ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಪ್ರಾಚೀನ ಕಾಲದಿಂದಲೂ ನಡೆದು ಬಂದಿರುವ ಗುರು-ಶಿಷ್ಯರ ಸಂಬಂಧ ಅತ್ಯಂತ ಪವಿತ್ರವಾದದ್ದು, ಅದನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಳಿಸಿಕೊಂಡು ಹೋಗಬೇಕು ಎಂದು ಮುಖ್ಯೋಪಾಧ್ಯಾಯ ಆರ್.ಕೆ. ಹನಗಂಡಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪ್ರಾಚೀನ ಕಾಲದಿಂದಲೂ ನಡೆದು ಬಂದಿರುವ ಗುರು-ಶಿಷ್ಯರ ಸಂಬಂಧ ಅತ್ಯಂತ ಪವಿತ್ರವಾದದ್ದು, ಅದನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಳಿಸಿಕೊಂಡು ಹೋಗಬೇಕು ಎಂದು ಮುಖ್ಯೋಪಾಧ್ಯಾಯ ಆರ್.ಕೆ. ಹನಗಂಡಿ ಅಭಿಪ್ರಾಯಪಟ್ಟರು.
ತಾಲೂಕಿನ ಮನಗೂಳಿ ಗ್ರಾಮದ ಬಿ.ಎಸ್. ಪಾಟೀಲ ಸಂಯುಕ್ತ ಪಪೂ ಮಹಾವಿದ್ಯಾಲಯದ ಸಭಾಭವನದಲ್ಲಿ 2004-05ನೇ ಸಾಲಿನ ಎಸ್ಸೆಸ್ಸೆಲ್ಸಿ ಹಳೆಯ ವಿದ್ಯಾರ್ಥಿಗಳು ಭಾನುವಾರ ಆಯೋಜಿಸಿದ್ದ ಗುರು ವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗುರುಗಳಿಗೆ ವಂದನೆ ಸಲ್ಲಿಸುವುದು ಭಾರತೀಯ ಸಂಸ್ಕೃತಿಯ ಮಹತ್ವದ ಭಾಗ. ವಿದ್ಯಾರ್ಥಿಗಳು ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸ್ನೇಹಿತರೊಂದಿಗೆ ಹಂಚಿಕೊಂಡಾಗ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
ನಿವೃತ್ತ ಪ್ರಾಚಾರ್ಯ ಎಸ್.ಎಸ್.ಬಿರಾದಾರ ಮಾತನಾಡಿ, ಗುರುಗಳಿಗೆ ಗೌರವ ಸಲ್ಲಿಸುವ ಪರಂಪರೆ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. 22 ವರ್ಷಗಳ ಬಳಿಕ ಹಳೆಯ ವಿದ್ಯಾರ್ಥಿಗಳು ಒಂದಾಗಿ ಸೇರಿ ಗುರುವಂದನಾ ಕಾರ್ಯಕ್ರಮ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ಎಂ.ಎಸ್. ಮಾದರ ಮಾತನಾಡಿ, ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಅಂಕಗಳ ಹಿಂದೆ ಓಡುತ್ತಿರುವುದರಿಂದ ಸಂಸ್ಕಾರ ಹಾಗೂ ನೈತಿಕ ಮೌಲ್ಯಗಳು ಕುಗ್ಗುತ್ತಿವೆ. ಮೌಲ್ಯಾಧಾರಿತ ಶಿಕ್ಷಣವೇ ಉತ್ತಮ ಸಮಾಜ ನಿರ್ಮಾಣಕ್ಕೆ ಅಗತ್ಯ ಎಂದು ಪ್ರತಿಪಾದಿಸಿದರು.
ಶಿಕ್ಷಕ ಎಂ.ಎಫ್. ನಾಯಕ ಭಾವುಕರಾಗಿ, ತಾವು ಕಲಿಸಿದ ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ, ವಿದ್ಯಾರ್ಥಿಗಳ ಪ್ರೀತಿ ಹಾಗೂ ವಿಶ್ವಾಸ ಶಿಕ್ಷಕರಿಗೆ ಅತಿ ದೊಡ್ಡ ಗೌರವ ಎಂದರು.
ಶಿಕ್ಷಕಿ ಎಸ್.ಎಸ್. ಪೂಜಾರ ಮಾತನಾಡಿ, ಗುರು-ಶಿಷ್ಯರ ಸಂಬಂಧ ತಂದೆ-ತಾಯಿ ಹಾಗೂ ಮಕ್ಕಳ ಸಂಬಂಧದಷ್ಟೇ ಪವಿತ್ರ. ನಾವು ಯಾವ ಹುದ್ದೆಯಲ್ಲಿದ್ದರೂ ನಮ್ಮ ಊರು, ನಮ್ಮ ಕುಟುಂಬ ಹಾಗೂ ನಮ್ಮ ನಾಡನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಇದಕ್ಕೂ ಮುನ್ನ ಎಲ್ಲ ಶಿಕ್ಷಕರನ್ನು ಶಾಲು, ಹಾರ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಹಳೆಯ ವಿದ್ಯಾರ್ಥಿಗಳಾದ ಸಂಗನಬಸು ಹುಲಗಬಾಳ್, ಗಣಮಠಯ್ಯಾ, ವಂದಾಲ್ ಸೇರಿ ಅನೇಕರು ತಮ್ಮ ಶಾಲಾ ದಿನಗಳ ಮಧುರ ನೆನಪುಗಳನ್ನು ಹಂಚಿಕೊಂಡರು. ನಂತರ ಶಿಕ್ಷಕರು ಹಾಗೂ ಸ್ನೇಹಿತರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಕೊನೆಯಲ್ಲಿ ಪ್ರೀತಿಯ ಭೋಜನಕೂಟ ನಡೆಯಿತು.
ಶಿಕ್ಷಕರಾದ ಬಸವರಾಜ ಮನಗೂಳಿ, ಎ.ಡಿ.ಚನ್ನಾಳ, ಕೆ.ಬಿ.ಕರಾಬಿ, ಸಂಗಪ್ಪ ಹಡಪದ ಸೇರಿ 2004-05ನೇ ಸಾಲಿನ ಎಲ್ಲ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಭೀರಪ್ಪ ನಿಡಗುಂದಿ ಮತ್ತು ಸವಿತಾ ಹೊಸಮನಿ ಸ್ವಾಗತ ಗೀತೆ ಹಾಡಿದರು. ಮಲ್ಲು ಕುಂಬಾರ ಪ್ರಾಸ್ತಾವಿಕ ಮಾತನಾಡಿದರು. ರಮೇಶ ಹಾಗೂ ಬಸವರಾಜ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.