ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಜಾತಿ ರಹಿತ ಸಮಾಜ ನಿರ್ಮಾಣದ ನೆಲೆಗಟ್ಟಿನ ಆಧಾರದ ಮೇಲೆ ಧರ್ಮ ರಕ್ಷಣೆಯ ಸಂಕಲ್ಪದೊಂದಿಗೆ ದೂರ ದೃಷ್ಟಿ ಚಿಂತನೆಯ ಮೂಲಕ ಪ್ರತಿಯೊಬ್ಬರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವ ಮೂಲಕ ಹಿಂದೂ ರಾಷ್ಟ್ರ ನಿರ್ಮಾಣ ಮಾಡಬೇಕೆಂದು ಆರ್‌ಎಸ್‌ಎಸ್ ಬೌದ್ಧಿಕ ಪ್ರಚಾರಕ ಜಯಪ್ರಕಾಶ್ ಹೇಳಿದರು.ಪಟ್ಟಣದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಆರ್.ಎಸ್.ಎಸ್. ಪಥಸಂಚಲನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾತೃಸ್ವರೂಪಿಯಾದ ಭಾರತ ಮಾತೆಯ ರಕ್ಷಣೆ ಹಾಗೂ ಹಿಂದೂ ರಾಷ್ಟ್ರ ನಿರ್ಮಾಣ, ಸಂಸ್ಕ್ಋತಿ ಸಂಪ್ರದಾಯಗಳ ಹಾಗೂ ಹಿಂದೂ ಸಮುದಾಯದ ರಕ್ಷಣೆಯ ಮೂಲಕ ರಾಷ್ಟ್ರ ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಸ್ವಯಂ ಸೇವಕರ ಮೇಲಿದೆ ಎಂದರು.
ಗ್ರಾಮಗಳಲ್ಲಿ ಶಾಖೆ ತೆರೆಯಿರಿಸ್ವಯಂ ಸೇವಕರು ದೈಹಿಕವಾಗಿ ಮಾನಸಿಕವಾಗಿ ಸದೃಡರಾಗಿ ಸಮಾಜದ ಜಾಗೃತಿ ದೃಷ್ಟಿಯಿಂದ ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಿ ಶಾಖೆಗಳನ್ನು ಪ್ರಾರಂಭಿಸುವಂತಾಗಬೇಕು, ಶತಮಾನೋತ್ಸವ ಹಿನ್ನೆಲೆ 100 ದಿನದ ಕಾರ್ಯಕ್ರಮಗಳನ್ನು ರೂಪಿಸಬೇಕು ಸ್ವಯಂ ಸೇವಾ ಪ್ರತಿಫಲದಿಂದಾಗಿ ಆರ್‌ಎಸ್‌ಎಸ್ ಬಹುದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಧರ್ಮ ಉಳಿಸಲು ಕುಟುಂಬ ಪ್ರಬೋದನಾ ಆಚರಣೆ ಮಾಡಬೇಕು ಎಂದರು.
ಹೂ ಚೆಲ್ಲಿ ಸ್ವಾಗತ:ಯುಗಾದಿ ಹಬ್ಬದ ಪ್ರಯುಕ್ತ ನಡೆದ ಪಥ ಸಂಚನಲ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಹಿಂದೂಗಳಿಗೆ ಹಬ್ಬದ ಪಾವಿತ್ರತೆಯನ್ನು ಸಾರಿ ಹಿಂದೂಗಳು ಒಂದಾಗಿ ಜೀವಿಸಲು ಸಂದೇಶ ಸಾರಿದರು, ರಸ್ತೆಗಳಲ್ಲಿ ಸಾರ್ವಜನಿಕರು ಪಥ ಸಂಚಲನ ಕಾರರ ಮೇಲೆ ಹೂ ಚೆಲ್ಲಿ ಸ್ವಾಗತಿಸಿದರು.
ಈ ವೇಳೆ ಮಾಜಿ ಸಂಸದ ಎಸ್.ಮುನಿಸ್ವಾಮಿ,ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್,ಆರ್‌ಎಸ್‌ಎಸ್.ಜಿಲ್ಲಾ ಸಂಚಾಲಕ, ಗೋವಿಂದರಾಜು, ಕಾರ್ಯವಾಹಕ ಶ್ರೀನಿವಾಸ್, ಸಹ ಕಾರ್ಯವಾಹಕ ಜಗದೀಶ್, ಕಿಶೋರ್ ರಾಮಮೂರ್ತಿ, ಪುರಸಭೆ ಸದಸ್ಯ ಕಪಾಲಿಶಂಕರ್, ಬಿ.ಸಿ.ಮೂರ್ತಿ, ಶಶಿಕುಮಾರ್, ಮಂಜು, ಮಣಿಕಂಠ ಇತರರು ಇದ್ದರು.