ಯಕ್ಷಗಾನವನ್ನು ಗರಿಮೆಗೆ ಚ್ಯುತಿ ಬಾರದಂತೆ ಬೆಳೆಸುವ ಜವಾಬ್ದಾರಿ ಕಲಾವಿದರಿಗಿದೆ: ಡಾ.ತಲ್ಲೂರು

KannadaprabhaNewsNetwork |  
Published : Jun 01, 2025, 01:32 AM ISTUpdated : Jun 01, 2025, 01:33 AM IST
31ತಲ್ಲೂರು | Kannada Prabha

ಸಾರಾಂಶ

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದಲ್ಲಿ ‘ವೃತ್ತಿಪರ ಕಲಾವಿದರಿಗಾಗಿ ಕಲಾಪಗಳು’ ಕಾರ್ಯಕ್ರಮ ನಡೆಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಉದ್ಘಾಟಿಸಿದರು.

ಉಡುಪಿ: ‘ವೃತ್ತಿಪರ ಕಲಾವಿದರಿಗಾಗಿ ಕಲಾಪಗಳು’ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಉಡುಪಿಹಿಂದೆ ಕಲಾವಿದರು ವೃತ್ತಿಪರರಾಗಿಯೂ ಶ್ರದ್ಧೆಯಿಂದ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಿದರು. ಇಂದು ವೈದ್ಯರು, ಎಂಜಿನಿಯರ್, ಶಿಕ್ಷಕರು ಸೇರಿದಂತೆ ಉನ್ನತ ಶಿಕ್ಷಣ ಪಡೆದವರು ಯಕ್ಷಗಾನ ಕ್ಷೇತ್ರಕ್ಕೆ ಕಾಲಿಡುತ್ತಿರುವುದು ಸ್ವಾಗತಾರ್ಹ. ಆದರೆ ಯಕ್ಷಗಾನ ತನ್ನ ಸಾಂಪ್ರಾದಾಯಿಕ ಚೌಕಟ್ಟನ್ನು ಮೀರುತ್ತಿದೆ ಎಂಬ ದೂರುಗಳು ಕೂಡ ಅಕಾಡೆಮಿಯ ಕದವನ್ನು ತಟ್ಟುತ್ತಿವೆ. ಈ ಸಂಕ್ರಮಣ ಕಾಲದಲ್ಲಿ ಯಕ್ಷಗಾನ ಕಲೆಯ ಗರಿಮೆಗೆ ಚ್ಯುತಿ ಬಾರದಂತೆ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕಲಾವಿದರ ಮೇಲಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಕಿವಿಮಾತು ಹೇಳಿದರು.

ಅವರು ಶನಿವಾರ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದಲ್ಲಿ ‘ವೃತ್ತಿಪರ ಕಲಾವಿದರಿಗಾಗಿ ಕಲಾಪಗಳು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಯಕ್ಷಗಾನ ಕರಾವಳಿ ಮಾತ್ರವಲ್ಲದೆ ಹೊರ ಜಿಲ್ಲೆ, ರಾಜ್ಯಗಳಲ್ಲದೆ ಹೊರರಾಷ್ಟ್ರಕ್ಕೂ ಕೊಂಡೊಯ್ಯುವ ಕಾರ್ಯ ಅಕಾಡೆಮಿ ಮಾಡಲಿದೆ. ಕಲಾವಿದರು ಅರ್ಜಿ ಹಾಕದೆ ಅಕಾಡೆಮಿಯ ಪ್ರಶಸ್ತಿಗಳು ಅರ್ಹರಿಗೆ ಮುಟ್ಟಬೇಕು ಎನ್ನುವ ಹಂಬಲ ನನ್ನದು. ನನ್ನ ಅವಧಿಯ ಎರಡು ವರ್ಷಗಳ ಪ್ರಶಸ್ತಿಗಳನ್ನು ಅರ್ಜಿ ಹಾಕದೇ ಅಕಾಡೆಮಿಯೇ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಿದ್ದೇವೆ. ಕಲಾವಿರ ಶ್ರೇಯೋಭಿವೃದ್ಧಿಯ ಆಕಾಂಕ್ಷೆಯಂದಲೇ ನಾನು ಅಕಾಡೆಮಿಯ ಅಧ್ಯಕ್ಷನಾಗಿದ್ದೇನೆ. ಇದರ ಸಾಕಾರಕ್ಕೆ ಕಲಾವಿದರ ಸಹಕಾರ, ಸಲಹೆ ಬೇಕು ಎಂದು ಅವರು ಮನವಿ ಮಾಡಿದರು.

ಯಕ್ಷಗಾನ ಕ್ಷೇತ್ರದಲ್ಲಿ ಕಲೆ ಹಾಗೂ ಕಲಾವಿದರ ಶ್ರೇಯೋಭಿವೃದ್ಧಿಗೆ ಹಗಲಿರುಳು ದುಡಿಯುತ್ತಿರುವ ಉಡುಪಿಯ ಯಕ್ಷಗಾನ ಕಲಾರಂಗ ಅಭಿನಂದನಾರ್ಹ. ಬಡ ಕಲಾವಿದರಿಗೆ ಮನೆ ಕೂಡ ಕಟ್ಟಿಸಿಕೊಡುತ್ತಿದೆ. ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆ ಇನ್ನಷ್ಟು ಬೆಳೆದು ಯಕ್ಷಗಾನದ ಸೇವೆ ಮಾಡುವಂತಾಗಲಿ ಎಂದು ಡಾ.ತಲ್ಲೂರು ಹಾರೈಸಿದರು.

ಉದ್ಯಮಿ ಗೋಪಾಲ ಸಿ. ಬಂಗೇರ ಮಾತನಾಡಿ, ಡಾ.ತಲ್ಲೂರು ನೇತೃತ್ವದಲ್ಲಿ ಯಕ್ಷಗಾನ ಅಕಾಡೆಮಿ ಹತ್ತುಹಲವು ಕಾರ್ಯಕ್ರಮಗಳನ್ನು ಮಾಡುತ್ತಿದೆ. ಸರ್ಕಾರ ನೀಡುವ ಅನುದಾನವನ್ನು ಮಕ್ಕಳ ಯಕ್ಷಗಾನ, ಯಕ್ಷಗಾನ ತರಬೇತಿ, ವಿಚಾರಸಂಕಿರಣ ಮೊದಲಾದ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತಿರುವುದು ಪ್ರಶಂಸನೀಯ ಎಂದರು.

ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್, ಉಪಾಧ್ಯಕ್ಷರಾದ ಎಸ್.ವಿ.ಭಟ್, ಪ್ರೊ. ಸದಾಶಿವ ರಾವ್, ನಾರಾಯಣ ಎಂ. ಹೆಗಡೆ ಮತ್ತು ವಿ.ಜಿ.ಶೆಟ್ಟಿ ಉಪಸ್ಥಿತರಿದ್ದರು. ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತಾ ಎನ್. ಸ್ವಾಗತಿಸಿದರು. ಸದಸ್ಯರಾದ ಸತೀಶ್ ಹಡಪ ವಂದಿಸಿದರು.

ಈ ಸಂದರ್ಭ ಯಕ್ಷಗಾನ ಅಕಾಡೆಮಿ ವತಿಯಿಂದ ಕೇರಳ ತ್ರಿಶೂರಿನ ಮಾಧವ ಮಾತೃಗ್ರಾಮಂ ಕೂಡಿಯಾಟ್ಟಂ ಗುರುಕುಲಂ ವತಿಯಿಂದ ‘ಸೀತಾಪಹರಣಂ -ಜಟಾಯು ವಧಂ’ ಕೂಡಿಯಾಟ್ಟಂ ಪ್ರದರ್ಶನ ಜನಮನಸೂರೆಗೊಂಡಿತು. ನಂತರ ‘ಕಲೆ ಪೂರ್ಣಾವಧಿ ಉದ್ಯೋಗವಾಗಬೇಕೇ? ಉಪವೃತ್ತಿಯಾಗಬೇಕೇ?’ ಎಂಬ ವಿಷಯದಲ್ಲಿ ಮುಕ್ತ ಚರ್ಚೆ ನಡೆಯಿತು. ಆರಂಭದಲ್ಲಿ ಮಣಿಪಾಲದ ಕೆಎಂಸಿ ವತಿಯಿಂದ ಕಲಾವಿದರಿಗಾಗಿ ಉಚಿತ ವೈದ್ಯಕೀಯ ತಪಾಸಣೆ ನಡೆಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ