ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ
ವಕೀಲರ ಜವಾಬ್ದಾರಿ ಸಮಾಜದಲ್ಲಿ ಗುರುತರವಾದುದು. ವಕೀಲರ ಕಾನೂನಿನ ಓದು ಮತ್ತು ತಿಳುವಳಿಕೆ ನ್ಯಾಯದಾನಕ್ಕೆ ಇನ್ನಷ್ಟು ವೇಗ ದೊರಕಿಸುತ್ತದೆ ಎಂದು ಹೊನ್ನಾವರ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಸಿ ಚಂದ್ರಶೇಖರ ಹೇಳಿದರು.
ಹೊನ್ನಾವರ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘ ಹೊನ್ನಾವರ ಏರ್ಪಡಿಸಿದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಕೀಲರು ಸತತ ದುಡಿಮೆಯೊಂದಿಗೆ ಉಳಿದ ಸಮಯದಲ್ಲಿ ಕುಟುಂಬದ ಕಾಳಜಿ, ಆರೋಗ್ಯದ ಕಾಳಜಿ ಜೊತೆಗೆ ಮಾನವೀಯ ಕಾಳಜಿಯ ಸಮಾಜ ಮುಖಿ ಚಿಂತನೆಯನ್ನು ಬದುಕಿನಲ್ಲಿ ಅಳವಡಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ವಕೀಲ ಸಂಘದ ಕಾರ್ಯದರ್ಶಿ ಉದಯ ನಾಯ್ಕ ಚಿತ್ತಾರ, ಹಿರಿಯ ನ್ಯಾಯವಾದಿ ಜಿ.ವಿ. ಭಟ್, ಸುರೇಶ ಅಡಿ ಉಪಸ್ಥಿತರಿದ್ದರು. ವಕೀಲರ ಸಂಘ ಏರ್ಪಡಿಸಿದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು. ವಕೀಲರ ಸಂಘ ನವೆಂಬರ್ ತಿಂಗಳಲ್ಲಿ ಏರ್ಪಡಿಸಿದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಪಡೆದ ಶಿಕ್ಷಣ ಇಲಾಖೆ ಪರವಾಗಿ ಸುಧೀಶ ನಾಯ್ಕ ಟ್ರೋಫಿ ಪಡೆದುಕೊಂಡರು. ರನ್ನರ್ ಅಪ್ ಪ್ರಶಸ್ತಿ ಹೆಸ್ಕಾಂ ಪರವಾಗಿ ಶ್ರೀಪಾದ ನಾಯ್ಕ ಹಾಗೂ ತಂಡ ಟ್ರೋಫಿ ಪಡೆದುಕೊಂಡರು.
ವಕೀಲರ ಸಂಘದ ಸದಸ್ಯರಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತ್ತು.
ವಕೀಲರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.