೆ:

ಖಾನಗೊಂಡ, ಊಟ ಮುಗಿಸಿಕೊಂಡು ಸ್ಕೂಟಿಯಲ್ಲಿ ಜಮಖಂಡಿಯತ್ತ ಪ್ರಯಾಣ ಬೆಳೆಸಿದ್ದರು. ಅಶ್ಫಾಕ್‌ನ ಸಹಚರರಾದ ನಂದೀಶ್ವರ ಹಾಗೂ ಮಹೇಶ ಖಾನಗೊಂಡರನ್ನು ಹಿಂಬಾಲಿಸುತ್ತ, ಬಂಡಿಗಣಿ ಕ್ರಾಸ್‌ ಹತ್ತಿರ ಪಿಕ್‌ಅಪ್‌ ವಾಹನದೊಂದಿಗೆ ಕಾಯುತ್ತಿದ್ದ ಅಶ್ಫಾಕ್‌ಗೆ ಮಾಹಿತಿ ನೀಡುತ್ತಿದ್ದರು. ಪೂರ್ವ ನಿಯೋಜನೆಯಂತೆ ಹತ್ತಿರಕ್ಕೆ ಬಂದ ಖಾನಗೊಂಡನ ವಾಹನಕ್ಕೆ ಅಶ್ಫಾಕ್‌, ರಾಂಗ್‌ರೂಟ್‌ನಲ್ಲಿ ವೇಗವಾಗಿ ಬಂದು, ಡಿಕ್ಕಿ ಹೊಡೆಸಿ, ಅಪಘಾತ ಎಂಬಂತೆ ಸೃಷ್ಟಿಸಿದ್ದ. ಬಳಿಕ, ಅಲ್ಲಿಂದ ಪರಾರಿಯಾಗಿದ್ದ.

ಸಿಸಿಟಿವಿ ದೃಶ್ಯಾವಳಿ, ಡಿಜಿಟಲ್ ಪುರಾವೆ, ಸಾಕ್ಷಿಗಳ ಹೇಳಿಕೆ, ಆರೋಪಿಯ ತಪ್ಪೊಪ್ಪಿಗೆ ಆಧಾರದ ಮೇಲೆ ಇದು ಪಡಿತರ ಅಕ್ಕಿ ಕಳ್ಳಸಾಗಣೆ ಮಾಫಿಯಾಗೆ ಬಲಿಯಾದ ಪ್ರಕರಣ ಎಂಬುದು ದೃಢಪಟ್ಟಿದೆ.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ