ಕನ್ನಡಪ್ರಭ ವಾರ್ತೆ ಹಾಸನ
ನಗರದ ಕೆ.ಆರ್.ಪುರಂನಲ್ಲಿರುವ ಶ್ರೀ ಶಂಕರ ಮಠದಲ್ಲಿ ಪತಂಜಲಿ ಪರಿವಾರ ಕರ್ನಾಟಕದ ವತಿಯಿಂದ ಪೂಜ್ಯ ಸಾದ್ವಿ ದೇವಪ್ರಿಯ ಮಾತಾ ಜೀ ಹಾಗೂ ಪೂಜ್ಯ ಸ್ವಾಮಿ ಪರಮಾರ್ಥ ದೇವ ಜೀ ಅವರ ದಿವ್ಯ ಸಾನ್ನಿಧ್ಯದಲ್ಲಿ ಮಹಾ ಸತ್ಸಂಗ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗ ಕೇವಲ ದೇಹಾರೋಗ್ಯಕ್ಕೆ ಮಾತ್ರವಲ್ಲ, ಮನಸ್ಸು ಮತ್ತು ಆತ್ಮಶುದ್ಧಿಗೂ ಅವಶ್ಯಕವಾಗಿದೆ. ಸನಾತನ ಧರ್ಮದ ಉಳಿವಿಗಾಗಿ ಯೋಗದೊಂದಿಗೆ ಯೋಗದ ಮಾರ್ಗದಲ್ಲೇ ಸಾಗಬೇಕು ಎಂದು ಕರೆ ನೀಡಿದರು. ಮಾನವೀಯತೆಯೇ ಮನುಷ್ಯನ ಅಸ್ತಿತ್ವದ ಮೂಲ ಎಂದು ತಿಳಿಸಿದ ಸ್ವಾಮಿ ಪರಮಾರ್ಥ ದೇವಜೀ, ಲೋಕದಲ್ಲಿ ಪಶುಸ್ವಭಾವದಂತೆ ಬದುಕುವವರು, ಮನುಷ್ಯರಂತೆ ಬದುಕುವವರು ಹಾಗೂ ದೇವರಂತೆ ಜೀವನ ಸಾಗಿಸುವವರು ಎಂಬ ಮೂರು ರೀತಿಯ ಜನರು ಇರುತ್ತಾರೆ ಎಂದರು.
ಎಲ್ಲರೂ ಸಾಧು, ಸನ್ಯಾಸಿಗಳಾಗಲು ಸಾಧ್ಯವಿಲ್ಲವಾದರೂ, ಉತ್ತಮ ಮನುಷ್ಯರಾಗಿ ಮಾನವೀಯತೆಯಿಂದ ಬದುಕಿದರೆ ಅದೇ ಶ್ರೇಷ್ಠ ಜೀವನ ಎಂದು ಹೇಳಿದರು.ದೇಶದ ಸಂಸ್ಕೃತಿ, ಆಚಾರ- ವಿಚಾರ ಹಾಗೂ ಪರಂಪರೆಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ಸ್ವದೇಶಿ ಚಿಂತನೆ ಅಳವಡಿಸಿಕೊಂಡು ಬದುಕುವುದರಿಂದ ಅದು ದೊಡ್ಡ ಮಟ್ಟದ ದೇಶಸೇವೆಯೇ ಆಗುತ್ತದೆ ಎಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಹರಿದ್ವಾರ ಪತಂಜಲಿ ಯೋಗ ಪೀಠದ ಸಾದ್ವಿ ದೇವಪ್ರಿಯಾ ದೀದೀಜಿ ಮಾತನಾಡಿ, ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಎಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು. ದೇಶದ ಸಂಸ್ಕೃತಿ ಮತ್ತು ಆಚಾರ- ವಿಚಾರಗಳನ್ನು ಕಾಪಾಡಿಕೊಂಡು, ಸ್ವದೇಶಿ ಚಿಂತನೆ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜ ಸದೃಢವಾಗುತ್ತದೆ ಎಂದರು.
ಮಹಾ ಸತ್ಸಂಗಕ್ಕೂ ಮೊದಲು ಅಗ್ನಿಹೋತ್ರದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು, ಯೋಗಾಸಕ್ತರು ಹಾಗೂ ಪತಂಜಲಿ ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.